ನವದೆಹಲಿ: 2019ರ ಗಣರಾಜ್ಯೋತ್ಸವ ಆಚರಣೆಗೆ ಮುಖ್ಯ ಅತಿಥಿಯಾಗಿ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಮಫೋಸಾ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಗಣರಾಜ್ಯೋತ್ಸವ ಮುಖ್ಯ ಅತಿಥಿ ಆಹ್ವಾನ ನಿರಾಕರಿಸಿದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಆಫ್ರಿಕನ್ ಮುಖಂಡರ ಪಟ್ಟಿ ಸಿದ್ದಪಡಿಸಿದ್ದು, ದಕ್ಷಿಣ ಆಫ್ರಿಕಾದ ಆಧ್ಯಕ್ಷ ಸಿರಿಲ್ ರಮಫೊಸಾ ಹೆಸರು ಅಂತಿಮವಾಗಿದೆ ಎನ್ನಲಾಗುತ್ತಿದೆ. ಆದರೆ, ಭಾರತ ಸರಕಾರದಿಂದ ಈ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.
ಪ್ರತಿವರ್ಷ ಗಣರಾಜ್ಯೋತ್ಸವ ಆಚರಣೆಗೆ ಮುಖಿ ಅತಿಥಿಯಾಗಿ ವಿದೇಶಿ ನಾಯಕರನ್ನು ಆಹ್ವಾನಿಸುವುದು ಭಾರತದಲ್ಲಿ ರೂಢಿಯಲ್ಲಿದೆ. 2015ರಲ್ಲಿ ಅಮೆರಿಕಾದ ಆಗಿನ ಅಧ್ಯಕ್ಷ ಬರಾಕ್ ಒಬಾಮಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. 2016ರಲ್ಲಿ ಫ್ರಾನ್ಸ್'ನ ಆಗಿನ ಅಧ್ಯಕ್ಷ ಹೋಲ್ಯಾಂಡೋ ಅವರು ಪಾಲ್ಗೊಂಡಿದ್ದರು. ಈ ವರ್ಷದ ಸಮಾರಂಭದಲ್ಲಿ ಆಸಿಯಾನ್ ದೇಶಗಳ 10 ನಾಯಕರು ಮುಖ್ಯ ಅತಿಥಿಗಳಾಗಿ ಹಾಜರಾಗಿದ್ದರು.