ನವದೆಹಲಿ: ರಿಯಾಯಿತಿಯ ಆಮೀಷಕ್ಕೆ ಒಳಗಾಗಿ ಮಾರ್ಚ್ 31ರ ನಂತರ BS-4 ವಾಹನ ಖರೀಸಿದವರ ಪಾಲಿಗೆ ಶಾಕಿಂಗ್ ಸುದ್ದಿಯೊಂದು ಪ್ರಕಟವಾಗಿದೆ. ಹೌದು, ಮಾರ್ಚ್ 31ರ ಬಳಿಕ ಖಾರೀದಿಸಲಾಗಿರುವ BS-4 ಇಂಜಿನ್ ಹೊಂದಿರುವ ವಾಹನಗಳ ನೋಂದಣಿ ಮಾಡಿಕೊಳ್ಳಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಇಂತಹ ವಾಹನಗಳ ಮಾರಾಟಕ್ಕೆ ಲಾಕ್ ಡೌನ್ ಅವಧಿಯ ಬಳಿಕ ನೀಡಲಾಗಿದ್ದ 10 ನೀಡಲಾಗಿದ್ದ ಹಳೆ ಆದೇಶವನ್ನು ನ್ಯಾಯಾಲಯ ವಾಪಸ್ ಪಡೆದಿದೆ.
ವಾಸ್ತವದಲ್ಲಿ, ಬಿಎಸ್-4 ವಾಹನಗಳ ಮಾರಾಟ ಮತ್ತು ನೋಂದಣಿಗೆ ಸುಪ್ರೀಂ ಕೋರ್ಟ್ 2020 ಮಾರ್ಚ್ 31 ರ ಗಡುವನ್ನು ನಿಗದಿಪಡಿಸಿತ್ತು. ಏಪ್ರಿಲ್ ನಲ್ಲಿ ಹೊಸ ಹೊರಸೂಸುವಿಕೆ ಮಾನದಂಡ ಹೊಂದಿರುವ ಬಿಎಸ್ -6 ಜಾರಿಗೆ ಬರಬೇಕಿತ್ತು (ಇದನ್ನು ಮಾಡಲಾಗಿದೆ). ಏತನ್ಮಧ್ಯೆ, ಮಾರ್ಚ್ 22 ರಂದು ಸಾರ್ವಜನಿಕ ಕರ್ಫ್ಯೂ ವಿಧಿಸಲಾಗಿದ್ದು, ಮಾರ್ಚ್ 25 ರಿಂದ ರಾಷ್ಟ್ರವ್ಯಾಪಿ ಲಾಕ್ ಡೌನ್ ಜಾರಿಗೆ ಬಂದಿತ್ತು.
ಆದರೆ, ಆಗಲೇ ವಾಹನಗಳ ಡೀಲರ್ ಬಳಿ ಅಪಾರ ಸಂಖ್ಯೆಯಲ್ಲಿ ಬಿಎಸ್-4 ಮಾನದಂಡ ಹೊಂದಿರುವ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಸ್ಟಾಕ್ ಉಳಿದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಡೀಲರ್ ಗಳು BS-4 ಮಾನದಂಡ ಹೊಂದಿರುವ ವಾಹನಗಳ ಮಾರಾಟ ಮತ್ತು ನೋಂದಣಿಗೆ ಡೆಡ್ ಲೈನ್ ವಿಸ್ತರಣೆಗೆ ಆಗ್ರಹಿಸಿ ಸುಪ್ರೀಂ ಕದ ತಟ್ಟಿದ್ದರು. ಡೀಲರ್ ಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸರ್ವೋಚ್ಛ ನ್ಯಾಯಾಲಯ, ಶೇ.10 ರಷ್ಟು BS-4 ಮಾನದಂಡ ಹೊಂದಿರುವ ವಾಹನಗಳ ಮಾರಾಟಕ್ಕೆ ಅನುಮತಿ ನೀಡಿ, ಲಾಕ್ ಡೌನ್ ನಂತರ 10 ದಿನಗಳಲ್ಲಿ ಈ ವಾಹನಗಳ ಮಾರಾಟ ಮಾಡಬಹುದಾಗಿದೆ ಎಂದು ಹೇಳಿತ್ತು.
ಸದ್ಯ ಸರ್ವೋಚ್ಛ ನ್ಯಾಯಾಲಯ ಬಿಎಸ್-4 ವಾಹನಗಳ ಮಾರಾಟಕ್ಕಾಗಿ ಲಾಕ್ ಡೌನ್ ಬಳಿಕ 10 ದಿನಗಳ ಕಾಲಾವಕಾಶ ನೀಡಿದ್ದ ತನ್ನ ಹಳೆ ಆದೇಶವನ್ನು ವಾಪಸ್ ಪಡೆದಿದೆ. ಅಷ್ಟೇ ಅಲ್ಲ ಈ 10 ದಿನಗಳ ಅವಧಿಯಲ್ಲಿ ಮಾರಾಟ ಮಾಡಲಾಗಿರುವ ವಾಹನಗಳ ನೋಂದಣಿ ಕೂಡ ನಡೆಸದಂತೆ ನಿರ್ದೇಶನ ನೀಡಿದೆ. ಕೋರ್ಟ್ ನೀಡಿರುವ ಈ ತೀರ್ಪಿನ ಬಳಿಕ ಇದೀಗ ಮಾರ್ಚ್ 31ರ ಬಳಿಕ ಮಾರಾಟವಾದ ಬಿಎಸ್-4 ವಾಹನಗಳ ರಿಜಿಸ್ಟ್ರೇಶನ್ ನಡೆಸಲಾಗುವುದಿಲ್ಲ.
ಅರ್ಜಿಯ ವಿಚಾರಣೆಯ ವೇಳೆ ಸರ್ವೋಚ್ಛ ನ್ಯಾಯಾಲಯ ಆಟೋಮೊಬೈಲ್ ಡೀಲರ್ ಅಸೋಸಿಯೇಷನ್ ಗೆ ತಪರಾಕಿ ಹಾಕಿದೆ. ಈ ಕುರಿತು ಹೇಳಿಕೆ ನೀಡಿರುವ ನ್ಯಾಯಪೀಠ ಇದುವರೆಗೂ ಕೂಡ BS-4 ವಾಹನಗಳನ್ನು ಮಾರಾಟ ಮಾಡಲಾಗುತ್ತಿದ್ದು, ಇದು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದೆ ಎಂದು ಹೇಳಿದೆ. ಅಷ್ಟೇ ಅಲ್ಲ "ಫ್ರಾಡ್ ನಡೆಸಿ ಈ ನ್ಯಾಯಪೀಠದ ಲಾಭ ಪಡೆಯಲು ಯತ್ನಿಸಬೇಡಿ" ಎಂದು ನ್ಯಾ.ಅರುಣ್ ಮಿಶ್ರಾ, ನ್ಯಾ. ಎನ್. ನಜೀರ್ ಹಾಗೂ ನ್ಯಾ.ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ಪೀಠ ಡೀಲರ್ ಅಸೋಸಿಯೇಷನ್ ಅನ್ನು ತರಾಟೆಗೆ ತೆಗೆದುಕೊಂಡಿದೆ.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಕರಣದ ವಿಚಾರಣೆಯ ವೇಳೆ ಮಾರ್ಚ್ ಕೊನೆಯ ವಾರದಲ್ಲಿ ಬಿಎಸ್-4 ವಾಹನಗಳ ಮಾರಾಟದಲ್ಲಿ ಹೆಚ್ಚಳವಾಗಿದ್ದು, ಈ ಅವಧಿಯಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿತ್ತು ಎಂದು ನ್ಯಾಯಪೀಠ ಹೇಳಿದೆ. ಅಷ್ಟೇ ಅಲ್ಲ ಇದುವರೆಗೂ ಕೂಡ ಈ ಮಾನದಂಡಗಳನ್ನು ಹೊಂದಿರುವ ವಾಹನಗಳನ್ನು ಆನ್ಲೈನ್ ನಲ್ಲಿ ಮಾರಾಟ ನಡೆಸಲಾಗುತ್ತಿದೆ ಎಂದು ನ್ಯಾಯಾಲಯ ಆಕ್ರೋಶವ್ಯಕ್ತಪಡಿಸಿದೆ. ಈ ಮೊದಲು ಪ್ರಕರಣದಲ್ಲಿ ಅಕ್ಟೋಬರ್ 2018ರಲ್ಲಿ ತೀರ್ಪು ನೀಡಿದ್ದ ಸರ್ವೋಚ್ಛ ನ್ಯಾಯಾಲಯ, ಮುಂಬರುವ ಏಪ್ರಿಲ್ ನಿಂದ ದೆಶಾದ್ಯಂತೆ ಯಾವುದೇ BS-4 ಮಾನದಂಡಗಳನ್ನು ಹೊಂದಿರುವ ವಾಹನಗಳ ಖರೀದಿ ಹಾಗೂ ಮಾರಾಟ ಪ್ರಕ್ರಿಯೆ ನಡೆಸಬಾರದು ಮತ್ತು ಅವುಗಳ ನೋಂದಣಿ ಪ್ರಕ್ರಿಯೆಯನ್ನು ಕೂಡ ನಡೆಸಬಾರದು ಎಂದು ಆದೇಶಿಸಿತ್ತು.