ಇಸ್ಲಾಮಾಬಾದ್: ಲಾಹೋರ್ ಮತ್ತು ವಾಗಾ ರೈಲು ನಿಲ್ದಾಣದ ನಡುವಿನ ಶಟಲ್ ರೈಲು ಸೇವೆ 22 ವರ್ಷಗಳ ನಂತರ ಭಾನುವಾರ ಪುನರಾರಂಭಗೊಂಡಿದೆ. ಈ ರೈಲು ಪ್ರತಿದಿನ ಮೂರು ಸುತ್ತಿನ ಪ್ರಯಾಣಗಳನ್ನು ಪೂರ್ಣಗೊಳಿಸುತ್ತದೆ. ಈ ಸಂದರ್ಭದಲ್ಲಿ 1,000 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಪ್ರಯಾಣದ ಸೌಲಭ್ಯವನ್ನು ಒದಗಿಸುತ್ತದೆ.
ಶುಲ್ಕವನ್ನು ಪಿಕೆಆರ್(PKR) 30 ಕ್ಕೆ ನಿಗದಿಪಡಿಸಲಾಗಿದೆ ಎಂದು ಡಾನ್ ವರದಿ ಮಾಡಿದೆ. ಈ ಸೇವೆಯು ವಾಗಾದಲ್ಲಿ ಧ್ವಜಾರೋಹಣವನ್ನು ವೀಕ್ಷಿಸಲು ಉದ್ದೇಶಿಸಿರುವ ನೂರಾರು ಸಂದರ್ಶಕರಿಗೆ ತೊಂದರೆಯಿಲ್ಲದ ಪ್ರಯಾಣ ಅಥವಾ ಜಲ್ಲೊ ಪಾರ್ಕ್‌ಗೆ ಭೇಟಿ ನೀಡಲು ಉದ್ದೇಶಿಸಿರುವ ನೂರಾರು ಪ್ರವಾಸಿಗರಿಗೆ ನೆಮ್ಮದಿಯಾಗಿ ಪ್ರಯಾಣಿಸಲು ಅನುಕೂಲ ಕಲ್ಪಿಸಲಿದೆ ಎಂದು ನಂಬಲಾಗಿದೆ.
"ನಾವು ಲಾಹೋರ್ ಮೆಟ್ರೋಪಾಲಿಟನ್ ನಗರದ ಸಂಪರ್ಕವನ್ನು ಅದರ ಉಪನಗರಗಳೊಂದಿಗೆ ರೈಲು ಮಾರ್ಗಗಳ ಮೂಲಕ ಪ್ರಾರಂಭಿಸಲು ಅಥವಾ ಪುನರುಜ್ಜೀವನಗೊಳಿಸಲು ಬಯಸುತ್ತೇವೆ. ಲಾಹೋರ್-ವಾಗಾ ನಡುವಿನ ರೈಲು ಸೇವೆ ಅದರ ಮೊದಲ ಹೆಜ್ಜೆಯಾಗಿದ್ದು, ಮುಂದಿನ 15 ದಿನಗಳಲ್ಲಿ ಲಾಹೋರ್‌ನಿಂದ ರೈವಿಂಡ್‌ಗೆ ಮತ್ತೊಂದು ರೈಲು ಬರಲಿದೆ" ಎಂದು ಸೇವೆಯನ್ನು ಉದ್ಘಾಟಿಸಿದ ನಂತರ ಪಾಕಿಸ್ತಾನ ರೈಲ್ವೆ ಸಚಿವ ಶೇಖ್ ರಶೀದ್ ಹೇಳಿದರು.
ರೈಲು ಸೇವೆ 1997 ರವರೆಗೆ ಕಾರ್ಯನಿರ್ವಹಿಸುತ್ತಿತ್ತು. ಆದರೆ ಕೆಲವು ಕಾರ್ಯಾಚರಣೆ ಮತ್ತು ಭದ್ರತಾ ಕಾರಣಗಳಿಂದ ಈ ಸೇವೆಯನ್ನು ಮುಚ್ಚಲಾಯಿತು.