ನವದೆಹಲಿ: ಸರ್ಕಾರದ ಉದ್ಯೋಗಗಳಲ್ಲಿ ಮೇಲ್ವರ್ಗದ ಜಾತಿಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಶೇ 10ರಷ್ಟು ಮೀಸಲಾತಿಯನ್ನು ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ.
ಸೋಮವಾರದಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಏಪ್ರಿಲ್-ಮೇ ತಿಂಗಳ ಅವಧಿಯಲ್ಲಿ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆ ಇರುವುದರಿಂದ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ನಿರ್ಧಾರದ ಮೂಲಕ ಹಲವಾರು ಮೇಲ್ವರ್ಗದ ಜಾತಿಗಳ ಬೆಂಬಲ ಗಳಿಸಲಿದೆ ಎಂದು ಹೇಳಲಾಗುತ್ತಿದೆ.
ಎನ್ ಡಿಎ ಮೈತ್ರಿಕೂಟದ ಪಕ್ಷಗಳಾದ ಆರ್ಪಿಐ ಮತ್ತು ರಾಮ ವಿಲಾಸ್ ಪಾಸ್ವಾನ್ ಅವರ ಎಲ್ ಜೆಪಿ ಸೇರಿದಂತೆ ಹಲವು ಪಕ್ಷಗಳು ಈ ಹಿಂದೆ ಸರ್ಕಾರಿ ಉದ್ಯೋಗಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿ ಸದಸ್ಯರಿಗೆ ಮಿಸಲಾತಿ ನೀಡುವಂತೆ ಆಗ್ರಹಿಸಿದ್ದವು.ಈಗ ಕೇಂದ್ರ ಸರ್ಕಾರದ ನಿರ್ಧಾರದಿಂದ ಸಾಮಾನ್ಯ ವರ್ಗದಲ್ಲಿ ಬರುವ ಆರ್ಥಿಕವಾಗಿ ಹಿಂದುಳಿದ ಸದಸ್ಯರಿಗೆ ಈ ಮಿಸಲಾತಿ ಸೌಲಭ್ಯ ಅನ್ವಯವಾಗಲಿದೆ ಎನ್ನಲಾಗಿದೆ.
ಇತ್ತೀಚೆಗೆ ಮೋದಿ ಸರ್ಕಾರವು ಜಿಎಸ್ಟಿ ಹಾಗೂ ನೋಟು ನಿಷೇಧದಂತಹ ಕಾಯ್ದೆ ಮೂಲಕ ಜನ ಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿತ್ತು ಮತ್ತು ಹಲವು ಮೇಲ್ಜಾತಿಗಳು ಕೂಡ ಸರ್ಕಾರದ ನಡೆಗೆ ತೀವ್ರ ಅಸಮಾಧಾನಗೊಂಡಿದ್ದವು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರದ ನಿರೀಕ್ಷೆಯಲ್ಲಿದೆ. ಈ ಹಿನ್ನಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಮತಗಳು ಕೈ ತಪ್ಪದಂತೆ ನೋಡಿಕೊಳ್ಳಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ರಾಜಕೀಯ ವಲಯದಲ್ಲಿ ಹೇಳಲಾಗುತ್ತಿದೆ.