ನವೆಂಬರ್ 18 ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭ

ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಹಲವು ಮಸೂದೆಗಳನ್ನು ಚರ್ಚಿಸುವ ನಿರೀಕ್ಷೆಯಿದ್ದು, ಎರಡು ನಿರ್ಣಾಯಕ ಸುಗ್ರೀವಾಜ್ಞೆಗಳನ್ನು ಕಾನೂನನ್ನಾಗಿ ಪರಿವರ್ತಿಸುವುದೂ ಸಹ ಪಟ್ಟಿಯಲ್ಲಿದೆ.

Last Updated : Oct 21, 2019, 02:56 PM IST
ನವೆಂಬರ್ 18 ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭ   title=

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನವು ನವೆಂಬರ್ 18 ರಿಂದ ಡಿಸೆಂಬರ್ 13 ರವರೆಗೆ ನಡೆಯಲಿದೆ ಎಂದು ಸಂಸತ್ತಿನ ಉಭಯ ಸದನಗಳ ಕಾರ್ಯದರ್ಶಿಗಳಿಗೆ ಸಂಸದೀಯ ವ್ಯವಹಾರಗಳ ಸಚಿವಾಲಯ ಸೋಮವಾರ ತಿಳಿಸಿದೆ.

ಸಂಸತ್ತಿನ ಚಳಿಗಾಲದ ಅಧಿವೇಶನದ ದಿನಾಂಕಗಳು ಮತ್ತು ಕಾರ್ಯತಂತ್ರಗಳ ಕುರಿತು ಚರ್ಚಿಸಲು ಅಕ್ಟೋಬರ್ 10ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯ (ಸಿಸಿಪಿಎ) ಸಭೆ ನಡೆಸಲಾಗಿತ್ತು. ಸಭೆಯ ಬೆನ್ನಲ್ಲೇ ಇದೀಗ ದಿನಾಂಕವನ್ನು ಪ್ರಕಟಿಸಲಾಗಿದೆ.

ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಹಲವು ಮಸೂದೆಗಳನ್ನು ಚರ್ಚಿಸುವ ನಿರೀಕ್ಷೆಯಿದ್ದು, ಎರಡು ನಿರ್ಣಾಯಕ ಸುಗ್ರೀವಾಜ್ಞೆಗಳನ್ನು ಕಾನೂನನ್ನಾಗಿ ಪರಿವರ್ತಿಸುವುದೂ ಸಹ ಪಟ್ಟಿಯಲ್ಲಿದೆ.

ಹೊಸ ಮತ್ತು ದೇಶೀಯ ಉತ್ಪಾದನಾ ಕಂಪನಿಗಳಿಗೆ ಆರ್ಥಿಕತೆಯ ಮಂದಗತಿಯನ್ನು ತಡೆಗಟ್ಟಲು ಮತ್ತು ಬೆಳವಣಿಗೆಯನ್ನು ಹೆಚ್ಚಿಸಲು ಕಾರ್ಪೊರೇಟ್ ತೆರಿಗೆ ದರವನ್ನು ಕಡಿಮೆ ಮಾಡುವ ಒಂದು ಸುಗ್ರೀವಾಜ್ಞೆಯನ್ನು ಆದಾಯ ತೆರಿಗೆ ಕಾಯ್ದೆ, 1961 ಮತ್ತು ಹಣಕಾಸು ಕಾಯ್ದೆ, 2019ರಲ್ಲಿನ ತಿದ್ದುಪಡಿಗಳಿಗೆ ಜಾರಿಗೆ ತರಲು ಸೆಪ್ಟೆಂಬರ್‌ನಲ್ಲಿ ಹೊರಡಿಸಲಾಯಿತು. ಎರಡನೇ ಸುಗ್ರೀವಾಜ್ಞೆ ಸಹ ಸೆಪ್ಟೆಂಬರ್ನಲ್ಲಿಯೇ ಹೊರಡಿಸಲಾಗಿದ್ದು,  ಇ-ಸಿಗರೇಟ್ ಮತ್ತು ಅಂತಹುದೇ ಉತ್ಪನ್ನಗಳ ಮಾರಾಟ, ತಯಾರಿಕೆ ಮತ್ತು ಸಂಗ್ರಹಣೆಗೆ ನಿಷೇಧ ಹೇರಲಾಗಿದೆ.

ಕಳೆದ ಎರಡು ವರ್ಷಗಳಿಂದ ನವೆಂಬರ್ 21 ರಿಂದ ಆರಂಭವಾಗಿದ್ದ ಚಳಿಗಾಲದ ಅಧಿವೇಶನ, ಜನವರಿಯಲ್ಲಿ ಮುಕ್ತಾಯವಾಗಿತ್ತು. ಈ ಬಾರಿ ನವೆಂಬರ್ 18 ರಿಂದ ಆರಂಭವಾಗಿ ಡಿಸೆಂಬರ್ 13 ರವರೆಗೆ ಅಧಿವೇಶನ ನಿಗದಿಯಾಗಿದೆ. 

Trending News