ರಾಷ್ಟ್ರಪತಿ ಚುನಾವಣೆ 2022: ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಎನ್‌ಡಿಎ ಬುಡಕಟ್ಟು ನಾಯಕಿ ಮತ್ತು ಜಾರ್ಖಂಡ್ ಮಾಜಿ ರಾಜ್ಯಪಾಲರಾದ ದ್ರೌಪದಿ ಮುರ್ಮು (64) ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿದೆ. ಗಮನಾರ್ಹವಾಗಿ ದೇಶದ ಬುಡಕಟ್ಟು ಜನಾಂಗದ ಪ್ರಜೆ ಒಬ್ಬರು ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿ ಆಗಿ ಆಯ್ಕೆ ಆಗಿರುವುದು ಇದೇ ಮೊದಲು.
ಎನ್‌ಡಿಎ ತನ್ನ ರಾಷ್ಟ್ರಪತಿ ಅಭ್ಯರ್ಥಿಯನ್ನು ಘೋಷಿಸಿದ ನಂತರ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, "ದ್ರೌಪದಿ ಮುರ್ಮು ಅವರು ಸಮಾಜಕ್ಕೆ ಸೇವೆ ಸಲ್ಲಿಸಲು ಮತ್ತು ಬಡವರು, ದೀನದಲಿತರು ಮತ್ತು ಅಂಚಿನಲ್ಲಿರುವವರ ಸಬಲೀಕರಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಅವರು ಶ್ರೀಮಂತ ಆಡಳಿತಾತ್ಮಕ ಅನುಭವವನ್ನು ಹೊಂದಿದ್ದಾರೆ ಮತ್ತು ಅತ್ಯುತ್ತಮ ಗವರ್ನರ್ ಅಧಿಕಾರವನ್ನು ಹೊಂದಿದ್ದಾರೆ. ಅವರು ನಮ್ಮ ರಾಷ್ಟ್ರದ ಶ್ರೇಷ್ಠ ರಾಷ್ಟ್ರಪತಿಯಾಗುತ್ತಾರೆ ಎಂಬ ವಿಶ್ವಾಸವಿದೆ" ಎಂದು ಬರೆದಿದ್ದಾರೆ.
Smt. Droupadi Murmu Ji has devoted her life to serving society and empowering the poor, downtrodden as well as the marginalised. She has rich administrative experience and had an outstanding gubernatorial tenure. I am confident she will be a great President of our nation.
— Narendra Modi (@narendramodi) June 21, 2022
ರಾಷ್ಟ್ರಪತಿ ಅಭ್ಯರ್ಥಿ ಹೆಸರನ್ನು ಪ್ರಕಟಿಸಿದ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ, ಮುಂಬರುವ ರಾಷ್ಟ್ರಪತಿ ಚುನಾವಣೆಗೆ ದ್ರೌಪದಿ ಮುರ್ಮು ಅವರನ್ನು ಎನ್‌ಡಿಎ ಅಭ್ಯರ್ಥಿಯನ್ನಾಗಿ ಘೋಷಿಸುತ್ತೇವೆ. ಮೊದಲ ಬಾರಿಗೆ ಬುಡಕಟ್ಟು ಜನಾಂಗದ ಮಹಿಳಾ ಅಭ್ಯರ್ಥಿಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ- Presidential Candidate : ಕಾಂಗ್ರೆಸ್ ರಾಷ್ಟ್ರಪತಿ ಅಭ್ಯರ್ಥಿ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ!
ಒಡಿಶಾದ ಮಯೂರ್‌ಭಂಜ್ ಬುಡಕಟ್ಟು ಜಿಲ್ಲೆಯ ರೈರಂಗ್‌ಪುರ ಗ್ರಾಮದಲ್ಲಿ ಜನಿಸಿದ ದ್ರೌಪದಿ ಮುರ್ಮು ಜಾರ್ಖಂಡ್‌ನ ಮೊದಲ ಮಹಿಳಾ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು. ದ್ರೌಪದಿ ಮುರ್ಮು ಅವರು 18 ಮೇ 2015 ರಿಂದ 12 ಜುಲೈ 2021 ರವರೆಗೆ ಜಾರ್ಖಂಡ್‌ನ ರಾಜ್ಯಪಾಲರಾಗಿದ್ದರು. ಅವರು ಜಾರ್ಖಂಡ್‌ನ ಒಂಬತ್ತನೇ ರಾಜ್ಯಪಾಲರಾಗಿದ್ದರು. ದ್ರೌಪದಿ ಮುರ್ಮು ದೇಶದ ಮೊದಲ ಬುಡಕಟ್ಟು ಮಹಿಳಾ ಗವರ್ನರ್ ಎಂಬುದು ಗಮನಾರ್ಹ ವಿಷಯವಾಗಿದೆ.
ಒಡಿಶಾದಲ್ಲಿ ಜನಿಸಿರುವ ದ್ರೌಪದಿ ಮುರ್ಮು ಹೆಸರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಣೆ ಮಾಡಿರುವುದರಿಂದ ಈಗ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜು ಜನತಾದಳ ಎನ್‌ಡಿಎಗೆ ಬೆಂಬಲ ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ನವೀನ್ ಪಟ್ನಾಯಕ್ ನೇತೃತ್ವದಲ್ಲಿ ಬಿಜೆಡಿ ಸರ್ಕಾರ ನಡೆಯುತ್ತಿರುವ ಅದೇ ರಾಜ್ಯದಿಂದ ಮುರ್ಮು ಬಂದಿರುವುದು ಇದರ ಹಿಂದಿನ ಕಾರಣ.
ಇದನ್ನೂ ಓದಿ- President Election 2022 : ರಾಷ್ಟ್ರಪತಿ ಚುನಾವಣೆ ಹೇಗಿರುತ್ತೆ? MLA, MP ಗಳ ಮತದ ಮೌಲ್ಯ ಎಷ್ಟು; ಸಂಪೂರ್ಣ ಮಾಹಿತಿ ಇಲ್ಲಿದೆ
ಇನ್ನು ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರ ಹೆಸರನ್ನು ಘೋಷಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, "ದ್ರೌಪದಿ ಮುರ್ಮು ಎನ್‌ಡಿಎಯ ರಾಷ್ಟ್ರಪತಿ ಅಭ್ಯರ್ಥಿಯಾಗಿರುವುದು ಒಡಿಶಾ ರಾಜ್ಯಕ್ಕೆ ಹೆಮ್ಮೆಯ ಕ್ಷಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ನನ್ನೊಂದಿಗೆ ಚರ್ಚಿಸಿದಾಗ ನನಗೆ ಸಂತೋಷವಾಯಿತು" ಎಂದು ಹೇಳಿದ್ದಾರೆ. ದ್ರೌಪದಿ ಮುರ್ಮು ಅವರು ದೇಶದಲ್ಲಿ ಮಹಿಳಾ ಸಬಲೀಕರಣಕ್ಕೆ ಒಂದು ಉಜ್ವಲ ಭವಿಷ್ಯವನ್ನು ತಂದುಕೊಡಲಿದ್ದಾರೆ ಎಂದವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಪತಿ ಚುನಾವಣೆ:
ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜೂನ್ 29 ಕೊನೆಯ ದಿನವಾಗಿದ್ದು, ಜುಲೈ 18 ರಂದು ಮತದಾನ ನಡೆಯಲಿದೆ. ಜುಲೈ 21 ರಂದು ಮತ ಎಣಿಕೆ ನಡೆಯಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.