ನವದೆಹಲಿ: ಫೇಸ್ಬುಕ್ ಬಳಕೆದಾರರ ಡಾಟಾ ಸೋರಿಕೆ ಮಾಡಿದ ಆರೋಪ ಎದುರಿಸುತ್ತಿರುವ ಬೆನ್ನಲ್ಲೇ ಡಿಜಿಟಲ್ ಪಾವತಿ ಮತ್ತು ಇ-ಕಾಮರ್ಸ್ ಕಂಪನಿ ಪೇಟಿಎಂ ಬಳಕೆದಾರರ ಡಾಟಾ ಕೂಡ ಸೋರಿಕೆ ಆಗಿರುವ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬರುತ್ತಿವೆ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೇಟಿಎಂ ತನ್ನ ಬಳಕೆದಾರರ ಮಾಹಿತಿಯನ್ನು ತಮ್ಮ ಹೂಡಿಕೆದಾರರಿಗಾಗಲೀ ಅಥವಾ ಯಾವುದೇ ವಿದೇಶಿ ಸಂಸ್ಥೆಗಳೊಂದಿಗೆ ಹಂಚಿಕೊಂಡಿಲ್ಲ. ಬಳಕೆದಾರರ ಡೇಟಾವನ್ನು ಸ್ಥಳಿಯವಾಗಿ ಭಾರತದಲ್ಲಿಯೇ ಸಂಗ್ರಹಿಸಿಡಲಾಗುತ್ತದೆ. ಇದರಲ್ಲಿ ಬಾಹ್ಯ ಕಂಪನಿಗಳ ಭಾಗಿತ್ವ ಇಲ್ಲ ಎಂದು ಹೇಳಿದೆ.
ದೇಶದ ಬಹು ದೊಡ್ಡ ಇ-ಕಾಮರ್ಸ್ ಕಂಪನಿ
ದೇಶದಲ್ಲೇ ಅತಿ ದೊಡ್ಡ ಡಿಜಿಟಲ್ ಪಾವತಿ ಕಂಪನಿ ಪೇಟಿಎಂ ಬ್ರಾಂಡ್ ಅನ್ನು ಒನ್ 97 ಕಮ್ಯೂನಿಕೇಶನ್ಸ್ ಲಿಮಿಟೆಡ್ ಹೊಂದಿದೆ. ಪೇಟಿಎಂ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ ಎಂದು ಸಾಕಷ್ಟು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಕಂಪನಿಯು, ಬಳಕೆದಾರರ ಡೇಟಾವನ್ನು ಮೂರನೇ ವ್ಯಕ್ತಿ ಏಜೆನ್ಸಿಗಳು, ಷೇರುದಾರರು, ಹೂಡಿಕೆದಾರರು ಅಥವಾ ವಿದೇಶಿ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದು ಹೇಳಿದೆ. ಇತ್ತೀಚೆಗೆ ಸಂಸದ ನರೇಂದ್ರ ಜಾಧವ್ ಅವರು ರಾಜ್ಯಸಭೆಯಲ್ಲಿ ಮಾತನಾಡುತ್ತಾ, ಚೀನಾದ ಅಲಿಬಾಬಾ ಭಾರತದ ರಾಷ್ಟ್ರೀಯ ಭದ್ರತೆಗೆ ಅಪಾಯ. ಅಲಿಬಾಬ ಪೇಟಿಎಂನ ಪಾಲಿದೆ ಎಂದು ಹೇಳಿದ್ದರು. ಇದೀಗ ಈ ಸುದ್ದಿ ಎಲ್ಲೆಡೆ ಹರಡಿದ್ದು, ಪೇಟಿಎಂ ಬಳಕೆದಾರರ ಮಾಹಿತಿ ಸೋರಿಕೆಯ ಭೀತಿ ಎದುರಾಗಿದೆ.
ಜಪಾನಿನ ಸಾಫ್ಟ್ ಬ್ಯಾಂಕ್ ಜೊತೆ ಪೇಟಿಎಂ ಒಪ್ಪಂದ
ಮತ್ತೊಂದು ವರದಿಯ ಪ್ರಕಾರ ಪೇಟಿಎಂ ಜಪಾನಿನಲ್ಲಿ ತನ್ನ ಸೇವೆ ಆರಂಭಿಸಲು ಸಾಫ್ಟ್ ಬ್ಯಾಂಕ್ ಆಫ್ ಜಪಾನ್ ಜೊತೆ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ. ಇದರಲ್ಲಿ ಯಾಹೂ ಜಪಾನ್ ಕಾರ್ಪೋರೇಶನ್ ಕೂಡಾ ಪಾಲುದಾರಿಕೆ ಪಡೆದಿದೆ. ಸಾಫ್ಟ್ ಬ್ಯಾಂಕ್ ವೆಬ್ ಸೈಟ್ನಲ್ಲಿ ಈ ಜಂಟಿ ಉದ್ಯಮಕ್ಕೆ ಪೆಪೆ ಕಾರ್ಪೋರೇಶನ್ ಎಂದು ಹೆಸರಿಸಲಾಗಿದೆ. ಇದರ ಅಡಿಯಲ್ಲಿ, 2018ರ ಅಂತ್ಯಕ್ಕೆ ಬಾರ್ಕೋಡ್(QR ಕೋಡ್) ನೊಂದಿಗೆ ಸ್ಮಾರ್ಟ್ಫೋನ್ ಪಾವತಿ ಸೇವೆ ಪ್ರಾರಂಭವಾಗಲಿದೆ. ಇದೂ ಕೂಡ ಪೇಟಿಎಂನ ಪಾವತಿ ವಿಧಾನವನ್ನೇ ಬಳಸಲಿದೆ.