ನವದೆಹಲಿ: ಸುಪ್ರೀಂ ಕೋರ್ಟಿನ ಆದೇಶಕ್ಕೆ ಉದ್ದೇಶಪೂರ್ವಕ ಅವಿಧೇಯತೆ ತೋರಿದ ಅಪರಾಧಕ್ಕಾಗಿ ಸಿಬಿಐನ ಆಗಿನ ಪ್ರಭಾರ ನಿರ್ದೇಶಕ ಎಂ. ನಾಗೇಶ್ವರ ರಾವ್ ಮತ್ತು ಸಿಬಿಐ ನ ಪ್ರಾಸಿಕ್ಯೂಶನ್ ನಿರ್ದೇಶಕ (DoP) ಎಸ್. ಭಾಸು ರಾಮ್ ಅವರನ್ನು ಅಪರಾಧಿಗಳೆಂದು ಪರಿಗಣಿಸಿದ ಸರ್ವೋಚ್ಚ ನ್ಯಾಯಾಲಯ ತಲಾ 1 ಲಕ್ಷ ರೂ. ದಂಡವನ್ನು ವಿಧಿಸಿತು. ಮಾತ್ರವಲ್ಲದೆ ಇಂದು ಕೋರ್ಟ್ ಕಲಾಪ ಮುಗಿಯುವ ತನಕ ನ್ಯಾಯಾಲಯದಲ್ಲಿ ಶಿಕ್ಷೆಯ ರೂಪದಲ್ಲಿ ಕುಳಿತಿರಲು ಅವರಿಗೆ ಆದೇಶಿಸಿತು.
ಬಿಹಾರದ ಸರ್ಕಾರಿ ಅನುದಾನಿತ ಬಾಲಿಕಾಗೃಹಗಳ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿದ್ದ ಎ.ಕೆ. ಶರ್ಮಾರನ್ನು ವರ್ಗಾಯಿಸುವ ಮೂಲಕ ಸುಪ್ರೀಂ ಕೋರ್ಟಿನ ಆದೇಶಕ್ಕೆ ಉದ್ದೇಶಪೂರ್ವಕ ಅವಿಧೇಯತೆ ತೋರಿದ ಅಪರಾಧಕ್ಕಾಗಿ ಎಂ. ನಾಗೇಶ್ವರ ರಾವ್ ಮತ್ತು ಎಸ್. ಭಾಸು ರಾಮ್ ಅವರಿಗೆ ಸುಪ್ರೀಂಕೋರ್ಟ್ ಈ ಶಿಕ್ಷೆ ವಿಧಿಸಿದೆ.
ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿದ್ದ ಅಧಿಕಾರಿ ಎ.ಕೆ. ಶರ್ಮಾರನ್ನು ವರ್ಗಾವಣೆಗೆ ಸುಪ್ರೀಂ ಕೋರ್ಟ್ ನಿರ್ಬಂಧ ವಿಧಿಸಿದ್ದರೂ, ಶರ್ಮಾ ಅವರನ್ನು ಸಿಬಿಐನ ಅಂದಿನ ಹಂಗಾಮಿ ನಿರ್ದೇಶಕ ನಾಗೇಶ್ವರ ರಾವ್ ವರ್ಗಾವಣೆ ಮಾಡಿದ್ದರ ಬಗ್ಗೆ ನಾಲ್ಕು ದಿನಗಳ ಹಿಂದೆಯಷ್ಟೇ ಚಾಟಿ ಬೀಸಿದ್ದ ಸುಪ್ರೀಂಕೋರ್ಟ್, 'ನಮ್ಮ ಆದೇಶಗಳೊಂದಿಗೆ ನೀವು ಆಟವಾಡಿರುವಿರಿ. ದೇವರೇ ನಿಮ್ಮನ್ನು ಕಾಪಾಡಲಿ' ಎಂದು ಹೇಳಿತ್ತು. ಅಲ್ಲದೆ ಫೆಬ್ರವರಿ 12ರಂದು ಕೋರ್ಟ್ ಗೆ ಹಾಜರಾಗುವಂತೆ ಎಂ. ನಾಗೇಶ್ವರ್ ರಾವ್ ಗೆ ಸೂಚನೆ ನೀಡಿತ್ತು.