Amritpal Singh: 'ವಾರಿಸ್ ಪಂಜಾಬ್ ದೇ' ಎಂಬ ಸಂಘಟನೆಯ ಮುಖ್ಯಸ್ಥ ಅಮೃತ್ ಪಾಲ್ ಸಿಂಗ್ ಎಂಬ ವ್ಯಕ್ತಿ ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಆತನನ್ನು ಪಂಜಾಬಿನ 'ಭಿಂದ್ರನ್ವಾಲೆ 2.0' ಎಂದೂ ಕರೆಯಲಾಗುತ್ತಿದೆ. ಈ ಲೇಖನದಲ್ಲಿ ಆತನ ಕುರಿತ ಒಂದಷ್ಟು ವಿಷಯಗಳನ್ನು ನಾವು ತಿಳಿದುಕೊಳ್ಳೋಣ.
ಅಮೃತ್ ಪಾಲ್ ಸಿಂಗ್ ಖಲಿಸ್ತಾನಿ ಹೋರಾಟದ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿ. ಆತ ಮತ್ತು ಆತನ ಸಹಚರರ ವಿರುದ್ಧ ಶನಿವಾರ ಕ್ಷಿಪ್ರ ಕಾರ್ಯಾಚರಣೆಗಿಳಿದ ಪೊಲೀಸರು ವಾಹನಗಳಿಂದ ಆತನನ್ನು ಬೆನ್ನತ್ತಿ, ಅಮೃತ್ ಪಾಲ್ ಸಿಂಗ್ ಮತ್ತು ಆತನಿಗೆ ಆತ್ಮೀಯರಾಗಿದ್ದ 10 ಜನರನ್ನು ಬಂಧಿಸಿದರು. ಈ ಸಿಖ್ ಹೋರಾಟಗಾರ ಆತನ ಸಹವರ್ತಿಯಾಗಿದ್ದ, 'ತೂಫಾನ್' ಎಂಬ ಹೆಸರಿನಿಂದ ಖ್ಯಾತನಾಗಿದ್ದ ಲವ್ ಪ್ರೀತ್ ಸಿಂಗ್ ಎಂಬಾತನನ್ನು ಪೊಲೀಸರು ಬಂಧಿಸಿದ್ದನ್ನು ವಿರೋಧಿಸಿ, ಪ್ರತಿಭಟನೆಗಳ ನೇತೃತ್ವ ವಹಿಸಿದ್ದ. ಆತನ ಬಂಧನವಾಗುತ್ತಿದ್ದ ಹಾಗೆಯೇ ರಾಜ್ಯಾದ್ಯಂತ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಅಮೃತ್ ಪಾಲ್ ಸಿಂಗ್ನನ್ನು ಪೊಲೀಸ್ ವಾಹನಗಳು ಬೆನ್ನತ್ತುವಾಗ ಆತ ವಾಹನದೊಳಗೇ ಕೂತು ಅದರ ನೇರ ಪ್ರಸಾರ ಮಾಡಿದ್ದ. ಆದರೆ ಬೇರೆ ಯಾವ ಮಾಹಿತಿಗಳನ್ನೂ ಆತ ಬಿಟ್ಟುಕೊಟ್ಟಿರಲಿಲ್ಲ. 30 ವರ್ಷ ವಯಸ್ಸಿನ ಯುವಕ ಅಮೃತ್ ಪಾಲ್ ಸಿಂಗ್ ಕಳೆದ 6 ತಿಂಗಳ ಅವಧಿಯಲ್ಲಿ ಹೆಚ್ಚಾಗಿ ಬೆಳಕಿಗೆ ಬಂದಿದ್ದ. ಆತ ಪಂಜಾಬಿನಲ್ಲಿ ಪ್ರತ್ಯೇಕತಾವಾದಕ್ಕೆ ಪ್ರಬಲ ಬೆಂಬಲಿಗನಾಗಿ, ಖಲಿಸ್ತಾನಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದ. ಅವನು ಪಂಜಾಬಿನಲ್ಲಿ ಮೂಲಭೂತವಾದಿ ಧೋರಣೆಗಳನ್ನು ಬೋಧಿಸುತ್ತಿದ್ದ.
ಇದನ್ನೂ ಓದಿ: Rahul Gandhi : ಲಂಡನ್ನಲ್ಲಿ ನೀಡಿದ ಹೇಳಿಕೆಗೆ ಮೊದಲ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ
ಪ್ರಸ್ತುತ ಅಮೃತ್ ಪಾಲ್ ಸಿಂಗ್ ಕುರಿತು ಲಭ್ಯವಿರುವ ಮಾಹಿತಿಗಳು
‘ಭಿಂದ್ರನ್ವಾಲೆ 2.0’ ಎಂದೇ ಹೆಸರುಗಳಿಸಿರುವ ಅಮೃತ್ ಪಾಲ್ ಸಿಂಗ್ ಹೆಸರಿಗೆ ತಕ್ಕಂತೆ ಜರ್ನೇಲ್ ಸಿಂಗ್ ಭಿಂದ್ರನ್ವಾಲೆಯ ಬೋಧನೆ ಮತ್ತು ವೇಷ ಭೂಷಣಗಳನ್ನೇ ಅನುಕರಿಸುತ್ತಾನೆ. ಭಿಂದ್ರನ್ವಾಲೆ ಪ್ರತ್ಯೇಕ ಖಲಿಸ್ತಾನದ ಸ್ಥಾಪನೆಗಾಗಿ ಹೋರಾಟ ನಡೆಸಿ, 1984ರಲ್ಲಿ ನಡೆದ ಆಪರೇಷನ್ ಬ್ಲೂ ಸ್ಟಾರ್ನಲ್ಲಿ ಹತ್ಯೆಗೀಡಾಗಿದ್ದ.
ಅಮೃತ್ ಪಾಲ್ ಸಿಂಗ್ ತನ್ನ ಕುಟುಂಬದವರೊಡನೆ ದುಬೈನಲ್ಲಿ ವಾಸವಾಗಿದ್ದ. 2022ರಲ್ಲಿ ಆತ ತನ್ನ ಕುಟುಂಬದ ಸಾಗಾಣಿಕಾ ವ್ಯವಹಾರವನ್ನು ಬಿಟ್ಟು ಭಾರತಕ್ಕೆ ಮರಳಿದ. ಬಳಿಕ ಆತ 2022ರಲ್ಲಿ ಅಸುನೀಗಿದ ನಟ ದೀಪ್ ಸಿಧು ಆರಂಭಿಸಿದ 'ವಾರಿಸ್ ಪಂಜಾಬ್ ದೇ' ಸಂಘಟನೆಯ ನಾಯಕನಾಗಿ ಅಧಿಕಾರ ವಹಿಸಿಕೊಂಡ. ಈ ಸಂಘಟನೆ ಪಂಜಾಬಿನ ಹಿತಾಸಕ್ತಿಗಳನ್ನು ಕಾಪಾಡುವ, ಸಾಮಾಜಿಕ ವಿಚಾರಗಳನ್ನು ಗಮನಿಸುವ ಉದ್ದೇಶ ಹೊಂದಿತ್ತು.
ಆದರೆ ಅಮೃತ್ ಪಾಲ್ ಸಿಂಗ್ ಮತ್ತು ದೀಪ್ ಸಿಧು ಯಾವತ್ತೂ ಮುಖಾಮುಖಿ ಭೇಟಿಯಾಗಿರಲಿಲ್ಲ. ಅಮೃತ್ ಪಾಲ್ ತಾನು ಸಿಧು ಜೊತೆ ಅಂತರ್ಜಾಲದಲ್ಲಿ ನಡೆಸಿದ ಮಾತುಕತೆಗಳಿಂದ ಅಪಾರ ಪ್ರಭಾವ ಹೊಂದಿದ್ದೇನೆ ಎಂದಿದ್ದ. ಒಂದು ವಾರದ ಹಿಂದೆ ನಡೆದ ಸಿಧು ಮೊದಲ ಪುಣ್ಯತಿಥಿಯಂದು ಮಾತನಾಡಿದ ಅಮೃತ್ ಪಾಲ್ ಸಿಂಗ್, ತಾನು ಸಿಧು ಸಲಹೆಯಂತೆ ನವೆಂಬರ್ 2021ರಿಂದ ತಲೆ ಕೂದಲು ಕತ್ತಿರಿಸುವುದನ್ನು ನಿಲ್ಲಿಸಿರುವುದಾಗಿ ಹೇಳಿದ್ದ.
ಅಮೃತ್ ಪಾಲ್ ಸಿಂಗ್ ಯುಕೆಯಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಮಹಿಳೆ ಕಿರಣ್ ದೀಪ್ ಕೌರ್ ಎಂಬವರನ್ನು ನಾಕೋದಾರ್ ಗುರುದ್ವಾರದಲ್ಲಿ ವಿವಾಹವಾಗಿದ್ದ. ಪ್ರತ್ಯೇಕತಾವಾದಿ ನಾಯಕನಾಗಿರುವ ಅಮೃತ್ ಪಾಲ್ ಸಿಂಗ್ ಜೊತೆ ಸಾಮಾನ್ಯವಾಗಿ ಖಡ್ಗದಂತಹ ಆಯುಧ ಹಿಡಿದಿರುವ ಜೊತೆಗಾರರು ಇರುತ್ತಿದ್ದರು. ಸ್ವತಃ ಆತ ಸಾಂಪ್ರದಾಯಿಕ ಸಿಖ್ ಶೈಲಿಯಲ್ಲಿ ಟರ್ಬನ್ ಮತ್ತು ಕುರ್ತಾ ಧರಿಸಿ, ಭಿಂದ್ರನ್ವಾಲೆ ರೀತಿಯಲ್ಲಿಯೇ ತಯಾರಾಗುತ್ತಿದ್ದ.
ಅಮೃತಸರ ಜಿಲ್ಲೆಯ ಜಲ್ಲುಪುರ್ ಖೈರಾ ಗ್ರಾಮದಲ್ಲಿ ವಾಸವಾಗಿದ್ದ ಅಮೃತ್ ಪಾಲ್, ಕಳೆದ ತಿಂಗಳು ತನ್ನ ಹೇಳಿಕೆಯೊಂದರಲ್ಲಿ ಸಿಖ್ಖರನ್ನು ಕೆಟ್ಟದಾಗಿ ನಡೆಸಿಕೊಳ್ಳುವುದು ಮುಂದುವರಿದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಬಂದ ಪರಿಸ್ಥಿತಿಯೇ ಬರಬಹುದು ಎಂದು ಎಚ್ಚರಿಕೆ ಕೊಟ್ಟಿದ್ದ!
ಆತನ ಮಾತುಗಳಲ್ಲಿ ಸಾಮಾನ್ಯವಾಗಿ ವಲಸೆ ವಿರೋಧಿ ಭಾವನೆಗಳೇ ತುಂಬಿದ್ದು, ಪಂಜಾಬ್ ಕೇವಲ ಪಂಜಾಬಿಗಳಿಗೆ ಮಾತ್ರವೇ ಸೇರಿದ್ದು ಎಂಬ ಅಭಿಪ್ರಾಯ ಕಂಡುಬರುತ್ತಿತ್ತು. ಅದರೊಡನೆ ಆತ ಯುವಜನತೆಯೊಡನೆ ಮಾದಕ ವ್ಯಸನ ಮತ್ತು ಪಂಜಾಬಿನಲ್ಲಿ ತಲೆದೋರಿರುವ ಇತರ ಸಾಮಾಜಿಕ ಸಮಸ್ಯೆಗಳ ಕುರಿತು ಚರ್ಚಿಸುತ್ತಿದ್ದ.
ಇದನ್ನೂ ಓದಿ: ಚೆನ್ನೈನಲ್ಲಿ ಚಾಲಕ ರಹಿತ ಮೆಟ್ರೋ ಸೇವೆ: ಡಿಜಿಟಲ್ ಸಿಗ್ನಲ್ ಸಿಸ್ಟಮ್ ಅಳವಡಿಸಲಿದೆ ಕರುನಾಡಿನ ಹಿಟಾಚಿ ರೈಲ್
ಹೆಸರು ಹೇಳಲಿಚ್ಛಿಸದ ಕೇಂದ್ರ ಗುಪ್ತಚರ ಅಧಿಕಾರಿಯೊಬ್ಬರ ಪ್ರಕಾರ, ಅಮೃತ್ ಪಾಲ್ ಸಿಂಗ್ ಯುಎಇಯಲ್ಲಿ ವಾಸಿಸತೊಡಗಿದ ಬಳಿಕ ಪಾಕಿಸ್ತಾನದ ಐಎಸ್ಐ ಸಂಘಟನೆಯೊಡನೆ ಸಂಪರ್ಕದಲ್ಲಿದ್ದ. ಆತನಿಗೆ ನೀಡಲಾಗಿದ್ದ ಗುರಿಯೆಂದರೆ ಯುವ ಜನತೆಯನ್ನು ಮರುಳು ಮಾಡುವಂತೆ ಮಾತನಾಡಿ, ಧರ್ಮದ ಸೋಗಿನಲ್ಲಿ ಅವರನ್ನು ಖಲಿಸ್ತಾನಿ ಹೋರಾಟದಲ್ಲಿ ಭಾಗವಹಿಸುವಂತೆ ಮಾಡುವುದಾಗಿತ್ತು. ಇದಕ್ಕೆ ಬೇಕಾದ ಆರ್ಥಿಕ ನೆರವನ್ನು ತಾನು ಒದಗಿಸುವುದಾಗಿ ಐಎಸ್ಐ ಭರವಸೆ ನೀಡಿತ್ತು. ಆ ಅಧಿಕಾರಿಯ ಹೇಳಿಕೆಯ ಪ್ರಕಾರ ಈ ರೀತಿ ಪಂಜಾಬಿನಲ್ಲಿ ಅಮೃತ್ ಪಾಲ್ ಸಿಂಗ್ ಪ್ರಭಾವ ಹೆಚ್ಚಾಗತೊಡಗಿತು.
ಹಿಂಸೆಯ ಇತಿಹಾಸ
ಇತ್ತೀಚೆಗೆ ವಾರಿಸ್ ಪಂಜಾಬ್ ದೇ ಸಂಘಟನೆಯ ಮುಖ್ಯಸ್ಥನಾಗಿ ನೇಮಕಗೊಂಡಿದ್ದ ಅಮೃತ್ ಪಾಲ್ ತನ್ನ ಬೆಂಬಲಿಗರು 2 ಗುರುದ್ವಾರಗಳಲ್ಲಿ ಗೂಂಡಾಗಿರಿ ಎಸಗುವಂತೆ ಮಾಡಿದ್ದ. ಮೊದಲ ಘಟನೆ ಡಿಸೆಂಬರ್ 9, 2022ರಂದು ಬಿಹಾರಿಪುರದಲ್ಲಿ ನಡೆದರೆ, ಇನ್ನೊಂದು ಘಟನೆ ಡಿಸೆಂಬರ್ 13ರಂದು ಜಲಂಧರ್ನಲ್ಲಿ ನಡೆಯಿತು.
ಎರಡೂ ಗುರುದ್ವಾರಗಳಲ್ಲಿದ್ದ ಸೋಫಾ ಮತ್ತು ಇತರ ಪೀಠೋಪಕರಣಗಳಿಗೆ ಬೆಂಕಿ ಹಚ್ಚಲಾಯಿತು. ಇದಕ್ಕೆ ಕಾರಣ ನೀಡಿದ ಅಮೃತ್ ಪಾಲ್, ಈ ಆಸನಗಳಲ್ಲಿ ಕುಳಿತು ಪ್ರಾರ್ಥಿಸುವುದೆಂದರೆ ಗುರು ಗ್ರಂಥ ಸಾಹಿಬ್ಗೆ ಸಮಾನ ಎತ್ತರದಲ್ಲಿ ಕುಳಿತಂತೆ ಎಂದು ನೆಪ ಹೇಳಿದ್ದ.
ಫೆಬ್ರವರಿ 2023ರಲ್ಲಿ ಓರ್ವ ವ್ಯಕ್ತಿ ಅಜ್ನಾಲಾ ಪೊಲೀಸ್ ಠಾಣೆಯಲ್ಲಿ ತನ್ನನ್ನು ಅಮೃತ್ ಪಾಲ್ ಸಿಂಗ್ ಸಹವರ್ತಿಗಳು ಅಪಹರಿಸಿ, ಹಲ್ಲೆ ನಡೆಸಿದ್ದರು ಎಂದು ದೂರು ದಾಖಲಿಸಿದ್ದ. ಅದರ ಬಳಿಕ ಅಮೃತ್ ಪಾಲ್ ಸಿಂಗ್ ಮತ್ತು ಆತನ 6 ಜನ ಸಹಚರರ ಮೇಲೆ ಎಫ್ಐಆರ್ ದಾಖಲಾಗಿ, ಆತನ ಆತ್ಮೀಯ ಸಹವರ್ತಿಯಾದ ಲವ್ ಪ್ರೀತ್ ಸಿಂಗ್ ತೂಫಾನ್ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.
ಲವ್ ಪ್ರೀತ್ ಬಂಧನದ ಬೆನ್ನಲ್ಲೇ ಪಂಜಾಬ್ ಪೊಲೀಸರಿಗೇ ಅಂತಿಮ ಗಡುವು ನೀಡಿ, ಆತನ ಮೇಲಿನ ದೂರುಗಳನ್ನು ಕೈಬಿಡುವಂತೆ ಹೇಳಿಕೆ ನೀಡಿದ್ದ. ಪೊಲೀಸರು ಅದಕ್ಕೆ ಪ್ರತಿಕ್ರಿಯಿಸದಿದ್ದಾಗ ಸಿಂಗ್ ಬೆಂಬಲಿಗರು ಕೈಯಲ್ಲಿ ಸ್ವಯಂಚಾಲಿತ ಆಯುಧಗಳು ಮತ್ತು ಚೂಪಾದ ಹತ್ಯಾರುಗಳನ್ನು ಹಿಡಿದು ಪೊಲೀಸ್ ಠಾಣೆಗೆ ನುಗ್ಗಿದ್ದರು. ಅವರು ಕೈಗೊಂಡ ಹಲ್ಲೆಯ ಪರಿಣಾಮವಾಗಿ ಪೊಲೀಸರಿಗೂ ಗಾಯಗಳಾಗಿ, ಪೊಲೀಸ್ ಪಡೆಗಳ ವಾಹನಗಳಿಗೂ ಹಾನಿಯಾಗಿತ್ತು.
ಇದನ್ನೂ ಓದಿ: Coronavirus Cases In India: ಕೋರೋನಾ ಹೊಸ ಅಲೆ ಬರಲಿದೆಯಾ? ವೇಗವಾಗಿ ಹರಡುಟ್ಟಿದೆ ಕೋವಿಡ್-19 ಸಬ್ ವೇರಿಯಂಟ್!
ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್ ಸತಿಂದರ್ ಸಿಂಗ್ ಅವರು ಪೊಲೀಸರು ಯಾಕೆ ಅವರ ಮೇಲೆ ಪ್ರತಿದಾಳಿ ನಡೆಸಲಿಲ್ಲ ಎಂದು ವಿವರಿಸುತ್ತಾ, ಅಮೃತ್ ಪಾಲ್ ಸಿಂಗ್ ಬೆಂಬಲಿಗರು ತಮ್ಮನ್ನು ತಾವು 'ಜಾಥಾ' ಎಂದು ಕರೆದುಕೊಂಡು, ಕೈಯಲ್ಲಿ ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್ ಹಿಡಿದುಕೊಂಡಿದ್ದರು. ಆ ಕಾರಣದಿಂದ ತಾವು ಪ್ರತಿ ದಾಳಿ ನಡೆಸಲಿಲ್ಲ ಎಂದಿದ್ದರು.
ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.