ದೆವ್ವದ ಬಗ್ಗೆ ಮೂಢನಂಬಿಕೆ ತೊಡೆದುಹಾಕಲು ಸಮಾಧಿಯ ಮೇಲೆ ಮಲಗಿದ ಟಿಡಿಪಿ ಎಂಎಲ್ಎ

  

Last Updated : Jun 26, 2018, 01:10 PM IST
ದೆವ್ವದ ಬಗ್ಗೆ ಮೂಢನಂಬಿಕೆ ತೊಡೆದುಹಾಕಲು ಸಮಾಧಿಯ ಮೇಲೆ ಮಲಗಿದ ಟಿಡಿಪಿ ಎಂಎಲ್ಎ title=

ಹೈದರಾಬಾದ್: ಜನರಲ್ಲಿ ದೆವ್ವ-ಭೂತಗಳ ಬಗ್ಗೆ ಇರುವ ಮೂಢನಂಬಿಕೆ ಹೋಗಲಾಡಿಸಲು ಪಶ್ಚಿಮ ಗೋದಾವರಿ ಮೂಲದ ಟಿಡಿಪಿ ಎಂಎಲ್ಎ ನಿಮ್ಮಾಲಾ ರಾಮ ನಾಯ್ಡು ಅವರು ಸ್ವತಃ ತಾವೇ ಸಮಾಧಿಯ ಮೇಲೆ ಮಲಗಿದ ಘಟನೆ ಪಾಲಾಕೋಲ್ ಪಟ್ಟಣದಲ್ಲಿ ಇತ್ತೀಚೆಗೆ ನಡೆದಿದೆ.

ಪಾಲಾಕೋಲ್ ಪಟ್ಟಣದಲ್ಲಿರುವ ಸ್ಮಶಾನದ ಕಟ್ಟಡ ಮರುನಿರ್ಮಾಣ ಕಾರ್ಯಕ್ಕೆ ಶಾಸಕ ನಿಮ್ಮಾಲಾ ರಾಮ ನಾಯ್ಡು ಆಲೋಚಿಸಿದ್ದರು. ಆದರೆ, ಸ್ಮಶಾನದಲ್ಲಿ ದೆವ್ವ-ಭೂತಗಳಿವೆ ಎಂಬ ಭಯ ಮತ್ತು ಮೂಢನಂಬಿಕೆಯಿಂದ ಕೆಲಸಗಾರರು ಬಾರದ ಹಿನ್ನೆಲೆಯಲ್ಲಿ ಸ್ವತಃ ಶಾಸಕ ನಿಮ್ಮಾಲಾ ರಾಮ ನಾಯ್ಡು ಅವರೇ ಸ್ಮಶಾನದ ಆವರಣದ ಸಮಾಧಿಯೊಂದರ ಮೇಲೆ ಜೂನ್ 22ರಿಂದ ಸತತ ಮೂರು ದಿನ ಮಲಗುವ ಮೂಲಕ ಸ್ಮಶಾನದಲ್ಲಿ ಯಾವುದೇ ದೆವ್ವ-ಭೂತಗಳಿಲ್ಲ, ಅದೆಲ್ಲಾ ಕೇವಲ ಮೂಢನಂಬಿಕೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ನಂತರ ಕೆಲಸಗಾರರು ಕಟ್ಟಡ ಮರುನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ. 

ಮೊದಲ ದಿನ ಸ್ಮಶಾನದ ಸಮಾಧಿಯ ಮೇಲೆ ಮಲಗಿದ್ದ ಶಾಸಕ ನಿಮ್ಮಾಲಾ ರಾಮ ನಾಯ್ಡು, ತಾವು ಜನರಲ್ಲಿರುವ ಮೂಢನಂಬಿಕೆ ಹೋಗಲಾಡಿಸಲು ಇನ್ನಷ್ಟು ದಿನ ಸ್ಮಶಾನದಲ್ಲಿ ತಂಗುವುದಾಗಿ ಹೇಳಿದ್ದರು. ಆದರೆ ಮೂರನೇ ದಿನ ನಾಯ್ಡು ಅವರೊಂದಿಗೆ ಸಾಕಷ್ಟು ಗ್ರಾಮಸ್ಥರೂ ಸಹ ಸ್ಮಶಾನದಲ್ಲಿ ತಂಗಿದರು ಎನ್ನಲಾಗಿದೆ. 

ಶಾಸಕ ನಿಮ್ಮಾಲಾ ರಾಮ ನಾಯ್ಡು ಅವರ ಕಾರ್ಯಕ್ಕೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನಿಮ್ಮಾಲಾ ರಾಮ ನಾಯ್ಡು ಅವರನ್ನು "ಮೂಢನಂಬಿಕೆ ವಿರುದ್ಧದ ಹೋರಾಟಗಾರ" ಎಂದು ಟ್ವೀಟ್ ಮಾಡಿದ್ದಾರೆ.

Trending News