ನವದೆಹಲಿ: ಏಳು ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣೆ 2019ರ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. 17ನೇ ಲೋಕಸಭಾ ಚುನಾವಣೆಯ ಮತಎಣಿಕೆ ಇಂದು ಬೆಳಿಗ್ಗೆ 8 ಗಂಟೆಯಿಂದ ನಡೆಯಲಿದೆ.
2019 ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ವ್ಯಾಯಾಮವಾಗಿದ್ದು, ಒಂದೂವರೆ ತಿಂಗಳಗಳ ಕಾಲ ಏಳು ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣೆ ಮೇ 19 ರಂದು ಅಂತಿಮಗೊಂಡಿತ್ತು. 2019 ರ ಲೋಕಸಭಾ ಚುನಾವಣೆಯಲ್ಲಿ ಸುಮಾರು 50 ಕೋಟಿ ಜನರು ಪಾಲ್ಗೊಂಡಿದ್ದಾರೆ. ಇದೇ ಮೊದಲ ಬಾರಿಗೆ ಲೋಕಸಭಾ ಕ್ಷೇತ್ರದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 5 ಇವಿಎಂಗಳ ಮತಗಳನ್ನು ವಿವಿಪ್ಯಾಟ್ ನೊಂದಿಗೆ ತಾಳೆ ನೋಡಲಿದ್ದು, ಫಲಿತಾಂಶ 4 ಗಂಟೆ ತಡವಾಗಲಿದೆ ಎಂದು ಆಯೋಗ ತಿಳಿಸಿದೆ.
2014 ರಲ್ಲಿ ಮೊದಲ ಬಾರಿಗೆ ಕಾಂಗ್ರೆಸೇತರ ಪಕ್ಷವಾಗಿ ಮೋದಿ ನೇತೃತ್ವದಲ್ಲಿ ಪೂರ್ಣ ಬಹುಮತವನ್ನು ಪಡೆದು ಅಧಿಕಾರಕ್ಕೆ ಬಂದಿತು. ಆದರೆ ಈ ಬಾರಿ ಬಿಜೆಪಿಗೆ ಮತ್ತೆ ಅಧಿಕಾರ ಲಭಿಸುವುದು ಅಷ್ಟು ಸುಲಭವಲ್ಲ ಎಂದು ಹೇಳಲಾಗುತ್ತಿದೆ. ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಮೋದಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ತಿಳಿಸಿವೆ.
ಮತ್ತೊಂದೆಡೆ, ಶತಾಯಗತಾಯ ಬಿಜೆಪಿಯನ್ನು ಅಧಿಕಾರದಿಂದ ದೂರಯಿಡುವ ಪಣ ತೊಟ್ಟಿರುವ ಪ್ರತಿಪಕ್ಷಗಳಿಂದ ಮಹಾಘಟಬಂಧನ್ ಸದ್ದು ಮಾಡುತ್ತಿದೆ. ದೇಶದಲ್ಲಿ ಮತ್ತೆ ಕಮಲ ಅರಳುವುದೇ ಅಥವಾ ಪ್ರತಿಪಕ್ಷಗಳು ಒಗ್ಗಟ್ಟಾಗಿ ಸರ್ಕಾರ ರಚಿಸುವರೇ? ಈ ಎಲ್ಲಾ ಕುತೂಹಲಕಾರಿ ಪ್ರಶ್ನೆಗಳಿಗೆ ಇಂದು ಉತ್ತರ ದೊರೆಯಲಿದೆ.