ನವದೆಹಲಿ: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಕೇಂದ್ರ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ(P Chidambaram) ಅವರಿಗೆ ಕೊನೆಗೂ ಷರತ್ತು ಬದ್ಧ ಜಾಮೀನು ದೊರೆತಿದೆ. ಈ ಪ್ರಕರಣದಲ್ಲಿ ಜಾಮೀನು ನಿರಾಕರಿಸಿದ್ದ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಚಿದಂಬರಂ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ್ದ ಸುಪ್ರೀಂಕೋರ್ಟ್ನ ಆರ್.ಬಾನುಮತಿ, ಎ.ಎಸ್.ಬೋಪಣ್ಣ ಮತ್ತು ಹೃಷಿಕೇಶ ರಾಯ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ನವೆಂಬರ್ 28 ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
ಇಂದು ಈ ಬಗ್ಗೆ ತೀರ್ಪು ಪ್ರಕಟಿಸಿರುವ ಸುಪ್ರೀಂಕೋರ್ಟ್ನ ತ್ರಿಸದಸ್ಯ ಪೀಠವು, ಸುಮಾರು 105 ದಿನಗಳ ಕಾಲ ಜೈಲಿನಲ್ಲಿದ್ದ ಚಿದಂಬರಂ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡುವ ಮೂಲಕ ದೆಹಲಿಯ ತಿಹಾರ್ ಕೇಂದ್ರ ಕಾರಾಗೃಹದಿಂದ ಬಿಡುಗಡೆಗೆ ಆದೇಶಿಸಿದೆ.
ನ್ಯಾಯಪೀಠವು ತೀರ್ಪು ಪ್ರಕಟಿಸುವ ವೇಳೆ ಚಿದಂಬರಂ ಅವರಿಗೆ 2 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ನೀಡುವಂತೆ ನಿರ್ದೇಶಿಸಿತು. ಇದೇ ವೇಳೆ ನ್ಯಾಯಾಲಯದ ಅನುಮತಿಯಿಲ್ಲದೆ ಚಿದಂಬರಂ ವಿದೇಶ ಪ್ರವಾಸ ಕೈಗೊಳ್ಳದಂತೆ ಸರ್ವೋಚ್ಛ ನ್ಯಾಯಾಲಯ ನಿರ್ದೇಶಿಸಿದೆ.