ಒಂದೇ ಕ್ಲಿಕ್'ನಲ್ಲಿ ಪಂಚರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ

ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ. ಆದರೆ ಇತರ ಪಕ್ಷಗಳ ಸ್ಥಿತಿ ಏನು? ಇದನ್ನು ತಿಳಿಯಲು ಈ ಚುನಾವಣಾ ಅಂಕಿ-ಅಂಶಗಳನ್ನು ನೋಡಿ.

Last Updated : Dec 12, 2018, 02:01 PM IST
ಒಂದೇ ಕ್ಲಿಕ್'ನಲ್ಲಿ ಪಂಚರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ title=

ನವದೆಹಲಿ: ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಘೋಷಿಸಲ್ಪಟ್ಟಿದೆ. ದೀರ್ಘಾವಧಿಯ ನಿರೀಕ್ಷೆಯ ನಂತರ ಕಾಂಗ್ರೆಸ್ ನಲ್ಲಿ ಮಂದಹಾಸ ಮೂಡಿದೆ. 5 ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ 3 ರಾಜ್ಯಗಳಲ್ಲಿ ಗೆಲುವು ಸಾಧಿಸಿರುವ್ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಬಿಜೆಪಿ ಸೇರಿದಂತೆ ಇತರ ಪಕ್ಷಗಳು ಯಾವ ಯಾವ ರಾಜ್ಯದಲ್ಲಿ ಎಷ್ಟು ಸ್ಥಾನ ಪಡೆದರು. ಫಲಿತಾಂಶ ಇಲ್ಲಿದೆ ...

ಛತ್ತೀಸ್​ಗಢ ಚುನಾವಣಾ ಫಲಿತಾಂಶಗಳನ್ನು ನೋಡೋಣ:
ಛತ್ತೀಸ್​ಗಢದ 90 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 68 ಸ್ಥಾನಗಳಲ್ಲಿ ಗೆದ್ದು ಪ್ರಚಂಡ ಬಹುಮತ ಗಳಿಸುವ ಮೂಲಕ ಕಾಂಗ್ರೆಸ್​ ಗೆಲುವಿನ ನಗೆ ಬೀರಿದೆ. ಸತತ 15 ವರ್ಷ ಛತ್ತೀಸ್​ಗಢದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಭಾರೀ ಮುಖಭಂಗ ಅನುಭವಿಸಿದ್ದು, ಕೇವಲ 15 ಸ್ಥಾನಗಳಲ್ಲಿ ಗೆಲುವು ತನ್ನದಾಗಿಸಿಕೊಂಡಿದೆ. ಬಿಎಸ್​ಪಿ 2 ಸ್ಥಾನ ಗಳಿಸಿದ್ದರೆ, ಜನತಾ ಕಾಂಗ್ರೆಸ್ 5 ಸ್ಥಾನಗಳಲ್ಲಿ ಗೆದ್ದಿದೆ. 

ಕೊನೆ ಕ್ಷಣದವರೆಗೂ ಕುತೂಹಲ ಮೂಡಿಸಿದ್ದ ಮಧ್ಯಪ್ರದೇಶ ಚುನಾವಣಾ ಫಲಿತಾಂಶ:
ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಮತಎಣಿಕೆ ಕ್ಷಣ ಕ್ಷಣಕ್ಕೂ ಭಾರೀ ಕುತೂಹಲ ಮೂಡಿಸಿತ್ತು. ಇಡೀ ದೇಶದ ಕಣ್ಣು ಮಧ್ಯಪ್ರದೇಶ ಚುನಾವಣಾ ಫಲಿತಾಂಶದ ಮೇಲೆ ಕೇಂದ್ರೀಕೃತವಾಗಿತ್ತು. ಕೊನೇ ಕ್ಷಣದವರೆಗೂ ಕಾಂಗ್ರೆಸ್-ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಒಟ್ಟು 230 ಸ್ಥಾನಗಳ ಪೈಕಿ ಕಾಂಗ್ರೆಸ್‌ 114 ಸ್ಥಾನಗಳಲ್ಲಿ ಗೆದ್ದಿದೆ. ಬಿಜೆಪಿ 109 ಸ್ಥಾನಗಳಲ್ಲಿ ಮಾತ್ರ ಗೆಲ್ಲಲು ಶಕ್ತವಾಗಿದೆ. ಬಿಎಸ್‌ಪಿ 2, ಎಸ್‌ಪಿ 1, ಸ್ವತಂತ್ರರು 4 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.

 

ರಾಜಸ್ಥಾನ ಚುನಾವಣಾ ಫಲಿತಾಂಶ:
ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ (Rajasthan elections 2018) ಕಾಂಗ್ರೆಸ್ ಒಟ್ಟು 199 ಕ್ಷೇತ್ರಗಳ ಪೈಕಿ 99 ಕ್ಷೇತ್ರಗಳಲ್ಲಿ ಜಯಗಳಿಸಿದ್ದು, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ 73 ಸ್ಥಾನಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದೆ. ಬಹುಜನ ಸಮಾಜ ಪಕ್ಷ (ಬಿಎಸ್​ಪಿ) ಆರು ಸ್ಥಾನಗಳನ್ನು ಪಡೆದರೆ, ಇತರರು 21 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಬಹುಮತಕ್ಕೆ ಕೇವಲ ಒಂದೇ ಒಂದು ಹೆಜ್ಜೆ ಹಿಂದಿದ್ದ ಕಾಂಗ್ರೆಸ್ ಪಕ್ಷಕ್ಕೆ ಬಿಎಸ್​ಪಿ ಬೆಂಬಲ ಸೂಚಿಸಿದೆ. 

ತೆಲಂಗಾಣದಲ್ಲಿ ಮುಂದುವರೆದ ಕೆಸಿಆರ್ ಜಾದೂ:
ತೆಲಂಗಾಣದಲ್ಲಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್​ಎಸ್(ತೆಲಂಗಾಣ ರಾಷ್ಟ್ರೀಯ ಸಮಿತಿ) ಭರ್ಜರಿ ಗೆಲುವು ಸಾಧಿಸಿದೆ. ಒಟ್ಟು 119 ಸ್ಥಾನಗಳ ಪೈಕಿ ಟಿಆರ್​ಎಸ್  88 ಸ್ಥಾನಗಳನ್ನು ಗೆದ್ದು ಬೀಗಿದರೆ, ಕಾಂಗ್ರೆಸ್ 19 ಸ್ಥಾನಗಳನ್ನು ಪಡೆದು ಎರಡನೇ ಸ್ಥಾನದಲ್ಲಿದೆ. ಎಐಎಂಐಎಂ ಪಕ್ಷ 7 ಸ್ಥಾನಗಳಲ್ಲಿ ಗೆದ್ದಿದೆ. ಉಳಿದಂತೆ ಬಿಜೆಪಿ 1, ಟಿಡಿಪಿ 2 ಮತ್ತು ಇತರೆ ಪಕ್ಷಗಳು 2 ಸ್ಥಾನದಲ್ಲಿ ಗೆದ್ದಿದೆ. 

ಮಿಜೋರಾಂನಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಅಧಿಕಾರಕ್ಕೆ:
ಮಿಜೋರಾಂನಲ್ಲಿ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ಎಫ್) ಗೆದ್ದಿದೆ. ರಾಜ್ಯದ 40 ಸ್ಥಾನಗಳಲ್ಲಿ ಎಂಎನ್ಎಫ್ 26 ಸ್ಥಾನಗಳನ್ನು ಗೆದ್ದಿದೆ. ಇಲ್ಲಿ ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್ ಸೋಲನುಭವಿಸಿದೆ. ಕಾಂಗ್ರೆಸ್ ಕೇವಲ 5 ಸ್ಥಾನಗಳನ್ನು ಮಾತ್ರ ಗೆಲ್ಲಲು ಶಕ್ತವಾಗಿದೆ. ರಾಜ್ಯದಲ್ಲಿ ಎಂಎನ್ಎಫ್ 37.6 ರಷ್ಟು ಮತಗಳನ್ನು ಪಡೆದರೆ, ಕಾಂಗ್ರೆಸ್ 30.2 ರಷ್ಟು ಮತಗಳನ್ನು ಪಡೆದುಕೊಂಡಿತು.

ಮಿಜೋರಾಂನಲ್ಲಿ ಬಿಜೆಪಿ ಮೊದಲ ಬಾರಿಗೆ ಖಾತೆ ತೆರೆದಿದ್ದು ಒಂದು ಸ್ಥಾನದಲ್ಲಿ ಗೆದ್ದಿದೆ.

Trending News