ಅಹಮದಾಬಾದ್: ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರಿಗೆ ಹಣಕಾಸು ಖಾತೆಯನ್ನು ಮರಳಿ ನೀಡುವ ಮೂಲಕ ಗುಜರಾತ್ ಬಿಜೆಪಿಯಲ್ಲಿ ಎದ್ದಿದ್ದ ಭಿನ್ನಮತವನ್ನು ಅಮಿತ ಷಾ ಶಮನಗೊಳಿಸಿದ್ದಾರೆ.
ಡಿ.28 ರಂದು ಪ್ರಮಾಣ ವಚನ ಸ್ವೀಕರಿಸಿದ ನಂತರ ಖಾತೆ ಹಂಚಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ನಿತಿನ್ ಪಟೇಲ್ ಕಚೇರಿಗೆ ಆಗಮಿಸಿರಲಿಲ್ಲ. ಭಾನುವಾರ ಬೆಳಗ್ಗೆ 7.30ರ ಸುಮಾರಿಗೆ ಪಟೇಲ್ಗೆ ಕರೆ ಮಾಡಿದ ಅಮಿತ್ ಷಾ, ಹಣಕಾಸು ಖಾತೆಯನ್ನು ಮರಳಿಸುವುದಾಗಿ ಅವರಿಗೆ ಭರವಸೆ ನೀಡಿದ ಮೇಲೆ ಉದ್ಭವಗೊಂಡಿದ್ದ ಭಿನ್ನಮತ ಶಮನಗೊಂಡಿದೆ.
ಇದಕ್ಕೂ ಮೊದಲು ಈ ಖಾತೆಯನ್ನು ಸೌರಭ್ ಪಟೇಲ್ ಅವರಿಗೆ ನೀಡಲಾಗಿತ್ತು. ಮುಖ್ಯ ಮಂತ್ರಿ ವಿಜಯ್ ರೂಪಾಣಿ ಈಗಾಗಲೇ ಖಾತೆಯ ಬದಲಾವಣೆಯ ಬಗ್ಗೆ ರಾಜ್ಯಪಾಲರಿಗೆ ತಿಳಿಸಿದ್ದಾರೆ. ನಿತಿನ್ ಪಟೇಲ್ ಕೂಡ ತಮ್ಮ ಇಷ್ಟದ ಖಾತೆ ದೊರೆತಿರುವುದರಿಂದ ಬಂಡಾಯದ ಬಾವುಟವನ್ನು ಇಳಿಸಿದ್ದಾರೆ.