ಚೆನ್ನೈ: ಪೆರಿಯರ್ ಪ್ರತಿಮೆಯ ಕುರಿತಾಗಿ ಬುಧವಾರ ಬಿಜೆಪಿ ನಾಯಕ ಎಚ್.ರಾಜಾ ಬರೆದಿದ್ದ ಫೇಸ್ ಬುಕ್ ಪೋಸ್ಟ್ ವಿರುದ್ದವಾಗಿ ಮದ್ರಾಸ್ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ.
ವಕೀಲ ಸೂರ್ಯ ಪ್ರಕಾಶಂ ಎನ್ನುವವರು ಈ ಅರ್ಜಿಯನ್ನು ಸಲ್ಲಿಸಿದ್ದು,ಇಂದು ಮಧ್ಯಾಹ್ನ ಹೈಕೋರ್ಟ್ ನಲ್ಲಿ ಈ ಅರ್ಜಿಯ ವಿಚಾರಣೆ ನಡೆಯಲಿದೆ. ಬಿಜೆಪಿ ನಾಯಕ ರಾಜಾ ಅಳಿಸಿಹಾಕಿರುವ ಪೋಸ್ಟ್ ನಲ್ಲಿ ಅವರು "ಲೆನಿನ್ ಯಾರು ? ಈಗ ಭಾರತ ಮತ್ತು ಲೆನಿನ್ ನಡುವಿನ ಸಂಬಂಧವೇನು?ಕಮುನಿಸ್ಟ್ ರೊಂದಿಗೆ ಭಾರತ ಯಾವ ಸಂಪರ್ಕ ಹೊಂದಿದೆ.ಇಂದು ಲೆನಿನ್ ಮೂರ್ತಿಯನ್ನು ತ್ರಿಪುರಾದಲ್ಲಿ ತೆಗೆದುಹಾಕಲಾಗಿದೆ. ಮುಂದಿನ ದಿನಗಳಲ್ಲಿ ಜಾತಿವಾದಿ ಪೆರಿಯರ್ ಮೂರ್ತಿಯನ್ನು ತೆಗೆದುಹಾಕಲಾಗುವುದು" ಎಂದು ಬರೆದುಕೊಂಡಿದ್ದರು.
ಆದರೆ ಇದಕ್ಕೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನಲೆಯಲ್ಲಿ ಅದನ್ನು ಅವರು ಅಳಿಸಿಹಾಕಿದ್ದರು.ಇದಕ್ಕೆ ಪ್ರತಿಕ್ರಯಿಸಿ ತನ್ನ ಅನುಮತಿಯಿಲ್ಲದೆ ತನ್ನ ಪುಟದಲ್ಲಿ ಅಡ್ಮಿನ್ ಈ ಪೋಸ್ಟ್ ಮಾಡಿದ್ದಾರೆ ಎಂದು ಹೇಳಿ ರಾಜಾ ಕ್ಷಮೆಯಾಚಿಸಿದರು.