Telangana: ಶಸ್ತ್ರ ಚಿಕಿತ್ಸೆಗೆ ಕೂಡಿಟ್ಟಿದ್ದ 2 ಲಕ್ಷ ರೂ. ಹರಿದು ಹಾಕಿದ ಇಲಿಗಳು..!

ಬಹಳ ದುಃಖದಲ್ಲಿರುವ ರೆಡ್ಯಾ ನಾಯಕ್ ಅವರಿಗೆ ಮುಂದೇನು ಮಾಡಬೇಕೆಂದೇ ತೋಚುತ್ತಿಲ್ಲ.

Written by - Puttaraj K Alur | Last Updated : Jul 18, 2021, 12:55 PM IST
  • ಕಷ್ಟಪಟ್ಟು ಸಂಪಾದಿಸಿ ಇಟ್ಟಿದ್ದ 2 ಲಕ್ಷ ರೂ. ಹಣವನ್ನು ಹರಿದು ಹಾಕಿದ ಇಲಿಗಳು
  • ತುಂಡು ತುಂಡಾದ ನೋಟು ಬದಲಾಯಿಸಿ ಕೊಡುವಂತೆ ಬ್ಯಾಂಕುಗಳಿಗೆ ಅಲೆದರೂ ಪ್ರಯೋಜನವಾಗಿಲ್ಲ
  • ಶಸ್ತ್ರಚಿಕಿತ್ಸೆಗೆಂದು ಕೂಡಿಟ್ಟಿದ್ದ ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ತರಕಾರಿ ವ್ಯಾಪಾರಿ
Telangana: ಶಸ್ತ್ರ ಚಿಕಿತ್ಸೆಗೆ ಕೂಡಿಟ್ಟಿದ್ದ 2 ಲಕ್ಷ ರೂ. ಹರಿದು ಹಾಕಿದ ಇಲಿಗಳು..! title=
ಇಲಿಗಳ ಪಾಲಾದ 2 ಲಕ್ಷ ರೂ. ಹಣ

ತೆಲಂಗಾಣ: ತರಕಾರಿ ಮಾರಾಟಗಾರನೊಬ್ಬ ಶಸ್ತ್ರ ಚಿಕತ್ಸೆಗೆಂದು ಕೂಡಿಟ್ಟದ 2 ಲಕ್ಷ ರೂ. ಹಣವನ್ನು ಇಲಿಗಳು ಹರಿದು ಹಾಕಿರುವ ಘಟನೆ ತೆಲಂಗಾಣದ ಮಹಾಬೂಬಾದ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ 2 ಲಕ್ಷ ರೂ. ಕಳೆದುಕೊಂಡಿರುವ ವ್ಯಕ್ತಿಗೆ ಇದೀಗ ದಿಕ್ಕುದೋಚದಂತಾಗಿದ್ದು, ದುಃಖದಲ್ಲಿ ಕಾಲ ಕಳೆಯುವಂತಾಗಿದೆ.

ಇಂದಿರಾನಗರದ ತಾಂಡಾ ನಿವಾಸಿ ರೆಡ್ಯಾ ನಾಯಕ್ ಎಂಬುವರು ತಮ್ಮ ದ್ವಿಚಕ್ರ ವಾಹನದಲ್ಲಿ ಪ್ರತಿದಿನ ತರಕಾರಿ(Vegetable) ಮಾರಾಟ ಮಾಡುತ್ತಾರೆ. ತುಂಬಾ ಕಷ್ಟಪಟ್ಟು ಸಂಪಾದಿಸಿದ್ದ 500 ರೂ. ಮುಖಬೆಲೆಯ 2 ಲಕ್ಷ ರೂ.ವನ್ನು ಕಾಟನ್ ಬ್ಯಾಗಿನಲ್ಲಿರಿಸಿ ಲಾಕರ್ ನಲ್ಲಿ ಭದ್ರವಾಗಿಟ್ಟಿದ್ದರು. ಇತ್ತೀಚೆಗೆ ಲಾಕರ್ ತೆಗೆದು ನೋಡಿದಾಗ ಅವರಿಗೆ ಶಾಕ್ ಆಗಿದೆ. ಎಲ್ಲ ನೋಟುಗಳನ್ನು ಇಲಿಗಳು ತಿಂದು ಹರಿದು ಹಾಕಿಬಿಟ್ಟಿವೆ.

ಇದನ್ನೂ ಓದಿ: Good News: SSLCಯಲ್ಲಿ ಫೇಲಾಗಿದ್ದೀರಾ? ಚಿಂತೆ ಬಿಟ್ಟು ನೈಯ್ಯಾ ಪೈಸೆ ಕೂಡ ಖರ್ಚು ಮಾಡದೆ ಗಿರಿಧಾಮಗಳಿಗೆ ಭೇಟಿ ನೀಡಿ

ಹೊಟ್ಟೆನೋವಿನಿಂದ ಬಳಲುತ್ತಿದ್ದ ರೆಡ್ಯಾ ನಾಯಕ್ ಚಿಕಿತ್ಸೆ ಪಡೆಯಲೆಂದು ವೈದ್ಯರ ಬಳಿ ಹೋಗಿದ್ದಾರೆ. ನಿಮಗೆ ಸರ್ಜರಿ ಮಾಡಬೇಕು, ಅದಕ್ಕೆ 4 ಲಕ್ಷ ರೂ. ಖರ್ಚಾಗುತ್ತದೆ ಎಂದು ಡಾಕ್ಟರ್ ಹೇಳಿದ್ದರು. ಮರಳಿ ಮನಗೆ ಬಂದ ರೆಡ್ಯಾ ಎಂದಿನಂತೆ ಮತ್ತೆ ತರಕಾರಿ ಮಾರಾಟ ಮಾಡುತ್ತಿದ್ದರು. ಈ ವೇಳೆ ಮತ್ತೆ ಹೊಟ್ಟೆನೋವು ಜಾಸ್ತಿಯಾಗಿದೆ. ಹೇಗಾದರೂ ಮಾಡಿ ಸರ್ಜರಿ(Surgery) ಮಾಡಿಸಿಕೊಳ್ಳಲೇಬೇಕೆಂದು ನಿರ್ಧರಿಸಿದ ಅವರು ಕಷ್ಟಪಟ್ಟು ಹಣ ಸಂಪಾದಿಸಲು ತೀರ್ಮಾನಿಸಿದ್ದರು. ಅದರಂತೆ ಹೆಚ್ಚು ಕೆಲಸ ಮಾಡಿ ತರಕಾರಿ ಮಾರಾಟ ಮಾಡಿ ಹಣ ಉಳಿಸುತ್ತಿದ್ದರು. ಅಲ್ಲದೆ ತಮ್ಮ ಕೆಲ ಸಂಬಂಧಿಕರ ಬಳಿ ಸಾಲವನ್ನು ಪಡೆದುಕೊಂಡಿದ್ದರು.  ಹೀಗೆ ಸಂಗ್ರಹಿಸಿದ್ದ 2 ಲಕ್ಷ ರೂ. ಹಣವನ್ನು ಅವರು ಲಾಕರ್ ನಲ್ಲಿ ತೆಗೆದಿರಿಸಿದ್ದರು. ಈಗ ನೋಡಿದರೆ ಇಲಿಗಳು ಆ ಎಲ್ಲ ಹಣವನ್ನು ತಿಂದು, ಹರಿದು ಹಾಕಿವೆ.

ಇದರಿಂದ ಬಹಳ ದುಃಖದಲ್ಲಿರುವ ರೆಡ್ಯಾ ನಾಯಕ್ ಅವರಿಗೆ ಮುಂದೇನು ಮಾಡಬೇಕೆಂದೇ ತೋಚುತ್ತಿಲ್ಲ. ತಮ್ಮ ಬಳಿ ಇರುವ ಹರಿದ ನೋಟುಗಳನ್ನು ಬದಲಾಯಿಸಿಕೊಡುವಂತೆ ಅವರು ಜಿಲ್ಲೆಯಲ್ಲಿರುವ ಅನೇಕ ಬ್ಯಾಂಕು(Bank)ಗಳಿಗೆ ಭೇಟಿ ನೀಡಿದ್ದಾರೆ. ಆದರೆ ಏನೂ ಪ್ರಯೋಜನವಾಗಿಲ್ಲ. ‘ನನ್ನ ಹೊಟ್ಟೆ ನೋವಿನ ಚಿಕಿತ್ಸೆಗೆಂದು ಕೂಡಿಟ್ಟದ 2 ಲಕ್ಷ ರೂ. ಹಣವನ್ನು ಇಲಿಗಳು ಹರಿದು ಹಾಕಿವೆ. ಹರಿದ ನೋಟುಗಳನ್ನು ಬದಲಾಯಿಸಿ, ನನ್ನ ಸಹಾಯಕ್ಕೆ ಬರುವಂತೆ ಮಹಾಬೂಬಾದ್ ನಲ್ಲಿರುವ ಅನೇಕ ಬ್ಯಾಂಕುಗಳಿಗೆ ಅಲೆದಾಡಿದ್ದೇನೆ. ಆದರೆ ಹರಿದ ನೋಟುಗಳನ್ನು ಬದಲಾಯಿಸಿಕೊಡಲು ಆಗುವುದಿಲ್ಲವೆಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆಂದು ಗೋಳು ತೋಡಿಕೊಂಡಿದ್ದಾರೆ.  

ಇದನ್ನೂ ಓದಿ: ಉತ್ತರ ಪ್ರದೇಶ ವಿಧಾನಸಭೆ ಸಚಿವಾಲಯದಲ್ಲಿ ಜೀನ್ಸ್ ಮತ್ತು ಟೀ ಶರ್ಟ್ ಧರಿಸುವುದಕ್ಕೆ ನಿಷೇಧ

‘ಹೈದರಾಬಾದ್(Hyderabad)ನಲ್ಲಿರುವ ಆರ್‌ಬಿಐ ಕಚೇರಿಗೆ ಭೇಟಿ ನೀಡಿ ವಿಚಾರಿಸಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನನ್ನ ಚಿಕಿತ್ಸೆಗೆ ಈಗ ಹಣದ ಅಗತ್ಯವಿದೆ. ಯಾರಾದರೂ ನನ್ನ ಸಹಾಯಕ್ಕೆ ಬರುತ್ತಾರಾ ಎಂದು ಕಾಯುತ್ತಿದ್ದೇನೆ’ ಎಂದು ರೆಡ್ಯಾ ನಾಯಕ್ ಹೇಳಿದ್ದಾರೆ. ಈ ಹಿಂದೆ ಆರ್‌ಬಿಐ ಹೊಲಸಾದ, ತುಂಡಾದ ಹಾಗೂ ದೋಷಯುಕ್ತ ಕರೆನ್ಸಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಸಾರ್ವಜನಿಕರಿಗೆ ಸೌಲಭ್ಯ ನೀಡುವಂತೆ ಬ್ಯಾಂಕುಗಳಿಗೆ ನಿರ್ದೇಶಿಸಿತ್ತು. ಆದರೆ ಚೂರು ಚೂರಾಗಿರುವ ನೋಟುಗಳಿಗೆ ಬದಲಿ ನೋಟು ನೀಡುವುದು ಆರ್‌ಬಿಐನ ಕ್ರಮದಲ್ಲಿಲ್ಲ.   

ಕಷ್ಟಪಟ್ಟು ಸಂಪಾದಿಸಿದ 2 ಲಕ್ಷ ರೂ. ಹಣವನ್ನು ಇಲಿಗಳು ಹರಿದು ಹಾಕಿರುವುದರಿಂದ ರೆಡ್ಯಾ ನಾಯಕ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಹೊಟ್ಟೆ ನೋವಿನ ಚಿಕಿತ್ಸೆಗೆ ಹಣದ ಅವಶ್ಯಕತೆ ಇರುವುದರಿಂದ ಆರ್‌ಬಿಐ(RBI) ಅಧಿಕಾರಿಗಳು ಸಹಾಯ ಮಾಡ್ತಾರಾ ಅನ್ನೋದು ಪ್ರಶ್ನೆಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News