ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿ ಹತ್ತಿರವಿರುವ ಸೀಲಂಪುರ್ ಹಾಗೂ ಜಾಫಾರಾಬಾದ್ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವ್ಯಾಪಕ ಹಿಂಸಾಚಾರಕ್ಕೆ ತಿರುಗಿದೆ. ಈ ವೇಳೆ ಪ್ರತಿಭಟನಾಕಾರರು ಕಲ್ಸ್ಟರ್, ಡಿಟಿಸಿ ಹಾಗೂ ಶಾಲಾವಾಹನಗಳನ್ನು ಗುರಿಯಾಗಿಸಿದ್ದಾರೆ. ಈ ವೇಳೆ ಅವರನ್ನು ತಡೆಯಲು ಓರ್ವ ಪೇದೆ ಯತ್ನಿಸಿದ್ದಾರೆ ಈ ವೇಳೆ ಅವರನ್ನೂ ಸಹ ಕಿಡಿಗೇಡಿಗಳು ಗುರಿಯಾಗಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಬೆಳಕಿಗೆ ಬಂದಿದ್ದು, ವಿಡಿಯೋದಲ್ಲಿ ಕಿಡಿಗೇಡಿಗಳು ಪೇದೆಯ ಮೇಲೆ ಹಲ್ಲೆ ನಡೆಸುತ್ತಿರುವುದು ಹಾಗೂ ಲಾಠಿಯಿಂದ ಹೊಡೆಯುತ್ತಿರುವುದು ಗಮನಿಸಬಹುದಾಗಿದೆ. ಅತ್ತ ಪೊಲೀಸ್ ಪೇದೆ ಕೂಡ ಜನಸಮೂಹದ ಮುಂದೆ ನಿಸ್ಸಹಾಯಕರಾಗಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅಡಿಷನಲ್ ಡಿಜಿಪಿ (ನಾರ್ಥ್-ಈಸ್ಟ್) ಆರ್.ಪಿ. ಮಣಿ, ಮಂಗಳವಾರ ಬೆಳಗ್ಗೆ 11ಗಂಟೆಗೆ ಜಾಫಾರಾಬಾದ್-ಸೀಲಂಪುರ್ ಪ್ರದೇಶದಲ್ಲಿ ಮೊದಲು 50-60 ಜನ ನೆರೆದಿದ್ದಾರೆ. ಆ ಬಳಿಕ ಈ ಗುಂಪಿನ ಗಾತ್ರ ಹೆಚ್ಚುತ್ತಲೇ ಹೋಗಿದೆ. ಈ ವೇಳೆ ಜಾವರಾಬಾದ್ ವೃತ್ತ ಹಾಗೂ ಮೈಜಪುರ್ ಮೆಟ್ರೋ ಸ್ಟೇಷನ್ ಬಳಿ ಸುಮಾರು 2 ರಿಂದ 3 ಸಾವಿರ ಜನರು ಗುಂಪುಗೂಡಿದ್ದಾರೆ ಎಂದು ಹೇಳಿದ್ದಾರೆ.
ಈ ವೇಳೆ ಸೀಲಂಪುರ್ ಟೀ-ಪಾಯಿಂಟ್ ಬಳಿ ಪೊಲೀಸರು ಈ ಉದ್ರಿಕ್ತ ಗುಂಪನ್ನು ತಡೆಯಲು ಯತ್ನಿಸಿದ್ದಾರೆ. ಹಾಗೂ ಪ್ರತಿಭಟನಾಕಾರರನ್ನು ಒಲಿಸುವಲ್ಲಿ ಕೂಡ ಯಶಸ್ವಿಯಾಗಿದ್ದಾರೆ. ಇದೇ ವೇಳೆ ಆಕಸ್ಮಿಕವಾಗಿ ಕೆಲ ಕಿಡಿಗೇಡಿಗಳು ಕಲ್ಲುತೂರಾಟ ಆರಂಭಿಸಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ. ಈ ಹಲ್ಲೆಯಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದಾರೆ. ಈ ವೇಳೆ ಕಿಡಿಗೇಡಿಗಳು ಪೊಲೀಸರ ವಾಹನಗಳನ್ನೂ ಕೂಡ ಗುರಿಯಾಗಿಸಿ, ಪೊಲೀಸ್ ಬೂತ್ ಗೆ ಬೆಂಕಿ ಇಟ್ಟಿದ್ದಾರೆ ಎಂದಿದ್ದಾರೆ. ಇದೊಂದು ಸುನಿಯೋಜಿತ ಹಲ್ಲೆಯಾಗಿತ್ತೆ ಎಂಬುದರ ಕುರಿತು ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಪೊಲೀಸರ ಕೈಗೆ ಹಲ್ಲೆಯ ಕುರಿತಾದ ಫೂಟೇಜ್ ಲಭ್ಯವಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಘಟನೆಯ ವೇಳೆ ಪೊಲೀಸರು ಗಾಳಿಯಲ್ಲಿ ಗುಂಡು ಹರಿಸಿದ್ದಾರೆ ಹಾಗೂ ಅಶ್ರುವಾಯು ಕೂಡ ಸಿಡಿಸಿದ್ದಾರೆ. ಆದರೆ, ಇದರಿಂದ ಯಾರಿಗೂ ಹಾನಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.