ಕೋಲ್ಕತ್ತಾ: ಮೇ 30 ರಂದು ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣ ವಚನ ಸಮಾರಂಭಕ್ಕೆ ತಾವು ಹಾಜರಾಗುವುದಿಲ್ಲ ಎಂದು ಒಂದು ದಿನದ ಮೊದಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಟ್ವೀಟ್ ಮಾಡಿದ್ದಾರೆ.
'ಪ್ರಮಾಣ ವಚನ ಎಂಬುದು ಪ್ರಜಾಪ್ರಭುತ್ವದ ಉತ್ಸವವನ್ನು ಸಂಭ್ರಮಿಸುವ ಕ್ಷಣ. ಯಾವುದೇ ಪಕ್ಷ ಅದನ್ನು ರಾಜಕೀಯಕ್ಕಾಗಿ ಬಳಸಿಕೊಂಡಿದ್ದೇ ಆದರೆ ಅದರ ಮೌಲ್ಯ ಕುಸಿಯುತ್ತದೆ,' ಎಂಬ ಶೀರ್ಷಿಕೆಯೊಂದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಪತ್ರ ಬರೆದಿದ್ದಾರೆ.
"ಅಭಿನಂದನೆಗಳು, ನೂತನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಿ 'ಸಾಂವಿಧಾನಿಕ ಆಹ್ವಾನವನ್ನು ಒಪ್ಪಿ ಪ್ರಮಾಣ ವಚನ ಸಮಾರಂಭಕ್ಕೆ ಹಾಜರಾಗಲು ನಾನು ನಿರ್ಧರಿಸಿದ್ದೆ. ಆದರೆ ಕಳೆದ ಒಂದು ಘಂಟೆಯಲ್ಲಿ ರಾಜ್ಯದಾದ್ಯಂತ ಮತದಾನ-ಸಂಬಂಧಿತ ಹಿಂಸಾಚಾರದಲ್ಲಿ 50 ಕ್ಕೂ ಅಧಿಕ ಜನರನ್ನು ಕೊಲೆ ಮಾಡಲಾಗಿದೆ ಎಂದು ಬಿಜೆಪಿ ಹೇಳಿಕೊಂಡಿರುವ ಮಾಧ್ಯಮ ವರದಿಗಳನ್ನು ನೋಡುತ್ತಿದ್ದೇನೆ. ಇದು ಸಂಪೂರ್ಣವಾಗಿ ಸುಳ್ಳಾಗಿದ್ದು, ಬಂಗಾಳದಲ್ಲಿ ರಾಜಕೀಯ ಹತ್ಯೆಗಳಾಗಿಲ್ಲ. ಸಾಮಾನ್ಯ ವೈರತ್ವದ ಕಾರಣದಿಂದಾಗಿ ಈ ಸಾವು ಸಂಭವಿಸಿರಬಹುದು. ಕುಟುಂಬ ಜಗಳಗಳು, ವೈಯಕ್ತಿಕ ದ್ವೇಷ ಮತ್ತು ಇತರ ಕಾರಣಗಳಿಂದ ಈ ಸಾವು ಸಂಭವಿಸಿದೆ. ರಾಜಕೀಯಕ್ಕೂ ಈ ಹತ್ಯೆಗಳಿಗೂ ಯಾವುದೇ ನಂಟಿಲ್ಲ. ನಮ್ಮಲ್ಲಿ ಅಂತಹ ಸಾಕ್ಷ್ಯ ಗಳೂ ಕೂಡ ಇಲ್ಲ. ಕ್ಷಮಿಸಿ ಮೋದಿಜೀ... ಪ್ರಮಾಣವಚನ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಲು ಸಾಧ್ಯವಿಲ್ಲ" ಎಂದು ಅವರು ಬರೆದುಕೊಂಡಿದ್ದಾರೆ.
The oath-taking ceremony is an august occasion to celebrate democracy, not one that should be devalued by any political party pic.twitter.com/Mznq0xN11Q
— Mamata Banerjee (@MamataOfficial) May 29, 2019
42 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜೀಯ ತೃಣಮೂಲ ಪಕ್ಷ ಹಾಗೂ ಬಿಜೆಪಿ ನಡುವೆ ತೀವ್ರ ಹಣಾಹಣಿ ನಡೆದಿತ್ತು. ಹಲವಾರು ಹಿಂಸಾಚಾರದ ನಡುವೆಯೂ ಕೂಡ ಬಂಗಾಳದಲ್ಲಿ ಹೆಚ್ಚಿನ ಪ್ರಮಾಣದ ಮತದಾನ ನಡೆದಿತ್ತು. ಬಿಜೆಪಿ 18 ಸ್ಥಾನಗಳನ್ನು ಗೆಲ್ಲುವುದರ ಮೂಲಕ ತೃಣ ಮೂಲ ಪಕ್ಷಕ್ಕೆ ನೇರ ಪ್ರತಿಸ್ಪರ್ಧಿ ಎನ್ನುವುದನ್ನು ಈ ಚುನಾವಣೆಯಲ್ಲಿ ಸ್ಪಷ್ಟಪಡಿಸಿತ್ತು. ಅದಕ್ಕೆಲ್ಲಾ ತಾತ್ಕಾಲಿಕ ವಿರಾಮ ನೀಡಿ, ಪ್ರಧಾನಮಂತ್ರಿ ನರೇಂದ್ರ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಅವರಿಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರು.