ನವದೆಹಲಿ: ಉನ್ನಾವ್ ರೇಪ್ ಮತ್ತು ಅಪಹರಣ ಪ್ರಕರಣದಲ್ಲಿ ಇಂದು ವಿಚಾರಣೆ ನಡೆಸಿರುವ ದೆಹಲಿಯ ಒಂದು ನ್ಯಾಯಾಲಯ ಆರೋಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ನನ್ನು ದೋಷಿ ಎಂದು ತೀರ್ಪು ನೀಡಿದೆ. ಈ ವೇಳೆ ಆರೋಪಪಟ್ಟಿ ಸಲ್ಲಿಸಲು ವಿಳಂಬ ಮಾಡಿದ್ದಕ್ಕಾಗಿ ನ್ಯಾಯಪೀಠ ಸಿಬಿಐವನ್ನು ತರಾಟೆಗೆ ತೆಗೆದುಕೊಂಡಿದೆ.
ಇದೆ ವೇಳೆ ಸಂತ್ರಸ್ತೆ ಅಪ್ರಾಪ್ತ ಬಾಲಕಿಯಾಗಿದ್ದಳು ಎಂಬುದು ಸಾಬೀತಾಗಿದೆ ಎಂದು ನ್ಯಾಯಾಲಯ ಹೇಳಿದೆ. ಕುಲದೀಪ್ ಸಿಂಗ್ ಸೆಂಗರ್ ಅವನನ್ನು ಪೋಕ್ಸೋ ಕಾಯ್ದೆ ಮತ್ತು ಸೆಕ್ಷನ್ 376ರ ಅಡಿ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ. ಆದರೆ, ಪ್ರಕರಣದ ವೇಳೆ ಕುಲದೀಪ ಸಿಂಗ್ ಸೆಂಗರ್ ಅವರ ಜೊತೆಗಿದ್ದ ಶಶಿ ಸಿಂಗ್ ನನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ವಿಚಾರಣೆಯ ವೇಳೆ ಸಿಬಿಐಯನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು, "ಆರೋಪಪಟ್ಟಿ ದಾಖಲಿಸಲು ಸಿಬಿಐಗೆ ಒಂದು ವರ್ಷ ಕಾಲಾವಕಾಶ ಯಾಕೆ ಬೇಕಾಯಿತು ಎಂಬುದು ತಮಗೆ ಅರ್ಥವಾಗುತ್ತಿಲ್ಲ" ಎಂದಿದ್ದಾರೆ. ಕುಲದೀಪ್ ಸಿಂಗ್ ಸೆಂಗರ್ ಶಿಕ್ಷೆಯ ಕುರಿತು ಡಿಸೆಂಬರ್ 19ರಂದು ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ.
ದೆಹಲಿಯ ತೀಸ್ ಹಜಾರಿ ನ್ಯಾಯಾಲಯ 2017ರಲ್ಲಿ ಉನ್ನಾವ್ ನಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ವಿರುದ್ಧ ಆಗಸ್ಟ್ ತಿಂಗಳಿನಲ್ಲಿ ಆರೋಪ ಗೊತ್ತುಪಡಿಸಿತ್ತು. ಜಿಲ್ಲಾ ನ್ಯಾಯಾಧೀಶರು ಕೂಡ ಪ್ರಕರಣದಲ್ಲಿ ಕುಲದೀಪ್ ಸಿಂಗ್ ಸೆಂಗರ್ ಗೆ ಅಪಹರಣದಲ್ಲಿ ಸಾಥ್ ನೀಡಿದ್ದ ಶಾಸಕನ ಸಹಪಾಟಿ ಶಶಿ ಸಿಂಗ್ ವಿರುದ್ಧ ಕೂಡ ಆರೋಪ ಗೊತ್ತುಪಡಿಸಿತ್ತು.
ಸಂತ್ರಸ್ತೆಯ ಮೇಲೆ ಅತ್ಯಾಚಾರದ ಘಟನೆಯ ಬಳಿಕ ಸಿಬಿಐಗೆ ನಿರ್ದೇಶನಗಳನ್ನು ನೀಡಿದ್ದ ಸರ್ವೋಚ್ಛ ನ್ಯಾಯಾಲಯ 7 ದಿನಗಳೊಳಗೆ ತನಿಖೆ ಪೂರ್ಣಗೊಳಿಸುವಂತೆ ಆದೇಶಿಸಿತ್ತು. ಜೊತೆಗೆ ಪ್ರಕರಣದ ವಿಚಾರಣೆಯನ್ನು ದೆಹಲಿಯ ತೀಸ್ ಹಜಾರಿ ನ್ಯಾಯಾಲಯಕ್ಕೆ ಹಸ್ತಾಂತರಿಸಿತ್ತು.