ನವದೆಹಲಿ: 17ನೇ ಲೋಕಸಭೆಯ ಮೊದಲ ಅಧಿವೇಶನದ ಎರಡನೇ ದಿನವಾದ ಇಂದು ವಿಪಕ್ಷಗಳ ಜೈ ಶ್ರೀರಾಮ್, ವಂದೇ ಮಾತರಂ ಘೋಷಣೆಗಳ ನಡುವೆಯೇ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದರು.
ಪ್ರಮಾಣ ವಚನ ಸ್ವೀಕರಿಸಲು ಅಸಾದುದ್ದೀನ್ ಓವೈಸಿ ಅವರ ಹೆಸರು ಕರೆಯುತ್ತಿದ್ದಂತೆಯೇ ವಿರೋಧ ಪಕ್ಷಗಳ ಸಂಸದರ ಜೈಶ್ರಿರಾಮ್, ವಂದೇ ಮಾತರಂ ಘೋಷಣೆಗಳು ಓವೈಸಿ ಪಾತ್ರಗಳಿಗೆ ಸಹಿ ಹಾಕುವವರೆಗೂ ಮುಂದುವರೆದವು. ಇಷ್ಟಾದರೂ ವಿಚಲಿತಗೊಳ್ಳದ ಓವೈಸಿ, ಮತ್ತಷ್ಟು ಜೋರಾಗಿ ಘೋಷಣೆಗಳನ್ನು ಕೂಗುವಂತೆ ಸಂಸದರಿಗೆ ಸನ್ನೆ ಮಾಡಿ ಹೇಳಿದ್ದು ವಿಶೇಷವಾಗಿತ್ತು. ಉರ್ದು ಭಾಷೆಯಲ್ಲಿ ಪ್ರಮಾಣವಚನ ಸ್ವಿಕಾರ ಮಾಡಿದ ಓವೈಸಿ, ಕಡೆಯಲ್ಲಿ ಜೈ ಭೀಮ್, ಅಲ್ಲಾ-ಓ-ಅಕ್ಬರ್ ಮತ್ತು ಜೈ ಭಾರತ ಎಂದು ಹೇಳಿದರು.
ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, "ಸದನದಲ್ಲಿ ನಡೆಯುವ ಇಂತಹ ಘಟನೆಗಳು ತಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನನ್ನನ್ನು ನೋಡಿದ ಕೂಡಲೇ ಅವರಿಗೆ ಇಂತಹ ವಿಷಯಗಳು ನೆನಪಿಗೆ ಬರುವುದು ಒಳ್ಳೆಯದು. ಹಾಗೆಯೇ ಬಿಹಾರದ ಮುಜಾಫರಪುರದಲ್ಲಿ ಮಕ್ಕಳ ಸಾವನ್ನಪ್ಪುತ್ತಿರುವುದೂ ಅವರಿಗೆ ನೆನಪಿದೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು. ಬಿಹಾರದಲ್ಲಿ ಕಳೆದ ಒಂದು ತಿಂಗಳಲ್ಲಿ ಮೆದುಳು ಜ್ವರದಿಂದ ಸುಮಾರು 120ಮಕ್ಕಳು ಸಾವನ್ನಪ್ಪಿದ್ದಾರೆ.