ಆರ್‌ಬಿಐ ಡ್ಯೆಪುಟಿ ಗವರ್ನರ್‌ ಸ್ಥಾನಕ್ಕೆ ದಿಢೀರ್‌ ರಾಜೀನಾಮೆ ನೀಡಿದ ವಿರಳ್‌ ಆಚಾರ್ಯ

ವಿರಳ್‌ ಆಚಾರ್ಯ ಅಧಿಕಾರಾವಧಿ ಇನ್ನೂ ಆರು ತಿಂಗಳು ಇರುವಾಗಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿದ್ದು ಆರ್‌ಬಿಐ ಇನ್ನೂ ಖಚಿತಪಡಿಸಿಲ್ಲ.  

Last Updated : Jun 24, 2019, 10:20 AM IST
ಆರ್‌ಬಿಐ ಡ್ಯೆಪುಟಿ ಗವರ್ನರ್‌ ಸ್ಥಾನಕ್ಕೆ ದಿಢೀರ್‌ ರಾಜೀನಾಮೆ ನೀಡಿದ ವಿರಳ್‌ ಆಚಾರ್ಯ  title=

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಡೆಪ್ಯುಟಿ ಗವರ್ನರ್ ವಿರಳ್‌ ಆಚಾರ್ಯ ರಾಜೀನಾಮೆ ನೀಡಿದ್ದಾರೆ. ವಿರಳ್‌ ಆಚಾರ್ಯ ಅವರ ಅಧಿಕಾರಾವಧಿ ಇನ್ನೂ ಆರು ತಿಂಗಳು ಇರುವಾಗಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿದ್ದು ಆರ್‌ಬಿಐ ಇದನ್ನು ಇನ್ನೂ ಖಚಿತಪಡಿಸಿಲ್ಲ. ಸೋಮವಾರ ಮಧ್ಯಾಹ್ನದವರೆಗೆ ಆರ್‌ಬಿಐ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಬಹುದು ಎಂದು ಹೇಳಲಾಗುತ್ತಿದೆ.

ವಿರಳ್‌ ಆಚಾರ್ಯ 2017 ರಲ್ಲಿ ಆರ್‌ಬಿಐಗೆ ಸೇರಿದ್ದರು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಉಪ ಗವರ್ನರ್ ವಿರಳ್ ಆಚಾರ್ಯ ವಿತ್ತೀಯ ನೀತಿ ಇಲಾಖೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಅವರ ಮೂರು ವರ್ಷಗಳ ಅಧಿಕಾರಾವಧಿ 2020 ರ ಜನವರಿಯಲ್ಲಿ ಪೂರ್ಣಗೊಳ್ಳಬೇಕಿತ್ತು.

ವಿರಳ್ ಆಚಾರ್ಯ ಅವರ ರಾಜೀನಾಮೆ ದೃಢಪಟ್ಟರೆ, ಆರ್‌ಬಿಐನಲ್ಲಿ ಉನ್ನತ ಮಟ್ಟದ ಎರಡು ಹುದ್ದೆಗಳು ಖಾಲಿ ಆಗಲಿವೆ. ಒಂದೆಡೆ ವಿರಳ್ ಆಚಾರ್ಯ ರಾಜೀನಾಮೆ ನೀಡಿದ್ದಾರೆ, ಎನ್.ಎಸ್.ವಿಶ್ವನಾಥನ್ ಅವರು ಜುಲೈ 3, 2019 ರಂದು ನಿವೃತ್ತರಾಗುತ್ತಿದ್ದಾರೆ. 

ಆರ್‌ಬಿಐನಲ್ಲಿ ಆರು ತಿಂಗಳಲ್ಲಿ ಇದು ಎರಡನೇ ಬಾರಿಗೆ ಉನ್ನತ ಅಧಿಕಾರಿಗಳು ತಮ್ಮ ಅವಧಿ ಪೂರ್ಣಗೊಳ್ಳುವ ಮೊದಲೇ ರಾಜೀನಾಮೆ ನೀಡುತ್ತಿದ್ದಾರೆ. ಡಿಸೆಂಬರ್‌ನಲ್ಲಿ, ಗವರ್ನರ್ ಊರ್ಜಿತ್ ಪಟೇಲ್ ಅವರು ತಮ್ಮ ಅಧಿಕಾರದ ಅವಧಿ ಮುಗಿಯುವ ಸುಮಾರು ಒಂಬತ್ತು ತಿಂಗಳ ಮೊದಲು ರಾಜೀನಾಮೆ ನೀಡಿದರು.

Trending News