ನವದೆಹಲಿ: ಸಮಯೋಜಿತ ಒಟ್ಟು ಆದಾಯ (ಎಜಿಆರ್) ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಟೆಲಿಕಾಂ ಕಂಪನಿಗಳಿಗೆ ಭಾರಿ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ. ಹೌದು ಬಾಕಿ ಹಣವನ್ನು ಮರುಪಾವತಿ ಮಾಡುವ ವಿಷಯದಲ್ಲಿ ಟೆಲಿಕಾಂ ಕಂಪನಿಗಳಿಗೆ ಸುಪ್ರೀಂ ಕೋರ್ಟ್ ಪ್ರಮುಖ ಪರಿಹಾರ ನೀಡಿದ್ದು, ಸಮಯೋಜಿತ ಒಟ್ಟು ಆದಾಯಕ್ಕೆ (ಎಜಿಆರ್) ಸಂಬಂಧಿಸಿದ ಬಾಕಿ ಹಣವನ್ನು ಮರುಪಾವತಿಸಲು ಸುಪ್ರೀಂ ಕೋರ್ಟ್ ಟೆಲಿಕಾಂ ಕಂಪನಿಗಳಾದ ವೊಡಾಫೋನ್ ಐಡಿಯಾ, ಭಾರ್ತಿ ಏರ್ಟೆಲ್, ಟಾಟಾ ಟೆಲಿ ಸರ್ವೀಸಸ್ಗೆ ಹತ್ತು ವರ್ಷಗಳ ಕಾಲಾವಕಾಶ ನೀಡಿದೆ. ಕರೋನಾ ಕಾಲದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಈ ನಿರ್ಣಯದಿಂದ ಏರ್ಟೆಲ್, ವೊಡಾಫೋನ್ ಕಂಪನಿಗಳಿಗೆ ಭಾರಿ ಪರಿಹಾರ ಸಿಕ್ಕಂತಾಗಿದೆ. ನ್ಯಾಯಮೂರ್ತಿ ಮಿಶ್ರಾ ನಾಳೆ ಅಂದರೆ ಸೆಪ್ಟೆಂಬರ್ 2 ರಂದು ನಿವೃತ್ತರಾಗುತ್ತಿದ್ದಾರೆ ಮತ್ತು ಈ ಪ್ರಕರಣದಲ್ಲಿ ಅವರು ನಿರ್ಧಾರ ನೀಡಬೇಕಾಗಿತ್ತು. ಸಮಯೋಜಿತ ಒಟ್ಟು ಆದಾಯ ಸುಮಾರು 1.6 ಲಕ್ಷ ಕೋಟಿಗಳಷ್ಟಾಗಿದೆ.
ಅರುಣ್ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಮಂಗಳವಾರ 2021 ರ ಮಾರ್ಚ್ 31 ರ ವೇಳೆಗೆ ಟೆಲಿಕಾಂ ಕಂಪನಿಗಳು ತಮ್ಮ ಒಟ್ಟು ಬಾಕಿಯ 10% ಪಾವತಿಸಲಿವೆ ಎಂದು ಹೇಳಿದೆ. ಅಲ್ಲದೆ, ಉಳಿದ ಮೊತ್ತವನ್ನು ಮಾರ್ಚ್ 31, 2031 ರವರೆಗೆ ಕಂತುಗಳಲ್ಲಿ ಪಾವತಿಸಬಹುದು ಎಂದು ಹೇಳಿದೆ. ಕೊರೊನಾ ಪ್ರಕೋಪದ ಹಿನ್ನೆಲೆ ಈ ಸಮಯಾವಕಾಶವನ್ನು ನೀಡಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಇದೇ ವೇಳೆ ಸಮಯಕ್ಕೆ ಸರಿಯಾಗಿ ಕಂತುಗಳನ್ನು ಪಾವತಿಸದೇ ಹೋದಲ್ಲಿ ಕಂಪನಿಗಳು ನ್ಯಾಯಾಲಯದ ಅವಮಾನದ ಪರಿಣಾಮ ಎದುರಿಸಬೇಕಾಗಲಿದೆ ಎಂದು ಪೀಠ ಕಡಕ್ ತಾಕೀತು ಮಾಡಿದೆ.
ಈ ಹಿಂದೆ ಏರ್ಟೆಲ್ 20 ವರ್ಷ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಿತ್ತು. ಏರ್ಟೆಲ್ ಈಗಾಗಲೇ ಸರ್ಕಾರಕ್ಕೆ 13,004 ಕೋಟಿ ರೂ. ಹಣ ಪಾವತಿಸಿದೆ. DoT ಬಳಿ ಭಾರತಿ ಏರ್ಟೆಲ್ನ 10,800 ಕೋಟಿ ರೂ. ಬ್ಯಾಂಕ್ ಗ್ಯಾರಂಟಿ ಇದ್ದು, ಸುಪ್ರೀಂ ಕೋರ್ಟ್ನ ಎಲ್ಲ ಆದೇಶಗಳನ್ನು ಪಾಲಿಸುವುದಾಗಿ ಕಂಪನಿ ತಿಳಿಸಿದೆ.
ಜುಲೈ 21 ರಂದು ನ್ಯಾಯಮೂರ್ತಿ ಅರುಣ್ ಮಿಶ್ರಾ, ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಮತ್ತು ನ್ಯಾಯಮೂರ್ತಿ ಎಂ.ಆರ್.ಶಾ ಅವರ ನ್ಯಾಯಪೀಠವು ಟೆಲಿಕಾಂ ಕಂಪೆನಿಗಳು ಸಮಯೋಜಿತ ಒಟ್ಟು ಆದಾಯಕ್ಕೆ ಸಂಬಂಧಿಸಿದ ಬಾಕಿ ಪಾವತಿಸಲು ಗಡುವು ಕುರಿತು ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ತನ್ನ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಸಮಯೋಜಿತ ಒಟ್ಟು ಆದಾಯ (ಎಜಿಆರ್) ಗೆ ಸಂಬಂಧಿಸಿದ ಬಾಕಿಗಳನ್ನು ಮರು ಅಂದಾಜು ಮಾಡುವ ಬಗ್ಗೆ ಯಾವುದೇ ವಾದಗಳನ್ನು ಕೇಳಲಾಗುವುದಿಲ್ಲ ಎಂದು ನ್ಯಾಯ ಪೀಠ ಹೇಳಿತ್ತು .