ನವದೆಹಲಿ: ಮಧ್ಯಪ್ರದೇಶ ಕಾಂಗ್ರೆಸ್ ನಾಯಕರ ವಾಕ್ಚಾತುರ್ಯದ ಬಗ್ಗೆ ಕಠಿಣ ನಿಲುವು ತೆಗೆದುಕೊಂಡಿರುವ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅನಗತ್ಯ ಹೇಳಿಕೆ ನೀಡದಂತೆ ಕಾಂಗ್ರೆಸ್ ಮುಖಂಡರಿಗೆ ಸೂಚನೆ ನೀಡಿದ್ದಾರೆ.
ಯಾವುದೇ ನಾಯಕ ಅಥವಾ ಸರ್ಕಾರದೊಂದಿಗೆ ಯಾರಿಗಾದರೂ ಸಮಸ್ಯೆ ಇದ್ದರೆ ಅದನ್ನು ಅವರು ಪಕ್ಷದೊಳಗಿನ ಸೂಕ್ತ ವೇದಿಕೆಗೆ ಕೊಂಡೊಯ್ಯಬೇಕು, ಅವರ ಸಮಸ್ಯೆಗಳಿಗೆ ಖಂಡಿತವಾಗಿಯೂ ಪರಿಹಾರ ಸಿಗುತ್ತದೆ ಎಂದು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದರು. ನಿಮ್ಮ ಸಮಸ್ಯೆಗಳಿಗೆ ಪಕ್ಷದ ವೇದಿಕೆಯಲ್ಲಿ ಪರಿಹಾರ ದೊರೆಯದಿದ್ದರೆ ಆ ವಿಷಯವನ್ನು ನೀವು ಅಧ್ಯಕ್ಷರಿಗೂ ತಿಳಿಸಬಹುದು ಎಂದು ಸೋನಿಯಾ ತಿಳಿಸಿದ್ದಾರೆ.
ರಾಜ್ಯ(ಮಧ್ಯಪ್ರದೇಶ)ದಲ್ಲಿ ಸುಮಾರು ಒಂದೂವರೆ ದಶಕಗಳ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಹೊಸ ಅಧ್ಯಕ್ಷರ ಹುಡುಕಾಟದಲ್ಲಿದೆ. ಮಧ್ಯಪ್ರದೇಶ ಕಾಂಗ್ರೆಸ್ ಘಟಕದ ರಾಜ್ಯ ಅಧ್ಯಕ್ಷ ಕಮಲ್ ನಾಥ್ ಅವರು ಪ್ರಸ್ತುತ ಮುಖ್ಯಮಂತ್ರಿಯಾಗಿದ್ದು, ವಿಧಾನಸಭಾ ಚುನಾವಣೆಯ ನಂತರ ಹಲವು ಬಾರಿ ಪಕ್ಷದ ಹೈಕಮಾಂಡ್ ಎದುರು ಹೊಸ ಅಧ್ಯಕ್ಷರನ್ನು ನೇಮಿಸುವಂತೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಸ್ತಾಪವನ್ನೂ ನೀಡಿದ್ದಾರೆ. ಅಂದಿನಿಂದ, ಹೊಸ ಅಧ್ಯಕ್ಷರ ಬಗ್ಗೆ ಪಕ್ಷದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ.
ಕಾಂಗ್ರೆಸ್ ಪಕ್ಷದ ಒಳ ಜಗಳದ ಪರಿಣಾಮವಾಗಿ 10 ಕ್ಕೂ ಹೆಚ್ಚು ನಾಯಕರ ಹೆಸರುಗಳು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿದೆ. ಇದರಲ್ಲಿ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್, ಮಾಜಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಮಾಜಿ ವಿರೋಧ ಪಕ್ಷದ ನಾಯಕ ಅಜಯ್ ಸಿಂಗ್, ಮಾಜಿ ಸಚಿವ ಮುಖೇಶ್ ನಾಯಕ್, ಹಾಲಿ ಸಚಿವ ಉಮಾಂಗ್ ಸಿಂಘರ್ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಇದಲ್ಲದೆ ಓಂಕರ್ ಸಿಂಗ್, ಮಾರ್ಕಮ್ ಕಮಲೇಶ್ವರ ಪಟೇಲ್, ಸಜ್ಜನ್ ವರ್ಮಾ, ಬಾಲಾ ಬಚ್ಚನ್, ಮಾಜಿ ಸಂಸದ ಮೀನಾಕ್ಷಿ ನಟರಾಜನ್ ಮತ್ತು ಮಾಜಿ ಮಹಿಳಾ ಸ್ಪೀಕರ್ ಶೋಭಾ ಓಜಾ ಅವರ ಹೆಸರುಗಳೂ ಸಹ ಕೇಳಿಬರುತ್ತಿವೆ.