ಕೋಟಾ: ಜೀವನ ಕಲಿಸುವ ಪಾಠಕ್ಕಿಂತ ಉತ್ತಮ ಪಾಠ ಮತ್ತೊಂದಿಲ್ಲ ಎನ್ನುತ್ತಾರೆ ಹಿರಿಯರು. ಹಲವು ಬಾರಿ ಅದು ಎಷ್ಟು ಸತ್ಯ ಎಂದೆನಿಸುತ್ತದೆ. ಅನೇಕ ಬಾರಿ ಅಪಘಾತವೂ ಪಾಠ ಕಲಿಸುತ್ತದೆ. ಅದು ಜೀವನದುದ್ದಕ್ಕೂ ನಮ್ಮನ್ನು ಪ್ರೇರೇಪಿಸುತ್ತದೆ. ಅದುವೇ ಇತರರಿಗೆ ಒಳ್ಳೆಯದನ್ನು ಮಾಡಲು ಪ್ರೇರೇಪಿಸುತ್ತದೆ. ಇಂತಹ ಒಂದು ಘಟನೆ ರಾಜಸ್ಥಾನದ ಕೋಟಾದಲ್ಲಿ ಸಂಭವಿಸಿದೆ. ತನ್ನ ಮಡದಿಯ ಮರಣದಿಂದ ಪಾಠ ಕಲಿತಿದ್ದ ಒಬ್ಬ ವ್ಯಕ್ತಿಯು, ಮಗನ ಅಂಗಾಂಗಗಳನ್ನು ದಾನ ಮಾಡಿದ್ದಾನೆ.
ವಾಸ್ತವವಾಗಿ, ಕೋಟಾ ದದಾಬರಿ ನಿವಾಸಿ ಯುವಕ ವಿಶಾಲ್ ಕಪೂರ್ ಅವರ ಬ್ರೈನ್(ಮೆದುಳು) ಡೆಡ್ ಆಗಿರುವುದಾಗಿ ವೈದ್ಯರು ಘೋಷಿಸಿದರು. ಆಗ ಆ ಯುವಕನ ಅಂಗಾಂಗ ದಾನದ ಬಗ್ಗೆ ಕುಟುಂಬವು ನಿರ್ಧರಿಸಿದೆ. ಬಳಿಕ ವೈದ್ಯಕೀಯ ಕಾಲೇಜ್ ಆಡಳಿತವನ್ನು ಸಂಪರ್ಕಿಸಿದ್ದಾರೆ. ಈ ವಿಷಯದ ಗಂಭೀರತೆಯನ್ನರಿತು ಕಾಲೇಜು ಸಮಿತಿಯು ತಡ ರಾತ್ರಿವರೆಗೆ ಸಮಾಲೋಚನೆ ನಡೆಸಿ ಖಾಸಗಿ ಆಸ್ಪತ್ರೆಗೆ ಕಳುಹಿಸಿದೆ. ತನಿಖೆ ಮತ್ತು ಕಾಗದ ಪ್ರಕ್ರಿಯೆ ಮುಗಿದ ಬಳಿಕ ವಿಶಾಲ್ ಅನ್ನು ಜೈಪುರಕ್ಕೆ ಕೊಂಡೊಯ್ಯಲು ನಿರ್ಧರಿಸಲಾಯಿತು.
ಜೈಪುರಕ್ಕೆ ಹೋದ ಬಳಿಕ ಅಲ್ಲಿ ವಿಶಾಲ್ ನ ಲಿವರ್, ಕಿಡ್ನಿ ಮತ್ತು ಹೃದಯ ಕಸಿ ಟ್ರಾನ್ಸ್ ಪ್ಲಾಂಟ್ ಮಾಡಲಾಯಿತು. 19 ವರ್ಷದ ವಿಶಾಲ್ ಕಪೂರ್ ಬಿಸಿಎ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದರು. ವಿಶಾಲ್ ಮಾರ್ಚ್ 16ರಂದು ಸ್ನೇಹಿತರೊಂದಿಗೆ ಬೈಕ್ ನಲ್ಲಿ ಹೋಗುವಾಗ ಹ್ಯಾಂಗಿಂಗ್ ಸೇತುವೆಯ ಸಮೀಪ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡನು. ತಕ್ಷಣ ಚಿಕಿತ್ಸೆಗಾಗಿ ಆತನನ್ನು ಆಸ್ಪತ್ರೆಗೆ ಕರೆತರಲಾಯಿತು. ತಲೆಗೆ ಗಂಭೀರ ಪೆಟ್ಟಾಗಿದ್ದರ ಪರಿಣಾಮ ವೈದ್ಯರು ಆತನನ್ನು ICU ಗೆ ದಾಖಲಿಸಿದರು.
ಸೋಮವಾರ ರಾತ್ರಿ ವೈದ್ಯರ ತಂಡ ವಿಶಾಲ್ ಬ್ರೈನ್(ಮೆದುಳು) ಡೆಡ್ ಆಗಿದೆ ಎಂದು ಘೋಷಿಸಿದರು. ವಿಶಾಲ್ ಅನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ವಿಶಾಲ್ ಮೆದುಳು ಸತ್ತಿದೆ ಎಂದು ವೈದ್ಯರು ಘೋಷಿಸಿದ ಬಳಿಕ ಕುಟುಂಬವು ಅಂಗಾಂಗ ದಾನದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ವಿಶಾಲ್ ನ ಅಂಗಾಂಗಗಳು ಬೇರೆಯವರ ಜೀವನಕ್ಕೆ ದಾರಿಯಾಗಬಹುದು ಎಂಬ ಅಭಿಲಾಷೆ ಕುಟುಂಬದವರದು.
ಕೋಟಾ ಮೆಡಿಕಲ್ ಕಾಲೇಜಿನಲ್ಲಿ ಸಂಪನ್ಮೂಲ ಕೊರತೆ:
ಕೋಟಾ ಮೆಡಿಕಲ್ ಕಾಲೇಜಿನಲ್ಲಿ ಸಂಪನ್ಮೂಲ ಕೊರತೆ ಇದ್ದು, ಅಂಗಾಂಗ ಕಸಿ ಮಾಡುವಿಕೆ ಸೌಲಭ್ಯವನ್ನು ಹೊಂದಿಲ್ಲದ ಕಾರಣ, ಕಾಗದ ಪ್ರಕ್ರಿಯೆ ಮೂಲಕ ವಿಶಾಲ್ ಅನ್ನು ಜೈಪುರಕ್ಕೆ ಕೊಂಡೊಯ್ಯಲು ನಿರ್ಧರಿಸಲಾಯಿತು.
ಹೆಂಡತಿಯ ಮರಣದ ಅರಿವು:
6 ವರ್ಷಗಳ ಹಿಂದೆ ಮೂತ್ರ ಪಿಂಡ ಬದಲಾಯಿಸಲಾಗದೆ ವಿಶಾಲ್ ತಾಯಿ ಮೃತಪಟ್ಟಿರುವುದಾಗಿ ವಿಶಾಲ್ ತಂದೆ ನರೇಶ್ ಕಪೂರ್ ಹೇಳಿದ್ದಾರೆ. ಅಂಗಾಂಗ ದಾನದಿಂದ 7-8 ಜನರು ಹೊಸ ಜೀವನವನ್ನು ಪಡೆಯಬಹುದು. ವಿಶಾಲ್ ದೇಹ ವೆಂಟಿಲೇಟರ್ ಸಹಾಯದಿಂದ ಜೀವಂತವಾಗಿದೆ. ಇವನ ಅಂಗಾಂಗ ದಾನ ಮಾಡುವುದರಿಂದ ಕೆಲವು ಜನರು ಜೀವನ ಪಡೆಯುತ್ತಾರೆ. ಹಾಗಾಗಿ ಆಡಳಿತವನ್ನು ಸಂಪರ್ಕಿಸಿದೆವು. ವಿಶಾಲ್ ಈ ಜಗತ್ತಿನಲ್ಲಿ ಇಲ್ಲದಿರಬಹುದು, ಆದರೆ ಅವನ ಅಂಗಾಂಗ ದಾನ ಮಾಡುವುದರಿಂದ ಕೆಲವರ ಜೀವನ ಹಸನಾಗುತ್ತದೆ. ವಿಶಾಲ್ ಒಂದಲ್ಲಾ ಒಂದು ರೂಪದಲ್ಲಿ ನಮ್ಮೊಂದಿಗಿರುತ್ತಾನೆ ಎಂದು ತಿಳಿಸಿದ್ದಾರೆ.