ನವದೆಹಲಿ: ಸಂಸತ್ತಿನ ಎರಡೂ ಸದನಗಳಲ್ಲಿ ತ್ರಿವಳಿ ತಲಾಖ್ ಮಸೂದೆ ಅಂಗೀಕಾರವಾದ ಬೆನ್ನಲ್ಲೇ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸೇರಿದಂತೆ ಮುಸ್ಲಿಂ ಸಮುದಾಯದ ಅನೇಕರು ಈ ಮಸೂದೆಯನ್ನು ವಿರೋಧಿಸಿದ್ದಾರೆ.
ಇದೇ ವೇಳೆ ಮಾತನಾಡಿರುವ ಮುಸ್ಲಿಂ ವಿದ್ವಾಂಸ ಸಾಜಿದ್ ರಶೀದಿ ಅವರು ಮುಸ್ಲಿಮರು ಅಥವಾ ಮುಸ್ಲಿಂ ಸಂಘಟನೆಗಳು ಈ ಮಸೂದೆಗೆ ವಿರುದ್ಧವಾಗಿಲ್ಲ. ಆದರೆ, ತ್ರಿವಳಿ ತಲಾಖ್ ಮಸುದೆಯಲ್ಲಿ ಕೆಲವು ನ್ಯೂನತೆಗಳಿವೆ. ಹೊಸ ಕಾನೂನಿನ ಪ್ರಕಾರ, ಮುಸ್ಲಿಂ ಮಹಿಳೆಯರು ತಮಗೆ ತ್ರಿವಳಿ ತಲಾಖ್ ನೀಡಿರುವ ಬಗ್ಗೆ ಮ್ಯಾಜಿಸ್ಟ್ರೇಟ್ ಮುಂದೆ ಸಾಬೀತುಪಡಿಸಬೇಕು. ಇದು ಈ ಮಸೂದೆಯ ದುರ್ಬಲ ಭಾಗವಾಗಿದೆ ಎಂದಿದ್ದಾರೆ.
ಅದೇ ರೀತಿ, ವ್ಯಕ್ತಿಯು ಜೈಲಿಗೆ ಹೋದ ಬಳಿಕ ಮಕ್ಕಳ ಲಾಲನೆ, ಪಾಲನೆ ಯಾರು ಮಾಡುತ್ತಾರೆ ಎಂಬುದನ್ನು ಮ್ಯಾಜಿಸ್ಟ್ರೇಟ್ ನಿರ್ಧರಿಸುತ್ತಾರೆ. ಆದರೆ ಉಸ್ತುವಾರಿಗಾಗಿ ಸರ್ಕಾರ ಯಾವುದೇ ನಿಬಂಧನೆಗಳನ್ನು ಮಾಡಿಲ್ಲ. ಇದು ಸಿವಿಲ್ ವಿಷಯ ಆಗಿರುವಾಗ ಮಸೂದೆಯಲ್ಲಿ ಇದನ್ನು ಕ್ರಿಮಿನಲ್ ಪ್ರಕರಣವೆಂದು ಪರಿಗಣಿಸಲಾಗಿದೆ. ಅಲ್ಲದೆ, ಹಿಂದೂ ವ್ಯಕ್ತಿ ವಿಚ್ಚೇದನ ನೀಡಿದರೆ ಆತನಿಗೆ 1 ವರ್ಷ ಜೈಲು ಶಿಕ್ಷೆ ನಿಗದಿಪಡಿಸಲಾಗಿದೆ. ಆದರೆ ಮುಸ್ಲಿಂ ವ್ಯಕ್ತಿಗೆ 3 ವರ್ಷ ಶಿಕ್ಷೆ ವಿಧಿಸಲಾಗಿದೆ. ಒಂದು ದೇಶದಲ್ಲಿ ಒಂದೇ ವಿಷಯಕ್ಕೆ ಎರಡು ಕಾನೂನುಗಳು ಇರಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಅಷ್ಟೇ ಅಲ್ಲದೆ, ಮುಸ್ಲಿಂ ಕುಟುಂಬಗಳನ್ನು ಒಡೆಯಲು ಸರ್ಕಾರ ಪ್ರಯತ್ನಿಸುತ್ತಿ. ಈ ದೇಶದೊಳಗೆ ಮುಸ್ಲಿಮರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಸಾಕಷ್ಟು ಗಲಭೆಗಳು ನಡೆದಿವೆ. ಇನ್ನೂ ಸಾವಿರಾರು ಮುಸ್ಲಿಮರು ಜೈಲಿನಲ್ಲಿದ್ದಾರೆ. ಈ ಹೊಸ ಮಸೂದೆಯಿಂದಾಗಿ ಅವರು ಸಹ ತೊಂದರೆ ಅನುಭವಿಸುತ್ತಾರೆ ಎಂದು ಕಿಡಿಕಾರಿದ್ದಾರೆ.