ನವದೆಹಲಿ: ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಇನ್ಮುಂದೆ ಆಟದ ಮೈದಾನದ ಜೊತೆಗೆ ರಾಜಕೀಯ ರಂಗದಲ್ಲಿಯೂ ಕೂಡ ಕಾಣಿಸಿಕೊಳ್ಳಲಿದ್ದು, BJPಗೆ ಸೇರ್ಪಡೆಯಾಗಿದ್ದಾರೆ. ಬುಧವಾರ, ಜನವರಿ 29ರಂದು ಸೈನಾ ನೆಹ್ವಾಲ್ BJP ಸದಸ್ಯತ್ವ ಪಡೆದಿದ್ದಾರೆ. ದೇಶದ ಶ್ರೇಷ್ಠ ಆಟಗಾರರಲ್ಲಿ ಸೈನಾ ನೆಹ್ವಾಲ್ ಕೂಡ ಒಬ್ಬರಾಗಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ಜೊತೆಗೆ ಒಲಿಂಪಿಕ್ಸ್ ನಲ್ಲಿಯೂ ಕೂಡ ಸೈನಾ ಪದಕ ಪಡೆದಿದ್ದಾರೆ.
29ವರ್ಷದ ಸೈನಾ ನೆಹ್ವಾಲ್ ದೆಹಲಿಯ ಪಕ್ಷದ ಮುಖ್ಯ ಕಚೇರಿಯಲ್ಲಿ ಸದಸ್ಯತ್ವ ಪಡೆದಿದ್ದಾರೆ. ಈ ವೇಳೆ ಮಾತನಾಡಿರುವ ಅವರು, "BJP ಸೇರುವುದು ನನ್ನ ಸೌಭಾಗ್ಯ" ಎಂದು ಹೇಳಿದ್ದಾರೆ. ಸೈನಾ ಜೊತೆಗೆ ಸೈನಾ ಸಹೋದರಿ ಕೂಡ BJP ಸೇರಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡಿರುವ ಸೈನಾ ನೆಹ್ವಾಲ್, ಪ್ರಧಾನಿ ಮೋದಿ ದೇಶಕಾಗಿ ಶ್ರಮಿಸುತ್ತಿದ್ದು, ಅವರೇ ತಮಗೆ ರಾಜಕೀಯದಲ್ಲಿ ಪ್ರೇರಣೆ ಎಂದಿದ್ದಾರೆ.
ಹರಿಯಾನಾದಲ್ಲಿ ಜನಿಸಿರುವ ಸೈನಾ, ಸಾಮಾಜಿಕ ಹಾಗೂ ರಾಜಕೀಯ ವಿಷಯಗಳ ಕುರಿತು ಬಹಿರಂಗವಾಗಿ ಟಿಪ್ಪಣಿಗಳನ್ನು ಮಾಡುವ ಕೆಲವೇ ಕೆಲವು ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಹೈದ್ರಾಬಾದ್ ಪೊಲೀಸರು ಗ್ಯಾಂಗ್ ರೇಪ್ ಮತ್ತು ಹತ್ಯೆ ಆರೋಪಿಗಳನ್ನು ಎನ್ಕೌಂಟರ್ ಮಾಡುವ ಮೂಲಕ ಹತ್ಯೆಗೈದಿದ್ದರು. ಇದನ್ನು ಸೈನಾ ಬಹಿರಂಗವಾಗಿ ಸಮರ್ಥಿಸಿದ್ದರು. ಈ ವೇಳೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದ ಸೈನಾ "ಹೈದ್ರಾಬಾದ್ ಪೊಲೀಸರಿಗೆ ನಾನು ಸೆಲ್ಯೂಟ್ ಮಾಡುತ್ತೇನೆ" ಎಂದಿದ್ದರು.
29 ವರ್ಷ ವಯಸ್ಸಿಯ ಸೈನಾ ನೆಹ್ವಾಲ್ 2012ರಲ್ಲಿ ಲಂಡನ್ ನಲ್ಲಿ ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದಾರೆ. ಅಷ್ಟೇ ಅಲ್ಲ ವಿಶ್ವ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಎರಡು ಬಾರಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಪಂದ್ಯಾವಳಿಯಲ್ಲಿ 2015ರಲ್ಲಿ ಬೆಳ್ಳಿ ಪದಕ ಗೆದ್ದುಗೊಂಡಿದ್ದರೆ, 2017ರಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇವುಗಳನ್ನು ಹೊರತುಪಡಿಸಿ, ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮೂರು ಬಾರಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಸೈನಾ ನೆಹ್ವಾಲ್ ಅವರಿಗೆ ಪದ್ಮಶ್ರೀ, ಪದ್ಮಭೂಷಣ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ಅರ್ಜುನ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಸದ್ಯ ಹೈದ್ರಾಬಾದ್ ನಲ್ಲಿ ವಾಸಿಸುವ ಸೈನಾ ನೆಹ್ವಾಲ್, ಹೈದ್ರಾಬಾದ್ ನ ಪುಲೆಲಾ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತಮ್ಮ ಅಭ್ಯಾಸ ನಡೆಸುತ್ತಾರೆ.