ಜಮ್ಮು-ಕಾಶ್ಮೀರದ ಶೋಪಿಯಾನ್'ನಲ್ಲಿ ಇಂದು ಬೆಳಗಿನ ಜಾವದಿಂದ ಆರಂಭವಾಗಿರುವ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆ ಇಬ್ಬರು ಉಗ್ರರನ್ನು ಹತ್ಯೆಗೈದಿದೆ. ಶೋಪಿಯಾನ್ನ ಅವೆನೀರಾ ಜಿಲ್ಲೆಯಲ್ಲಿ ಇನ್ನೂ ಕೆಲ ಉಗ್ರರು ಅಡಗಿರುವ ಶಂಕೆ ವ್ಯಕ್ತವಾಗಿದ್ದು ಶೋಧ ಕಾರ್ಯಾಚರಣೆಯನ್ನು ಮುಂದುವರೆಸಲಾಗಿದೆ.
ನ್ಯೂಸ್ ಏಜೆನ್ಸಿ ANI ವರದಿ ಪ್ರಕಾರ, ಶೋಪಿಯನ್ನ ಅವೆನೆರಾ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಮಾಹಿತಿ ಪಡೆದ ಭದ್ರತಾ ಪಡೆಗಳು ಶೋಧ ಕಾರ್ಯ ಆರಂಭಿಸಿದರು. ಆ ವೇಳೆ ಉಗ್ರರು ಭದ್ರತಾ ಪಡೆಯ ಮೇಲೆ ಗುಂಡಿನ ಮಳೆ ಸುರಿಸಿದ್ದಾರೆ. ಇದಕ್ಕೆ ಪ್ರತಿದಾಳಿ ನಡೆಸಿದ ಭದ್ರತಾ ಪಡೆ ಇಬ್ಬರು ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮತ್ತು ಕ್ರಮಗಳನ್ನು ಭಂಗಗೊಳಿಸಲು ಭಯೋತ್ಪಾದಕರು ಪದೇಪದೇ ಪ್ರಯತ್ನಿಸಿದ್ದಾರೆ, ಆಗಾಗ್ಗೆ ನಿಯಂತ್ರಣ ರೇಖೆಯ ಉದ್ದಗಲಕ್ಕೂ ಸೂಕ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪಾಕಿಸ್ತಾನ ಮೂಲದ ಹಲವಾರು ಭಯೋತ್ಪಾದಕ ಸಂಘಟನೆಗಳು ಭಾರತ ವಿರುದ್ಧ ದಾಳಿ ನಡೆಸಲು ಪದೇ ಪದೇ ಪ್ರಯತ್ನಿಸುತ್ತಲೇ ಇವೆ. ಇದಕ್ಕಾಗಿ ಭಾರತದ ಯುವಕರನ್ನು ಕರೆದೊಯ್ದು ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಿವೆ ಎನ್ನಲಾಗಿದೆ.
ಭಾರತೀಯ ಭದ್ರತಾ ಶಿಬಿರಗಳ ಮೇಲೆ ದಾಳಿ ನಡೆಸಲು ಅಲ ಖೈದಾ ತಯಾರಿ ನಡೆಸುತ್ತಿದೆ. ಅದಕ್ಕೆ ಜೈಶ್-ಎ-ಮೊಹಮ್ಮದ್ ಕೂಡ ಸಹಕರಿಸುತ್ತಿದೆ ಎಂದು ಇತ್ತೀಚಿಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು.