ನವದೆಹಲಿ: ದೆಹಲಿಯ ಲೈಫ್ ಲೈನ್ ಎಂದು ಕರೆಯಲ್ಪಡುವ ರಾಜೀವ್ ಚೌಕ ಮೆಟ್ರೋ ನಿಲ್ದಾಣದಲ್ಲಿ 45 ವರ್ಷದ ವ್ಯಕ್ತಿಯೊಬ್ಬ ನಿಲ್ದಾಣದ ಪ್ಲಾಟ್ಫಾರ್ಮ್ ಸಂಖ್ಯೆ 3 ರಲ್ಲಿ ಮೆಟ್ರೊ ಬರುವ ವೇಳೆ ಟ್ರ್ಯಾಕ್ ಮೇಲೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುವ ಘಟನೆ ಇಂದು ನಡೆದಿದೆ. ಘಟನೆ ಬಳಿಕ ರಾಜೀವ್ ಚೌಕ್ ನಿಂದ ಹುಡಾ ಸಿಟಿ ಸೆಂಟರ್ ನಡುವಿನ ಮೆಟ್ರೋ ಸೇವೆ ಸ್ಥಗಿತಗೊಂಡಿದೆ.
ಹುಡಾ ಸಿಟಿ ಸೆಂಟರ್ ಗೆ ಸಂಚರಿಸುವ ಮೆಟ್ರೋಗಳು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಆದರೆ ರಾಜೀವ್ ಚೌಕ್ ನಿಂದ ಸಮಯ್ಪುರ್ ವರೆಗೆ ಸಂಚರಿಸುವ ಮೆಟ್ರೋದಲ್ಲಿ ಯಾವುದೇ ತೊಂದರೆಯಿಲ್ಲ ಎನ್ನಲಾಗಿದೆ. ನ್ಯೂಸ್ ಏಜೆನ್ಸಿ ಎಎನ್ಐ ಗೆ ಲಭಿಸಿರುವ ಮಾಹಿತಿ ಪ್ರಕಾರ ಬೆಳಿಗ್ಗೆ 10 ಗಂಟೆವರೆಗೆ ಹುಡಾ ಸಿಟಿ ಸೆಂಟರ್ ಮಾರ್ಗದ ಮೆಟ್ರೋ ಸೇವೆ ಸ್ಥಗಿತಗೊಳಿಸಲಾಗಿತ್ತು.
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಆಸ್ಪತ್ರೆಗೆ ದಾಖಲು:
ಮಂಗಳವಾರ ಬೆಳಿಗ್ಗೆ, ರಾಜೀವ್ ಚೌಕ್ ನಿಲ್ದಾಣದ ಪ್ಲಾಟ್ಫಾರ್ಮ್ ನಂ. 3ರಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಪ್ರಯತ್ನಿಸಿದ ಬಗ್ಗೆ ಪ್ರಯಾಣಿಕರು ಸ್ಟೇಷನ್ ಮ್ಯಾನೇಜರ್ ಮತ್ತು ಅಧಿಕಾರಿಗಳಿಗೆ ಮಾಹಿತಿ ನೀಡಿದ ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆ ವ್ಯಕ್ತಿ ತನ್ನ ವಯಕ್ತಿಕ ಕಾರಣದಿಂದಾಗಿ ಆತ್ಮಹತ್ಯೆಗೆ ಪ್ರಯತ್ನಿಸಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.