'ದಂಗೆಗಳು ನಡೆಯುತ್ತಲೇ ಇರುತ್ತವೆ.. ಅವು ಜೀವನದ ಭಾಗ.. ನಡೆಯುತ್ತಲೇ ಇರುತ್ತವೆ'

ದೆಹಲಿಯಲ್ಲಿ ಹಿಂಸಾಚಾರ ಮುಂದುವರೆದ ಬೆನ್ನಲ್ಲೇ ಹರಿಯಾಣದ ಓರ್ವ ಮಂತ್ರಿ ರಂಜೀತ್ ಚೌಟಾಲಾ ನೀಡಿರುವ ಒಂದು ಹೇಳಿಕೆ ಇದೀಗ ಹೆಡ್ ಲೈನ್ ಸೃಷ್ಟಿಸುತ್ತಿದೆ.

Updated: Feb 27, 2020 , 04:17 PM IST
'ದಂಗೆಗಳು ನಡೆಯುತ್ತಲೇ ಇರುತ್ತವೆ.. ಅವು ಜೀವನದ ಭಾಗ.. ನಡೆಯುತ್ತಲೇ ಇರುತ್ತವೆ'

ನವದೆಹಲಿ:ದೆಹಲಿಯಲ್ಲಿ ಹಿಂಸಾಚಾರ ಮುಂದುವರೆದ ಬೆನ್ನಲ್ಲೇ ಹರಿಯಾಣದ ಓರ್ವ ಮಂತ್ರಿ ರಂಜೀತ್ ಚೌಟಾಲಾ ನೀಡಿರುವ ಒಂದು ಹೇಳಿಕೆ ಇದೀಗ ಹೆಡ್ ಲೈನ್ ಸೃಷ್ಟಿಸುತ್ತಿದೆ. ಹಿಂಸಾಚಾರದ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿರುವ ಅವರು, "ದಂಗೆಗಳು ನಡೆಯುತ್ತಲೇ ಇರುತ್ತವೆ.. ಅವು ಜೀವನದ ಭಾಗ.. ನಡೆಯುತ್ತಲೇ ಇರುತ್ತವೆ". ಈ ಕುರಿತು ಹೇಳಿಕೆ ನೀಡಿರುವ ಅವರು "ಇಂದಿರಾ ಗಾಂಧಿ ಹತ್ಯೆಯಾದಾಗಳೂ ಕೂಡ ಸಂಪೂರ್ಣ ದೆಹಲಿ ಹೊತ್ತಿ ಉರಿದಿತ್ತು, ಇದು ಜೀವನದ ಭಾಗ. ನಡೆಯುತ್ತಲೇ ಇರುತ್ತವೆ" ಎಂದು ಹೇಳಿದ್ದಾರೆ.

ಏತನ್ಮಧ್ಯೆ ದೆಹಲಿಯ ಈಶಾನ್ಯ ಭಾಗದಲ್ಲಿ ಹಿಂಸಾಚಾರದ ಬಳಿಕ ದೆಹಲಿ ನಿಧಾನಕ್ಕೆ ಸಾಮಾನ್ಯ ಸ್ಥಿತಿಯತ್ತ ಮರಳಲು ಪ್ರಯತ್ನಿಸುತ್ತಿದೆ. ದೆಹಲಿಯ ಈಶಾನ್ಯ ಭಾಗದಲ್ಲಿ ಹಿಂಸಾಚಾರದ ನಾಲ್ಕು ದಿನಗಳ ಬಳಿಕ ಹಿಂಸಾಚಾರಕ್ಕೆ ಗುರಿಯಾದ ಪ್ರದೇಶಗಳಲ್ಲಿ ಜನಜೀವನ ಸಾಮಾನ್ಯ ಸ್ಥಿತಿಯತ್ತ ನಿಧಾನಕ್ಕೆ ಬರಲಾರಂಭಿಸಿವೆ. ದೆಹಲಿ ಈಶಾನ್ಯ ಭಾಗದಲ್ಲಿರುವ ಗೋಕುಲ್ ಪುರಿ ಪ್ರದೇಶದಲ್ಲಿ ಸೋಮವಾರ ರಾತ್ರಿ ಭಾರಿ ಹಿಂಸಾಚಾರ ಸಂಭವಿಸಿದೆ. ಈ ಪ್ರದೇಶದಲ್ಲಿರುವ ಗಂಗಾ ವಿಹಾರ್ ಪ್ರದೇಶ ವ್ಯಾಪಕ ದಾಳಿಗೆ ಗುರಿಯಾಗಿತ್ತು. ಹಿಂಸಾಚಾರದ ವೇಳೆ ಹಲವು ಮನೆಗಳು ಹಾಗೂ ಅಂಗಡಿ ಮುಂಗಟ್ಟುಗಳಿವೆ ಬೆಂಕಿ ಇಡಲಾಗಿತ್ತು. ಆದರೆ, ಎರಡು ದಿನಗಳ ಬಳಿಕ ಈ ಪ್ರದೇಶದಲ್ಲಿ ಇದೀಗ ಶಾಂತಿ ನೆಲೆಸಿದೆ. ಪೊಲೀಸರು ಹಾಗೂ ಅರೆಸೇನಾ ಪಡೆಯ ಜವಾನರು ಇಲ್ಲಿ ಇದೀಗ ನಿರಂತರವಾಗಿ ಗಸ್ತು ತಿರುಗುತ್ತಿದ್ದಾರೆ.

ಈ ಹಿಂಸಾಚಾರದ ಕುರಿತು ನಡೆದ ವಿಚಾರಣೆಯಲ್ಲಿ, ಕ್ಷುಲ್ಲಕ ಕಾರಣಕ್ಕೆ ಈ ಪ್ರದೇಶದಲ್ಲಿ ಹಿಂಸಾಚಾರ ಸಂಭವಿಸಿದೆ ಎಂದು ತಿಳಿದುಬಂದಿದೆ. ಹಲವಾರು ವರ್ಷಗಳ ಕಾಲ ಜೊತೆಗಿದ್ದರೂ ಕೂಡ ಈ ಪ್ರದೇಶದಲ್ಲಿ ಬೆಂಕಿಯ ಕಿಡಿ ಹೇಗೆ ಹೊತ್ತುಕೊಂಡಿತು ಎಂಬುದರ ಕುರಿತು ಮಾತನಾಡಿರುವ ವ್ಯಕ್ತಿಯೊಬ್ಬರು "ಸೋಮವಾರ ಸಂಜೆ ಕೆಲ ಅಸಾಮಾಜಿಕ ತತ್ವಗಳು ಕಾರಣವಿಲ್ಲದೆ ಗಂಗಾ ವಿಹಾರ್ ನಲ್ಲಿರುವ ವರಿಷ್ಠ ನಾಗರಿಕರ ಕಲ್ಯಾಣ ಕೇಂದ್ರದ ಮೇಲೆ ಬಾಟಲಿಗಳನ್ನು ಎಸೆದಿದ್ದರು. ಬಳಿಕ ಹತ್ತಿರದಲ್ಲಿದ್ದ ಜನರು ರೊಚ್ಚಿಗೆದ್ದು, ನಂತರ ತಮಗೆ ತಿಳಿದಂತೆ ಮಾಡಿದ್ದಾರೆ. ಅಷ್ಟೇ ಅಲ್ಲ ಈ ಪ್ರದೇಶದ ಹಲವು ಮನೆಗಳು ಹಾಗೂ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಇಡಲಾಗಿದ್ದು, ಸುಮಾರು 100ಕ್ಕೂ ಅಧಿಕ ಕುಟುಂಬ ಸದಸ್ಯರು ತಮ್ಮ ಪ್ರಾಣ ರಕ್ಷಿಸಲು ಓಡಿ ಹೋಗಿದ್ದಾರೆ" ಎಂದು ತಿಳಿಸಿದ್ದಾರೆ.

ಆದರೆ, ಸದ್ಯ ಇಲ್ಲಿ ಶಾಂತಿ ನೆಲೆಸಿದ್ದು, ಯಾವುದೇ ರೀತಿಯ ಆತಂಕ ಇಲ್ಲ. ಜನರು ಕಳೆದು ಹೋದ ವೇಳೆಯನ್ನು ಮರೆಯಲು ಯತ್ನಿಸುತ್ತಿದ್ದಾರೆ. ಮಂಗಳವಾರ ಸಂಜೆ ಈ ಪ್ರದೇಶದಲ್ಲಿ ಅರೆಸೇನಾ ಪಡೆಯ ಒಂದು ತುಕ್ಕಡಿಯನ್ನು ನಿಯೋಜಿಸಲಾಗಿದೆ.