ಚೆನ್ನೈ: ತಮಿಳುನಾಡಿನಲ್ಲಿ 38 ಲೋಕಸಭಾ ಕ್ಷೇತ್ರಗಳಿಗೆ ಮತ್ತು ಪುದುಚೇರಿಯಲ್ಲಿ ಒಂದು ಕ್ಷೇತ್ರದ ಮತಗಣನೆ ಆರಂಭವಾಗಿದೆ. ಸುಮಾರು 10 ಗಂಟೆಯಿಂದ ಚುನಾವಣಾ ಟ್ರೆಂಡ್ ಕೂಡ ಬರಲಾರಂಭಿಸಿದ್ದು ತಮಿಳುನಾಡಿನ 16 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್, ನಾಲ್ಕರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿವೆ.
ತಮಿಳುನಾಡಿನ 38 ಲೋಕಸಭಾ ಕ್ಷೇತ್ರಗಳಿಂದ 822 ಅಭ್ಯರ್ಥಿಗಳು ಕಣದಲ್ಲಿದ್ದರೆ, ಪುದುಚೇರಿಯ 1 ಕ್ಷೇತ್ರದಲ್ಲಿ 18 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷಿಸುತ್ತಿದ್ದಾರೆ.
ರಾಜ್ಯದಾದ್ಯಂತ 45 ಕೇಂದ್ರಗಳಲ್ಲಿ ಮತಗಳನ್ನು ಎಣಿಸುವ ಕಾರ್ಯ ನಡೆಯುತ್ತಿದ್ದು 17,000 ಚುನಾವಣಾ ಸಿಬ್ಬಂದಿ ಮತ್ತು 45,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ತಮಿಳುನಾಡಿನಲ್ಲಿ ಎಐಎಡಿಎಂಕೆ-ಬಿಜೆಪಿ ಮತ್ತು ಡಿಎಂಕೆ-ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಇದೆ. ಇದೇ ವೇಳೆ ಪುದುಚೇರಿ ಏಕೈಕ ಸ್ಥಾನದಲ್ಲಿ, ಆಲ್ ಇಂಡಿಯಾ ಎನ್ಆರ್ ಕಾಂಗ್ರೆಸ್ (ಎಐಆರ್ಆರ್ಸಿ) ಮತ್ತು ಕಾಂಗ್ರೆಸ್ ಎರಡು ಪಕ್ಷಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ.
ತಮಿಳುನಾಡಿನಲ್ಲಿ ಮುಖ್ಯ ರಾಜಕೀಯ ನೇತಾರರಾದ ಎಂ. ಕರುಣಾನಿಧಿ ಮತ್ತು ಜೆ. ಜಯಲಲಿತಾ ಅವರಿಲ್ಲದ ಮೊದಲ ಚುನಾವಣೆ ಇದಾಗಿದೆ. ಕಾಂಗ್ರೆಸ್-ಡಿಎಂಕೆ ತಮಿಳುನಾಡಿನಲ್ಲಿ 27-30 ಸ್ಥಾನಗಳಿಗೆ ಹತ್ತಿರವಾಗಲಿದೆ ಮತ್ತು ಬಿಜೆಪಿ-ಎಐಎಡಿಎಂಕೆ ಮೈತ್ರಿ 7-9 ಸ್ಥಾನಗಳನ್ನು ಪಡೆಯಲಿದೆ ಎಂದು ಬಹುತೇಕ ಎಕ್ಸಿಟ್ ಪೋಲ್ಗಳು ಊಹಿಸಿವೆ. ಇಂದು ಸಂಜೆ ವೇಳೆ ಫಲಿತಾಂಶ ಪ್ರಕಟವಾಗಲಿದೆ.