ನವದೆಹಲಿ: ಇತ್ತೀಚಿನ ದಿನಗಳಲ್ಲಿ ಭೋಪಾಲ್ ಲೋಕಸಭಾ ಕ್ಷೇತ್ರ ರಾಜಕೀಯ ಚರ್ಚಾ ವಿಷಯವಾಗಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಸ್ಪರ್ಧಿಸುತ್ತಿದ್ದಾರೆ. ಈ ಬೆನ್ನಲ್ಲೇ ಸೋಮವಾರ ಬಿಜೆಪಿ ನಾಯಕಿ ಹಾಗೂ ಕೇಂದ್ರ ಸಚಿವೆ ಉಮಾಭಾರತಿ ಅವರನ್ನು ಭೇಟಿಯಾದ ಪ್ರಗ್ಯಾ ಭಾವುಕರಾದ ಘಟನೆ ನಡೆದಿದೆ.
ಲೋಕಸಭಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡುವ ಮೊದಲು ಉಮಾ ಭಾರತಿ ನಿವಾಸಕ್ಕೆ ಭೇಟಿ ನೀಡಿದ ಪ್ರಗ್ಯಾ ಸಿಂಗ್ ಠಾಕೂರ್ ಕೆಲಕಾಲ ಚರ್ಚೆ ನಡೆಸಿದರು. ಬಳಿಕ ಅಲ್ಲಿಂದ ಹೊರಡುವ ಸಂದರ್ಭದಲ್ಲಿ ಪ್ರಗ್ಯಾ ಅವರನ್ನು ಕಳುಹಿಸಲು ಬಂದ ಉಮಾ ಭಾರತಿ ಅವರನ್ನು ಅಪ್ಪಿಕೊಂಡ ಪ್ರಗ್ಯಾ ಭಾವುಕರಾಗಿ ಕಣ್ಣೀರಿಟ್ಟರು.
#WATCH Madhya Pradesh: Pragya Singh Thakur, BJP's LS candidate from Bhopal breaks down while meeting Union Minister and senior BJP leader Uma Bharti in Bhopal. pic.twitter.com/SqcvJPCfnZ
— ANI (@ANI) April 29, 2019
ಬಳಿಕ ಮಾತನಾಡಿದ ಉಮಾಭಾರತಿ, ನಾನು ಪ್ರಗ್ಯಾ ಸಿಂಗ್ ಠಾಕೂರ್ ಅವರನ್ನು ಗೌರವಿಸುತ್ತೇನೆ. ಈ ಹಿಂದೆ ಅವರ ವಿರುದ್ಧ ನಡೆದಿರುವ ದುಷ್ಕೃತ್ಯಗಳನ್ನು ನಾನು ಕಂಡಿದ್ದೇನೆ. ಈ ವಿಚಾರದಲ್ಲಿ ಆಕೆ ಪೂಜನೀಯಳು. ಲೋಕಸಭಾ ಚುನಾವಣೆಗೆ ಪ್ರಗ್ಯಾ ಪರವಾಗಿ ಪ್ರಚಾರ ಮಾಡುತ್ತೇನೆ ಎಂದರಲ್ಲದೆ ಇದೊಂದು ಭಾವನಾತ್ಮಕ ಕ್ಷಣ ಎಂದು ಉಮಾಭಾರತಿ ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಗ್ಯಾ ಸಿಂಗ್ ಠಾಕೂರ್, ಸಾಧು-ಸಂತರ ನಡುವೆ ಎಂದಿಗೂ ವೈಷಮ್ಯ ಬೆಳೆಯುವುದಿಲ್ಲ. ನಾನು ಅವರಿಗೋಸ್ಕರ ಬಂದಿದ್ದೇನೆ. ಹಾಗೆಯೇ ನಮ್ಮಿಬ್ಬರ ನಡುವೆ ಸದಾ ಆತ್ಮೀಯವಾದ ಸಂಬಂಧ ಇರಲಿದೆ ಎಂದರು.
ಈ ಹಿಂದೆ ಹಲವು ಬಾರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಉಮಾ ಭಾರತಿ ಅವರು ಸಾಧ್ವಿ ಪ್ರಜ್ಞಾ ಜೊತೆ ನನ್ನನ್ನು ಹೋಲಿಕೆ ಮಾಡಬೇಡಿ ಎಂದು ಹೇಳಿದ್ದರು. ಸಾಧ್ವಿ ಪ್ರಗ್ಯಾ ಹಾಗೂ ಉಮಾಭಾರತಿ ನಡುವೆ ವೈಮನಸ್ಯ ಇದೆ ಎಂದೇ ರಾಜಕೀಯ ವಲಯದಲ್ಲಿ ಹೇಳಲಾಗುತ್ತಿತ್ತು. ಮಧ್ಯಪ್ರದೇಶ ರಾಜಕಾರಣದಲ್ಲಿ ಸಾಧ್ವಿ ಪ್ರಜ್ಞಾ ನಿಮ್ಮ ಸ್ಥಾನವನ್ನು ತುಂಬುತ್ತಾರಾ ಎಂದು ಪ್ರಶ್ನಿಸಿದಾಗ, ಅವರು ಒಬ್ಬ ಮಹಾನ್ ಸಾಧ್ವಿ. ನನ್ನನ್ನು ಅವರೊಂದಿಗೆ ಹೋಲಿಸಬೇಡಿ. ನಾನು ಕೇವಲ ಒಬ್ಬ ಸಾಮಾನ್ಯ ಹಾಗೂ ಮೂರ್ಖ ಜೀವಿ ಎಂದು ಉಮಾ ಭಾರತಿ ಹೇಳಿಕೆ ನೀಡಿದ್ದರು.