ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆಗಸ್ಟ್ 31 ರ ಸೋಮವಾರ ನಿಧನರಾಗಿದ್ದಾರೆ. ಮಾಜಿ ಅಧ್ಯಕ್ಷರ ನಿಧನದ ಹಿನ್ನಲೆ ಕೇಂದ್ರ ಗೃಹ ಸಚಿವಾಲಯ 7 ದಿನಗಳ ರಾಷ್ಟ್ರೀಯ ಶೋಕಾಚರಣೆ ಪ್ರಕಟಿಸಿದೆ. ರಾಷ್ಟ್ರೀಯ ಶೋಕಾಚರಣೆಯ ಸಮಯದಲ್ಲಿ, ದೇಶಾದ್ಯಂತ ಇರುವ ಸರ್ಕಾರಿ ಕಟ್ಟಡಗಳ ಮೇಲೆ ತ್ರಿವರ್ಣ ಧ್ವಜವನ್ನು ಅರ್ಧಕ್ಕೆ ಇಳಿಸಲಾಗುತ್ತಿದೆ ಮತ್ತು ಯಾವುದೇ ಸರ್ಕಾರಿ ಕಾರ್ಯಕ್ರಮಗಳು ನಡೆಯುವುದಿಲ್ಲ.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನದ ಬಗ್ಗೆ ಆಗಸ್ಟ್ 31 ರಿಂದ ಸೆಪ್ಟೆಂಬರ್ 6 ರವರೆಗೆ ಭಾರತದಾದ್ಯಂತ ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಆಚರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ತನ್ನ ಆದೇಶದಲ್ಲಿ ಹೇಳಿದೆ.
ಮಾಜಿ ಅಧ್ಯಕ್ಷ ಪ್ರಣಬ್ ಮುಖರ್ಜಿ ಅವರಿಗೆ 84 ವರ್ಷ ವಯಸ್ಸಾಗಿತ್ತು. ಕಳೆದ ಹಲವು ದಿನಗಳಿಂದ ಅವರನ್ನು ಆರ್ಮಿ ರಿಸರ್ಚ್ ಅಂಡ್ ರೆಫರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅವರು ಕೆಲವು ದಿನಗಳ ಹಿಂದೆ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಂದಿನಿಂದ ಅವರು ಕೋಮಾದಲ್ಲಿದ್ದರು. ಪ್ರಣಬ್ ಮುಖರ್ಜಿ ಅವರ ಅವರ ನಿಧನದ ಬಳಿಕ ಟ್ವೀಟ್ ಮೂಲಕ ಮಾಹಿತಿ ನೀಡಿದ್ದ ಅವರ ಪುತ್ರ ಅಭಿಜೀತ್ ಮುಖರ್ಜೀ, " ನನ್ನ ತಂದೆ ಶ್ರೀ ಪ್ರಣಬ್ ಮುಖರ್ಜಿ ಕೆಲ ಸಮಯದ ಹಿಂದೆ ನಮ್ಮನ್ನು ಅಗಲಿದ್ದಾರೆ ಎಂದು ತುಂಬಿದ ಹೃದಯದಿಂದ ಸೂಚಿಸಲು ನನಗೆ ಅತೀವ ದುಃಖವಾಗುತ್ತಿದೆ. ಆರ್. ಆರ್ ಆಸ್ಪತ್ರೆಯ ವೈದ್ಯರ ಅತ್ಯುತ್ತಮ ಪ್ರಯತ್ನ ಹಾಗೂ ಇಡೀ ದೇಶದ ಜನತೆಯ ಪ್ರಾರ್ಥನೆಗಳಿಗೆ ನಾನು ಕೈಮುಗಿದು ಧನ್ಯವಾದಗಳನ್ನು ಅರ್ಪಿಸುತ್ತೇನೆ" ಎಂದಿದ್ದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಕಳೆದ ಆಗಸ್ಟ್ 10 ರಂದು ಮಾಜಿ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ ಜಾರಿಗೊಳಿಸಲಾದ ಮೆಡಿಕಲ್ ಬುಲೆಟಿನ್ ನಲ್ಲಿ ಅವರು ಆಳವಾದ ಕೊಮಾ ಸ್ಥಿತಿಗೆ ತಲುಪಿದ್ದು, ಅವರನ್ನು ವೆಂಟಿಲೆಟರ್ ಮೇಲೆ ಇರಿಸಲಾಗಿದೆ ಎಂದು ವೈದ್ಯರು ಹೇಳಿದ್ದರು. ಕಳೆದ 21 ದಿನಗಳಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೆದುಳಿನ ಶಸ್ತ್ರ ಚಿಕಿತ್ಸೆಯ ಬಳಿಕ ಅವರ ಸ್ಥಿತಿ ಇನ್ನಷ್ಟು ಗಂಭೀರವಾಗಿ ಮುಂದುವರೆದಿತ್ತು.
ಈ ಕುರಿತು ಹೇಳಿಕೆ ನೀಡಿರುವ ಆಸ್ಪತ್ರೆಯ ಅಧಿಕಾರಿಗಳು, "ನಿನ್ನೆಯಿಂದಲೇ ಪ್ರಣಬ್ ಮುಖರ್ಜಿ ಅವರ ಆರೋಗ್ಯ ಸ್ಥಿತಿ ಕುಸಿಯುತ್ತ ಬಂದಿತ್ತು" ಎಂದಿದ್ದಾರೆ. ಅಷ್ಟೇ ಅಲ್ಲ ಶ್ವಾಸಕೋಶದ ಸೋಂಕಿನ ಕಾರಣ ಅವರ ಶರೀರ ಸೇಪ್ಟಿಕ್ ಆಘಾತದ ಸ್ಥಿತಿಗೆ ಜಾರಿತ್ತು ಎಂದು ವೈದ್ಯರು ಹೇಳಿದ್ದಾರೆ.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜೀ ನಿಧನಕ್ಕೆ ಟ್ವೀಟ್ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದ ಪ್ರಧಾನಿ ನರೇಂದ್ರ ಮೋದಿ, "ಭಾರತ ರತ್ನ ಪ್ರಣಬ್ ಮುಖರ್ಜಿ ನಿಧನಕ್ಕೆ ಇಡೀ ದೇಶ ಶೋಕ ವ್ಯಕ್ತಪಡಿಸುತ್ತದೆ. ದೇಶದ ಅಭಿವೃದ್ಧಿ ಪಥದ ಮೇಲೆ ಅವರು ತಮ್ಮ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಓರ್ವ ವಿದ್ವಾನ, ಓರ್ವ ರಾಜಕೀಯ ಮುಖಂಡನಾಗಿ ಅವರಿಗೆ ಎಲ್ಲ ರಾಜಕೀಯ ಪಕ್ಷಗಳು ಹಾಗೂ ಸಮಾಜದ ಪ್ರತಿಯೊಂದು ವರ್ಗದ ಜನರಿಂದ ಸನ್ಮಾನ ಲಭಿಸಿದೆ" ಎಂದಿದ್ದಾರೆ.