ನವದೆಹಲಿ: ಭಾರತ ಮತ್ತು ಫ್ರಾನ್ಸ್ ನಡುವಿನ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ರಫೇಲ್ ಒಪ್ಪಂದದ ಸಂಬಂಧ ಸುಪ್ರೀಂಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಇಂದು ಸತ್ಯಕ್ಕೆ ಜಯ ಲಭಿಸಿದೆ ಎಂದು ಹೇಳಿದರು.
ಇಂದು ಸುಪ್ರೀಂಕೋರ್ಟ್ ನೀಡಿದ ತೀರ್ಪಿನಿಂದಾಗಿ ಸತ್ಯಕ್ಕೆ ಸಾವಿಲ್ಲ ಎಂಬುದು ಸಾಬೀತಾಗಿದೆ. ಕೇವಲ ಸುಳ್ಳು ಸರಮಾಲೆಯನ್ನೇ ಹೆಣೆದು ದೇಶದ ಜನರನ್ನು ದಿಕ್ಕು ತಪ್ಪಿಸುವ ಅತಿ ದೊಡ್ಡ ಪ್ರಯತ್ನವಾಗಿದೆ. ಆದರೆ ಸತ್ಯಕ್ಕೆ ಎಂದಿನಂತೆ ಜಯವಾಗಿದೆ. ನಮಗೆ ನಿಜಕ್ಕೂ ಗೆಲುವಾಗಿದೆ ಎಂದರು.
ಇದೇ ವೇಳೆ 'ಯಾವ ಆಧಾರದ ಮೇಲೆ ರಫೇಲ್ ಒಪ್ಪಂದದ ಬಗ್ಗೆ ಆರೋಪ ಮಾಡಿದಿರಿ' ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ ಅಮಿತ್ ಶಾ ಸುಳ್ಳು ಆರೋಪಗಳನ್ನು ಮಾಡಿದ್ದಕ್ಕೆ ರಾಹುಲ್ ಗಾಂಧಿ ಕ್ಷಮೆಯಾಚಿಸಲಿ ಎಂದು ಆಗ್ರಹಿಸಿದರು.
2007 ರಿಂದ 2014ರವರೆಗೆ ರಫೇಲ್ ಡೀಲ್ ಏಕೆ ಸಾಧ್ಯವಾಗಲಿಲ್ಲ ಎಂದು ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ ಅಮಿತ್ ಶಾ, ನಿಮಗೆ ಮಾಹಿತಿ ಬಹಿರಂಗಗೊಳಿಸಿದ ಮೂಲ ಯಾವುದು ಎಂಬುದನ್ನು ಸಾರ್ವಜನಿಕವಾಗಿ ತಿಳಿಸಿ ಎಂದು ಹೇಳಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ನೀವು ದೇಶದ ಜನರ ಮತ್ತು ಸೈನ್ಯದ ಕ್ಷಮೆಯಾಚಿಸಬೇಕು ಎಂದ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಪಕ್ಷದ ಪ್ರಯೋಜನಕ್ಕಾಗಿ ಸುಳ್ಳಿನ ಕಂತೆಯನ್ನೇ ಹೆಣೆದು ರಾಜಕೀಯ ಪ್ರಾರಂಭಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.