ನವದೆಹಲಿ: ದೆಹಲಿ ಸೇರಿದಂತೆ ಇಡೀ ದೇಶದಲ್ಲಿ ಕಳೆದ ಮೂರು ತಿಂಗಳಿಂದ ಈರುಳ್ಳಿ ಬೆಲೆ ಏರುತ್ತಲೇ ಇದೆ. ಈರುಳ್ಳಿ ದರ ನಿರಂತರವಾಗಿ ಗಗನಕ್ಕೇರುತ್ತಿವೆ. ಸರ್ಕಾರದ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಈರುಳ್ಳಿ ಸಾಮಾನ್ಯ ಜನರನ್ನು ಅಳುವಂತೆ ಮಾಡುತ್ತಿದೆ. ಬೆಲೆ ನಿಯಂತ್ರಿಸಲು, ಈರುಳ್ಳಿ ಆಮದು ಮಾಡಲು ಸರ್ಕಾರ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಟರ್ಕಿ ಮತ್ತು ಈಜಿಪ್ಟ್‌ನ ಈರುಳ್ಳಿಗಳು ಈಗ ಮಾರುಕಟ್ಟೆಯನ್ನು ತಲುಪಿವೆ. ಆದರೆ ಖರೀದಿದಾರರು ಟರ್ಕಿ, ಈಜಿಪ್ಟ್‌ನಿಂದ ಆಮದು ಮಾಡಿಕೊಳ್ಳಲಾಗಿರುವ ಈರುಳ್ಳಿಯನ್ನು ಕೊಳ್ಳಲು ಮುಂದೆ ಬರುತ್ತಿಲ್ಲ. ಆ ಈರುಳ್ಳಿಗಳು ಮಸುಕಾಗಿದೆ, ಹಾಗಾಗಿ ಅದನ್ನು ಕೊಳ್ಳಲು ಮನಸ್ಸಾಗುತ್ತಿಲ್ಲ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಅದರ ಬೆಲೆಯ ಬಗ್ಗೆ ಮಾತನಾಡುವುದಾದರೆ ಅದು ಭಾರತೀಯ ಈರುಳ್ಳಿಗೆ ಸ್ಪರ್ಧೆಯನ್ನು ನೀಡುತ್ತಿದೆ.
ಝೀ ಮೀಡಿಯಾ ತಂಡವು ಇದೇ ವಿಷಯದ ಬಗ್ಗೆ ತನಿಖೆ ನಡೆಸಲು ಓಖ್ಲಾ ತರಕಾರಿ ಮಾರುಕಟ್ಟೆಯನ್ನು ತಲುಪಿದಾಗ, ಈರುಳ್ಳಿಯ ಬೆಲೆ 70-80 ರೂಪಾಯಿಗಳು ಮತ್ತು ಭಾರತೀಯ ಈರುಳ್ಳಿ 100 ರೂಪಾಯಿ ಕೆಜಿ ಎಂದು ತಿಳಿದುಬಂದಿದೆ. ಓಖ್ಲಾ ಮಂಡಿಯಲ್ಲಿ ತರಕಾರಿಗಳನ್ನು ಖರೀದಿಸಲು ಬಂದ ಜನರು ಟರ್ಕಿ ಮತ್ತು ಈಜಿಪ್ಟ್‌ನಿಂದ ತರಿಸಲಾಗಿರುವ ಈರುಳ್ಳಿ ಅಷ್ಟು ರುಚಿಯಿರುವುದಿಲ್ಲ ಮತ್ತು ಬೆಲೆ ಕೂಡ ತೀರಾ ಕಡಿಮೆ ಇಲ್ಲ. ಇದರಿಂದಾಗಿ ಕೊಂಚ ಹೆಚ್ಚು ಹಣ ನೀಡಿ ನಮ್ಮ ಭಾರತದ ಈರುಳ್ಳಿಯನ್ನೇ ಖರೀದಿಸುತ್ತೇವೆ ಎಂದು ಹೇಳಿದರು.
ಹೋಟೆಲ್ ನಡೆಸುವವರಲ್ಲಿ ಕೆಲವರು ಈರುಳ್ಳಿ ಖರೀದಿಗಾಗಿ ಮಾರುಕಟ್ಟೆಗೆ ಬಂದಿದ್ದರು. ಅವರೂ ಕೂಡ ಈ ಈರುಳ್ಳಿ ರುಚಿ ಇರುವುದಿಲ್ಲ ಎಂದರು. ಈ ಕಾರಣದಿಂದಾಗಿ ಜನರು ಟರ್ಕಿ, ಈಜಿಪ್ಟ್‌ನಿಂದ ಬಂದಿರುವ ಈರುಳ್ಳಿಯನ್ನು ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಗಮನಾರ್ಹವಾಗಿ, ಅತಿವೃಷ್ಟಿಯಿಂದಾಗಿ, ಈರುಳ್ಳಿ ಉತ್ಪಾದನೆಯು ಸುಮಾರು 25 ಪ್ರತಿಶತದಷ್ಟು ಕುಸಿದಿದೆ. ಇದರಿಂದಾಗಿ ದೇಶದಲ್ಲಿ ಹಿಂದೆಂದೂ ಕಂಡರಿಯದ ಮಟ್ಟಿಗೆ ಈರುಳ್ಳಿ ಬೆಲೆ ನಿರಂತರವಾಗಿ ಏರುತ್ತಲೇ ಇದೆ. ಸರ್ಕಾರ ಈಗಾಗಲೇ ಈರುಳ್ಳಿ ರಫ್ತು ನಿಷೇಧಿಸಿದೆ. ವ್ಯಾಪಾರಿಗಳಿಗೆ ಸ್ಟಾಕ್ ಮಿತಿಯನ್ನು ನಿಗದಿಪಡಿಸಲಾಗಿದೆ. ಅಷ್ಟೇ ಅಲ್ಲ, ಸರ್ಕಾರವು ಬಫರ್ ಸ್ಟಾಕ್ ಅನ್ನು ಅಗ್ಗದ ದರದಲ್ಲಿ ಪೂರೈಸುತ್ತಿದೆ. ಅಧಿಕಾರಿಗಳ ಪ್ರಕಾರ, ಕೆಂಪು ಮತ್ತು ಹಳದಿ ಬಣ್ಣಗಳ ಈರುಳ್ಳಿಯನ್ನು ಟರ್ಕಿ, ಈಜಿಪ್ಟ್ ಮತ್ತು ಅಫ್ಘಾನಿಸ್ತಾನದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.