ಇಂದು ನಿರ್ಮಲಾ ಸೀತಾರಾಮನ್ ಇನ್ನೊಂದು ಸುದ್ದಿಗೋಷ್ಟಿ, ಪ್ಯಾಕೇಜ್ ಬಗ್ಗೆ ಇನ್ನೊಂದಿಷ್ಟು ಮಾಹಿತಿ

ನಿನ್ನೆ ಮತ್ತು ಮೊನ್ನೆ ನಿರ್ಮಲಾ ಸೀತಾರಾಮನ್ ಉತ್ಪಾದನಾ ವಲಯಕ್ಕೆ, ವಿವಿಧ ವರ್ಗದ ಕಾರ್ಮಿಕರಿಗೆ, ಕೃಷಿಕರಿಗೆ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿನಲ್ಲಿ ಏನೇನು ಸೌಲಭ್ಯಗಳು ಸಿಗಲಿವೆ ಎಂಬ ಮಾಹಿತಿ ನೀಡಿದ್ದರು. 

Last Updated : May 15, 2020, 11:03 AM IST
ಇಂದು ನಿರ್ಮಲಾ ಸೀತಾರಾಮನ್ ಇನ್ನೊಂದು ಸುದ್ದಿಗೋಷ್ಟಿ, ಪ್ಯಾಕೇಜ್ ಬಗ್ಗೆ ಇನ್ನೊಂದಿಷ್ಟು ಮಾಹಿತಿ title=

ನವದೆಹಲಿ: ದೇಶವನ್ನು ದುಸ್ಥಿತಿಗೆ ದೂಡಿರುವ ಕೊರೊನಾವೈರಸ್ (Coronavirus) ಮತ್ತು ಲಾಕ್‌ಡೌನ್ ಪರಿಸ್ಥಿತಿಗಳನ್ನು ನಿರ್ವಹಿಸಲೆಂದು ಘೋಷಿಸಲ್ಪಟ್ಟಿರುವ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿನ ಬಗ್ಗೆ ಹಂತಹಂತವಾಗಿ ವಿವರಣೆ ನೀಡುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman)  ಇಂದು ಇನ್ನೊಂದು ಸುದ್ದಿಗೋಷ್ಟಿ ನಡೆಸಿ ಪ್ಯಾಕೇಜ್ ಬಗ್ಗೆ ಇನ್ನೊಂದಿಷ್ಟು ಮಾಹಿತಿ ನೀಡಲಿದ್ದಾರೆ.

ನಿನ್ನೆ ಮತ್ತು ಮೊನ್ನೆ ನಿರ್ಮಲಾ ಸೀತಾರಾಮನ್ ಉತ್ಪಾದನಾ ವಲಯಕ್ಕೆ, ವಿವಿಧ ವರ್ಗದ ಕಾರ್ಮಿಕರಿಗೆ, ಕೃಷಿಕರಿಗೆ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿನಲ್ಲಿ ಏನೇನು ಸೌಲಭ್ಯಗಳು ಸಿಗಲಿವೆ ಎಂಬ ಮಾಹಿತಿ ನೀಡಿದ್ದರು. ಇಂದು ವಿದೇಶಿ ಬಂಡವಾಳ ಹೂಡಿಕೆ, ವಿಮಾನಯಾನ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮತ್ತು ಕೃಷಿ ಕ್ಷೇತ್ರಗಳಿಗೆ ಪ್ಯಾಕೇಜಿನಲ್ಲಿ ಯಾವೆಲ್ಲಾ ಅನುಕೂಲ ಮಾಡಿಕೊಡಲಾಗುತ್ತದೆ ಎಂಬುದನ್ನು ತಿಳಿಸಲಿದ್ದಾರೆ.

ಕೊರೊನಾ ವೈರಸ್  ಕೋವಿಡ್ -19 (Covid-19)  ಕಾರಣಕ್ಕೆ ಚೀನಾದಲ್ಲಿ ಬಂಡವಾಳ ಹೂಡಿದ್ದ, ಹೂಡುತ್ತಿದ್ದ ಹಲವಾರು ಕಂಪನಿಗಳು ಈಗ ಆ ದೇಶದಿಂದ ಕಾಲ್ಕಿಳಲು ಪ್ರಯತ್ನಿಸುತ್ತಿವೆ. ಚೀನಾ ಹೊರತುಪಡಿಸಿ ಬೇರೆ ದೇಶಗಳಲ್ಲಿ ತಮ್ಮ ಉದ್ಯಮ ಸ್ಥಾಪಿಸಲು ಉತ್ಸುಹಕವಾಗಿವೆ. ಈ ಪರಿಸ್ಥಿತಿಯನ್ನು ಸದುಪಯೋಗ ಪಡಿಸಿಕೊಳ್ಳುವ ದೃಷ್ಟಿಯಿಂದ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿನಲ್ಲಿ ವಿದೇಶಿ ಬಂಡವಾಳ ಹೂಡಿಕೆಗೂ ಒತ್ತು ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

12% ಬದಲಿಗೆ 10% ಪಿಎಫ್ ಕಡಿತ, ನೌಕರರ ಖಾತೆಗೆ ಹೆಚ್ಚಿನ ವೇತನ

ಚೀನಾದಿಂದ ಕಾಲ್ಕೀಳುತ್ತಿರುವ ದೊಡ್ಡ ದೊಡ್ಡ  ಕಂಪನಿಗಳನ್ನು ಭಾರತದಲ್ಲಿ ತಮ್ಮ ಉದ್ಯಮ ಆರಂಭಿಸುವಂತೆ ಸೆಳೆಯಲು ಪೂರಕ ಉಪ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ‌. ಮಾನವ ಸಂಪನ್ಮೂಲದ ದೃಷ್ಟಿಯಲ್ಲಿ ಭಾರತವು ಚೀನಾದಷ್ಟೇ ಸದೃಢವಾಗಿದೆ. ಕೌಶಲ್ಯಪೂರಿತ ಮಾನವ ಸಂಪನ್ಮೂಲವೂ ಭಾರತದಲ್ಲಿದೆ‌. ವಿದೇಶಿ ಬಂಡವಾಳ ಹೂಡಿಕೆ ನಿಯಮಗಳ ವಿಷಯದಲ್ಲಿ ಭಾರತ ಇನ್ನಷ್ಟು ಫ್ಲೆಕ್ಸಿಬಕ್ ಆದರೆ ವಿದೇಶಿ ಬಂಡವಾಳ ಭರಪೂರವಾಗಿ ಹರಿದು ಬರಬಹುದು ಎಂಬ ಲೆಕ್ಕಾಚಾರ ಇದೆ. ಈ ಹಿನ್ನೆಲೆಯಲ್ಲಿ ಯಾವ ಉಪಕ್ರಮಗಳನ್ನು ಕೈಗೊಳ್ಳಲಾಗುವುದು ಎಂಬ ಮಾಹಿತಿಯನ್ನು ಇಂದಿನ‌ ತಮ್ಮ ಸುದ್ದಿಗೋಷ್ಟಿಯಲ್ಲಿ ನಿರ್ಮಲಾ ಸೀತಾರಾಮನ್ ವಿವರಿಸಬಹುದು.

ಲಾಕ್‌ಡೌನ್‌(Lockdown) ಜಾರಿಯಲ್ಲಿರುವುದರಿಂದ ಅಂತಾರಾಷ್ಟ್ರೀಯ ಮತ್ತು ದೇಶಿಯ ವಿಮಾನಯಾನ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. 50 ದಿನಗಳಿಂದ ಸಂಪೂರ್ಣವಾಗಿ ನಿಷ್ಕ್ರೀಯವಾಗಿರುವ ವಿಮಾನಯಾನವನ್ನು ಪುನರಾರಂಭಿಸಲು 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿನಲ್ಲಿ ಕೆಲವು ನೆರವು ನೀಡಬಹುದು.

ಸದ್ಯ ಭಾರತದ ವಿಮಾನಯಾನ ಕ್ಷೇತ್ರ ಲಾಕ್‌ಡೌನ್ ಹೊರತಾಗಿಯೂ ಆಶಾದಾಯಕವಾಗಿರಲಿಲ್ಲ. ಮೊದಲೇ ಕೆಟ್ಟ ಪರಿಸ್ಥಿತಿಯಲ್ಲಿದ್ದ ವಿಮಾನಯಾನ ಕಂಪನಿಗಳಿಗೆ ಲಾಕ್‌ಡೌನ್ ಮತ್ತೂ ಮಾರಕವಾಗಿ ಪರಿಣಮಿಸಿದೆ. ಇದರ ಪರಿಣಾಮ ವಿಮಾನಯಾನ ಕಂಪನಿಗಳ ಸಿಬ್ಬಂದಿಗಳ ಮೇಲೂ ಬೀರಿದೆ. ಕೆಲವು ವಿಮಾನಯಾನ ಕಂಪನಿಗಳು ತಮ್ಮ ನೌಕರರನ್ನು ಕೆಲಸದಿಂದ ತೆಗೆದಿವೆ. ಕೆಲವು ಸಂಸ್ಥೆಗಳು ಸಿಬ್ಬಂದಿಗಳ ಸಂಬಳ ಕಡಿತಗೊಳಿಸಿವೆ. ವಿಮಾನಯಾನ ವಲಯ ಪ್ರವಾಸೋದ್ಯಮವನ್ನೂ ಅವಲಂಭಿಸಿದೆ. ಆದರೆ ಸದ್ಯಕ್ಕೆ ಪ್ರವಾಸೋದ್ಯಮ ಚೇತರಿಸಿಕೊಳ್ಳುವ ಲಕ್ಷಣಗಳಿಲ್ಲ. ಈ ಎಲ್ಲಾ ಕಾರಣಗಳಿಂದ ವಿಮಾನಯಾನ ಸಂಸ್ಥೆಗಳಿಗೆ ಪ್ಯಾಕೇಜಿನಲ್ಲಿ ಸಹಾಯ ಮಾಡುವುದಾಗಿ ತಿಳಿಸುವ ಸಾಧ್ಯತೆ ಇದೆ.

ಇದಲ್ಲದೆ ದೇಶದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮತ್ತು ಕೃಷಿ ಕ್ಷೇತ್ರಗಳಿಗೂ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿನಲ್ಲಿ ಕೆಲವು ನೆರವುಗಳನ್ನು ನೀಡಲಾಗುತ್ತಿದ್ದು ಅವುಗಳ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಮಾಹಿತಿ ನೀಡಲಿದ್ದಾರೆ. 20 ಲಕ್ಷ ಕೋಟಿ ರೂಪಾತಿಗಳ ವಿಶೇಷ ಪ್ಯಾಕೇಜ್ ಬಗ್ಗೆ ಇವತ್ತು ಮಾಡುವ ಅವರ ಸುದ್ದಿಗೋಷ್ಟಿಯೇ ಕಡೆಯ ಸುದ್ದಿಗೋಷ್ಟಿ ಆಗಿರಲಿದೆ ಎಂಬ ಮಾಹಿತಿ ಕೇಳಿಬರುತ್ತಿದೆ.

Trending News