ಮಾಯಾವತಿ ಅಖಿಲೇಶ್'ಗೆ ಎರಡು ದಿನ ಕಾಲಾವಕಾಶ ನೀಡಿರುವುದೇಕೆ!

ಅಮೇಥಿ-ರಾಯ್ಬರೇಲಿಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆಯೇ ಎಸ್​ಪಿ-ಬಿಎಸ್​ಪಿ?

Last Updated : Mar 14, 2019, 12:41 PM IST
ಮಾಯಾವತಿ ಅಖಿಲೇಶ್'ಗೆ ಎರಡು ದಿನ ಕಾಲಾವಕಾಶ ನೀಡಿರುವುದೇಕೆ! title=

ಲಕ್ನೋ: ಪ್ರಿಯಾಂಕ ಗಾಂಧಿ ಮೀರತ್ ನಲ್ಲಿ ಭೀಮ್ ಆರ್ಮಿ ಅಧ್ಯಕ್ಷ ಚಂದ್ರಶೇಖರ್ ಆಜಾದ್ ಭೇಟಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಒಂದೆಡೆ ಪ್ರಿಯಾಂಕ್ ಅವರು ಚಂದ್ರಶೇಖರ್ ಆಜಾದ್ ಭೇಟಿಯಾಗುತ್ತಿದ್ದಂತೆ, ಮತ್ತೊಂದೆಡೆ ಎಸ್​ಪಿ-ಬಿಎಸ್​ಪಿ ಮುಖ್ಯಸ್ಥರಾದ ಅಖಿಲೇಶ್ ಯಾದವ್-ಮಾಯಾವತಿ ಭೇಟಿಯಾಗಿ ಮಹತ್ವದ ವಿಷಯದ ಬಗ್ಗೆ ಚರ್ಚೆ ನಡೆಸಿದ್ದಾರೆ. ಮೂಲಗಳ ಪ್ರಕಾರ, ಉಭಯ ನಾಯಕರು ಅಮೇಥಿ-ರಾಯ್ಬರೇಲಿಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಮೂಲಗಳಿಂದ ಲಭಿಸಿರುವ ಮಾಹಿತಿ ಪ್ರಕಾರ, ಪ್ರಿಯಾಂಕ ಗಾಂಧಿಯವರು ಚಂದ್ರಶೇಖರ್ ಆಜಾದ್ ಅವರನ್ನು ಭೇಟಿಯಾಗಿರುವ ವಿಷಯದಲ್ಲಿ ಮಾಯಾವತಿ ಕೋಪಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೀರತ್ ನಲ್ಲಿ ಪ್ರಿಯಾಂಕ ಭೇಟಿ ಬಳಿಕ ಮಾಯಾವತಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ತಮ್ಮ ನಿವಾಸ ಮಾಲ್ ಎವೆನ್ನ್ಯೂ ಗೆ ಕರೆಸಿ ಮಾತುಕತೆ ನಡೆಸಿದ್ದು, ಅಮೇಥಿ-ರಾಯ್ಬರೇಲಿ ಕ್ಷೇತ್ರಗಳಲ್ಲಿ ಎಸ್​ಪಿ-ಬಿಎಸ್​ಪಿ ಮೈತ್ರಿ ಕೂಟದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಎರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳುವಂತೆ ಅಖಿಲೇಶ್ ಯಾದವ್ ಗೆ ಸೂಚನೆ ನೀಡಿದ್ದಾರೆ.

ಸುಮಾರು ಅರ್ಧ ಗಂಟೆ ನಡೆದ ಈ ಸಭೆಯಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಜಂಟಿ ಸಾರ್ವಜನಿಕ ಸಭೆಗಳನ್ನೂ ನಡೆಸುವ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ. ಅಮೇಥಿ-ರಾಯ್ಬರೇಲಿ ಕ್ಷೇತ್ರಗಳ ಜೊತೆಗೆ ಇತರ ಲೋಕಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಬದಲಿಸುವ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಲಾಗಿದೆ ಎನ್ನಲಾಗುತ್ತಿದೆ.

ಮೂಲಗಳ ಪ್ರಕಾರ, ಎಸ್​ಪಿ ಪ್ರನಾಳಿಕೆಯಲ್ಲಿ ಬಿಎಸ್​ಪಿಯಾ ಅಜೆಂಡಾ ಕೂಡಾ ಕಾಣಿಸಿಕೊಳ್ಳಲಿದೆ. ಏಕೆಂದರೆ ಬಿಎಸ್​ಪಿ ಈವರೆಗೂ ಯಾವುದೇ ಚುನಾವಣೆಯಲ್ಲಿ ಪಕ್ಷದ ಮ್ಯಾನಿಫೆಸ್ಟೋವನ್ನು ಬಿಡುಗಡೆ ಮಾಡಿಲ್ಲ.

ಎರಡು ದಿನಗಳ ಹಿಂದೆಯಷ್ಟೇ(ಮಾರ್ಚ್ 12) ಘಟಬಂಧನ್ ಕುರಿತು ನಡೆಯುತ್ತಿರುವ ಚರ್ಚೆ ಬಗ್ಗೆ ಬಹುಜನ ಸಮಾಜವಾದಿ ಪಕ್ಷ(ಬಿಎಸ್​ಪಿ) ಮುಖ್ಯಸ್ಥೆ ಮಾಯಾವತಿ, ಬಿಎಸ್​ಪಿ ಯಾವುದೇ ರಾಜ್ಯದಲ್ಲೂ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದರು. ಇದರ ಬೆನ್ನಲ್ಲೇ ಮಾರ್ಚ್ 13ರಂದು ಪ್ರಿಯಾಂಕ ಗಾಂಧಿ ಮೀರತ್ ನಲ್ಲಿ ಭೀಮ್ ಆರ್ಮಿಯ ಚಂದ್ರಶೇಖರ್ ಆಜಾದ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

Trending News