ಮೇಲ್ವರ್ಗದ ಬಡವರಿಗೆ ಶೇ.10 ರಷ್ಟು ಮೀಸಲಾತಿ: ಲೋಕಸಭೆಯಲ್ಲಿ ಮಸೂದೆ ಅಂಗೀಕಾರ

ಲೋಕಸಭೆಯಲ್ಲಿ ಈ ಮಸೂದೆಯ ಪರ 323 ಮತಗಳು ಬಿದ್ದರೆ, ಕೇವಲ 3 ಮತಗಳು ಮಸೂದೆಯ ವಿರುದ್ಧ ಚಲಾವಣೆಗೊಂಡಿತು.

Last Updated : Jan 9, 2019, 08:36 AM IST
ಮೇಲ್ವರ್ಗದ ಬಡವರಿಗೆ ಶೇ.10 ರಷ್ಟು ಮೀಸಲಾತಿ: ಲೋಕಸಭೆಯಲ್ಲಿ ಮಸೂದೆ ಅಂಗೀಕಾರ title=

ನವದೆಹಲಿ: ಮೇಲ್ಜಾತಿಗಳ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಬಡವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ. 10 ರಷ್ಟು ಮೀಸಲಾತಿ ಯನ್ನು ನೀಡಲು ಮಂಗಳವಾರ ಲೋಕಸಭೆ ಯಲ್ಲಿ ಸರ್ಕಾರ ಮಂಡಿಸಿದ್ದ ಮಸೂದೆ ಅಂಗೀಕಾರವಾಯಿತು. 

ಲೋಕಸಭೆ ಅಧಿವೇಶನದ ಕೊನೆಯ ದಿನವಾದ ಮಂಗಳವಾರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ಥಾವರ್ ಚಂದ್ ಗೆಹ್ಲೋಟ್ ಅವರು ಮೇಲ್ವರ್ಗದ ಬಡವರಿಗೆ ಶೇ.10 ರಷ್ಟು ಮೀಸಲಾತಿ ಒದಗಿಸುವ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದರು.

ಸಂವಿಧಾನ ತಿದ್ದುಪಡಿ (124ನೇ ತಿದ್ದುಪಡಿ) ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಸಂದರ್ಭದಲ್ಲಿ ಸಚಿವ ಗೆಹ್ಲೋಟ್ ಅವರು ಈ ಮಸೂದೆಯಿಂದ ಸಾಮಾನ್ಯ ವರ್ಗದಡಿಯಲ್ಲಿ ಬರುವ ಮೇಲ್ವರ್ಗದ ಬಡಕುಟುಂಬಗಳಿಗೆ ಒಳಿತು ಉಂಟುಮಾಡುವ ಉದ್ದೇಶವನ್ನು ಮೋದಿ ಸರಕಾರ ಹೊಂದಿರುವುದರಿಂದ ಸಂವಿಧಾನ ತಿದ್ದುಪಡಿ ಮೂಲಕ ಈ ಮಸೂದೆಯನ್ನು ಮಂಡಿಸಲಾಗುತ್ತಿದೆ ಎಂಬ ಅಂಶವನ್ನು ಸಚಿವರು ಸದನ ಸದಸ್ಯರಿಗೆ ಮನವರಿಕೆ ಮಾಡಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರೂ ಸಹ ಸದನದಲ್ಲಿ ಉಪಸ್ಥಿತರಿದ್ದರು. 

ಲೋಕಸಭೆಯಲ್ಲಿ ತೀವ್ರ ಚರ್ಚೆಯ ನಂತರ ಈ ಮಸೂದೆಯ ಪರ 323 ಮತಗಳು ಬಿದ್ದರೆ, ಕೇವಲ 3 ಮತಗಳು ಮಸೂದೆಯ ವಿರುದ್ಧ ಚಲಾವಣೆಗೊಂಡಿತು. ವಿಶೇಷ ಸಂಗತಿಯೆಂದರೆ ಕಾಂಗ್ರೆಸ್ ಕೂಡ ವಿಧೇಯಕ ಪರವಾಗಿ ಮತ ಚಲಾಯಿಸಿದೆ.

ಇದಕ್ಕೂ ಮೊದಲು ಚರ್ಚೆಯಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಕಾಂಗ್ರೆಸ್‌ ಸೇರಿದಂತೆ ಬಹುತೇಕ ಎಲ್ಲ ಪಕ್ಷಗಳು ಆರ್ಥಿಕ ದುರ್ಬಲರಿಗೆ ಮೀಸಲು ನೀಡುವ ಇಂಗಿತ ವ್ಯಕ್ತಪಡಿಸುತ್ತ ಬಂದಿವೆ. ಈ ಹಿಂದೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಇಂತಹ ಮೀಸಲು ನೀತಿ ಅನುಷ್ಠಾನ ಯತ್ನಗಳು ನಡೆದಿದ್ದವು. ಆದರೆ ಅವು ಸಂವಿಧಾನ ತಿದ್ದುಪಡಿ ಹೊರತು ಪಡಿಸಿ, ಸಾಮಾನ್ಯ ಶಾಸನಬದ್ಧ ನಿಬಂಧನೆಗಳು ಅಥವಾ ಅಧಿಸೂಚನೆಗಳ ಮಟ್ಟಕ್ಕೆ ಸೀಮಿತಗೊಂಡಿದ್ದರಿಂದ ಉದ್ದೇಶ ಸಾಧನೆಯಲ್ಲಿ ಸೋತವು ಎಂದು ಹೇಳಿದರು.

ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ಈ ಮಸೂದೆಯು ಇಂದು ರಾಜ್ಯಸಭೆಯಲ್ಲಿ ಮಂಡನೆಗೊಳ್ಳಲಿದೆ.

Trending News