ಬೆಳಗಾವಿ: ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹಾಳಾದಷ್ಟು ಎಲ್ಲಿಯೂ ಆಗಿಲ್ಲ. ಹೀಗಿರುವಾಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಇಲ್ಲಿಗೆ ಬಂದು ನಮಗೆ ಪಾಠ ಹೇಳಬೇಕೇ ? ಕಾನೂನು ಸುವ್ಯವಸ್ಥೆ ಕುರಿತು ಅವರಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯತೆ ನಮಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಟಾಂಗ್ ನೀಡಿದ್ದಾರೆ.
ಇನ್ನು ಟಿಪ್ಪುವನ್ನು ಪೂಜೆಮಾಡುವವರು ಅಧಿಕಾರಕ್ಕೆ ಬರಬಾರದು ಎಂಬ ಯೋಗಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿದ್ದು, ನನ್ನ ಹೆಸರಿನಲ್ಲೇ ರಾಮ ಇದೆ. ನಾವು ಟಿಪ್ಪೂ ಜಯಂತಿ ಅಷ್ಟೇ ಅಲ್ಲ, ಹನುಮ ಜಯಂತಿ, ರಾಮನವಮಿಯನ್ನೂ ಮಾಡುತ್ತೇವೆ. ಜೊತೆಗೆ ಬಸವ, ವಾಲ್ಮೀಕಿ, ಕನಕದಾಸರು ಹಾಗೂ ಕಿತ್ತೂರು ರಾಣಿ ಚೆನ್ನಮ್ಮ, ಅವರ ಜಯಂತಿಯನ್ನೂ ಮಾಡುತ್ತೇವೆ ಎಂದು ತಿಳಿಸಿದರು.
ಮುಂದುವರೆದು ಮಾತನಾಡಿದ ಅವರು, ಇಷ್ಟಕ್ಕೂ ಕೋಮು ಗಲಭೆಯ ಸೃಷ್ಟಿಕರ್ತರೇ ಬಿಜೆಪಿಯವರು. ಅವರಿಂದ ನಾವು ಪಾಠ ಕಲಿಯಬೇಕೇ? ಎಂದು ಪ್ರಶ್ನಿಸಿದ್ದಾರೆ.
ಗುರುವಾರ ಹುಬ್ಬಳ್ಳಿಯಲ್ಲಿ ನಡೆದ ಪರಿವರ್ತನೆಯಲ್ಲಿ ಪಾಲ್ಗೊಂಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾಂಗ್ರೇಸ್ ನವರು ಹನುಮನನ್ನು ಪೂಜಿಸಲ್ಲ, ಟಿಪ್ಪುವನ್ನು ಪೂಜಿಸುತ್ತಾರೆ. ಟಿಪ್ಪುವನ್ನು ಪೂಜೆಮಾಡುವವರು ಅಧಿಕಾರಕ್ಕೆ ಬರಬಾರದು ಎಂದು ಹೇಳಿದ್ದರು. ಅಲ್ಲದೆ, ಕರ್ನಾಟಕದಲ್ಲಿ ಕಾಂಗ್ರೇಸ್ ನೇತೃತ್ವದ ಸರ್ಕಾರದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಹಲವು ಹತ್ಯೆಗಳು ನಡೆದು ಕರ್ನಾಟಕಕ್ಕೇ ಕಳಂಕ ತಂದಿದೆ ಎಂದೂ ಸಹ ಕಾಂಗ್ರೇಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.