ನವದೆಹಲಿ: ದೆಹಲಿಯ ಶಾಹೀನ್ ಬಾಗ್ ಪ್ರದೇಶದಲ್ಲಿ ಶನಿವಾರ ನಾಗರಿಕರ ತಿದ್ದುಪಡಿ ಕಾಯ್ದೆ (ಸಿಎಎ) ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ ವ್ಯಕ್ತಿ ಕಪಿಲ್ ಗುಜ್ಜರ್ ನ್ನು ದೆಹಲಿ ನ್ಯಾಯಾಲಯ ಭಾನುವಾರ ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ಕಳುಹಿಸಿದೆ.
ಈ ಘಟನೆಯ ಹಿಂದೆ ಯಾವುದೇ ಪಿತೂರಿ ಅಥವಾ ಯಾವುದೇ ಸಂಘಟನೆ ಇದೆಯೇ ಎಂದು ತಿಳಿಯಲು ದೆಹಲಿ ಪೊಲೀಸರು ಕಪಿಲ್ ಅವರ ರಿಮಾಂಡ್ ಗೆ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.ಕಪಿಲ್ (25) ಖಾಸಗಿ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಎರಡು ಗುಂಡುಗಳನ್ನು ಗಾಳಿಯಲ್ಲಿ ಹಾರಿಸಿದ ನಂತರ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತಾಗಿ ಮಾತನಾಡಿರುವ ದೆಹಲಿ ಡಿಸಿಪಿ ಚಿನ್ಮಯ್ ಬಿಸ್ವಾಲ್, ಈ ವ್ಯಕ್ತಿಯು ಗುಂಡಿನ ದಾಳಿ ಮಾಡಿದ ತಕ್ಷಣ ಆತನನ್ನು ಪೊಲೀಸರು ತಕ್ಷಣವೇ ಹಿಡಿದಿದ್ದಾರೆ ಎಂದು ಹೇಳಿದ್ದಾರೆ. ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಲು ಕಪಿಲ್ ಬಳಸಿದ ಅಕ್ರಮ ಶಸ್ತ್ರಾಸ್ತ್ರವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶಾಹೀನ್ ಬಾಗ್ನಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರು, ಅವರಲ್ಲಿ ಹೆಚ್ಚಿನವರು ಮಹಿಳೆಯರು, ಪ್ರತಿಭಟನೆಯ ಸ್ಥಳದಲ್ಲಿ ಮಾನವ ಸರಪಳಿಯನ್ನು ರಚಿಸಿದ್ದರು ಎನ್ನಲಾಗಿದೆ.
ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕಳೆದ 50 ದಿನಗಳಿಂದ ಶಾಹೀನ್ ಬಾಗ್‌ನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಇಲ್ಲಿನ ಮಹಿಳೆಯರ ಪ್ರತಿಭಟನೆ ಈಗ ದೇಶದೆಲ್ಲೆಗಿನ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಗೆ ಪ್ರೇರಣೆಯಾಗಿದೆ.ಮಹಾತ್ಮ ಗಾಂಧಿ ಹತ್ಯೆ ದಿನದಂದೇ ರಾಮ ಭಕ್ತ ಗೋಪಾಲ್ ಎಂದು ಹೇಳಿಕೊಂಡಿರುವ ವಿದ್ಯಾರ್ಥಿಯೋಬ್ಬನು ಪೋಲೀಸರ ಸಮ್ಮುಖದಲ್ಲಿಯೇ ಪ್ರತಿಭಟನಾಕಾರರ ಮೇಲೆ ದಾಳಿ ಮಾಡಿದ್ದು ದೇಶವನ್ನು ಬೆಚ್ಚಿ ಬಿಳಿಸಿತ್ತು, ಈ ಸಂದರ್ಭದಲ್ಲಿ ಶಾದಾಬ್ ಎಂಬ ವಿದ್ಯಾರ್ಥಿ ಗಾಯಗೊಂಡಿದ್ದನು.ಈ ಘಟನೆ ನಡೆದ 48 ಗಂಟೆಗಳಲ್ಲಿ ಶಾಹೀನ್ ಬಾಗ್ ನಲ್ಲಿ ಕಪಿಲ್ ಗುಜ್ಜರ್ ಎನ್ನುವ ವ್ಯಕ್ತಿ ಗುಂಡಿನ ದಾಳಿಗೈದಿದ್ದನು.