ನವದೆಹಲಿ: ಭಾರತೀಯ ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂ. ಸಾಲ ಪಡೆದು ವಿದೇಶಕ್ಕೆ ಪಲಾಯನ ಮಾಡಿದ್ದ ತಲೆಮರೆಸಿಕೊಂಡಿದ್ದ ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಿ ಲಂಡನ್ನಿನ ವೆಸ್ಟ್ ಮಿನಿಸ್ಟರ್ ಕೋರ್ಟ್ ಸೋಮವಾರ ಆದೇಶ ಹೊರಡಿಸಿದೆ. ಈ ಮೂಲಕ ಕೇಂದ್ರ ಸರಕಾರ, ಸಿಬಿಐ, ಜಾರಿ ನಿರ್ದೇಶನಾಲಯಕ್ಕೆ ಭಾರೀ ಯಶಸ್ಸು ದೊರೆತಂತಾಗಿದೆ.
ವಿಜಯ್ ಮಲ್ಯ ಗಡಿಪಾರು ವಿಷಯಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ಲಂಡನ್ ನ ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್, ಹಣಕಾಸಿನ ವಿಚಾರದಲ್ಲಿ ಹಾಗೂ ವಂಚನೆಗೆ ಸಂಬಂಧಪಟ್ಟಂತೆ ಮಲ್ಯ ವಿರುದ್ಧದ ಆರೋಪಗಳಿಗೆ ಸಾಕ್ಷ್ಯಗಳಿದ್ದು ಗಡಿಪಾರು ಮಾಡಲು ಆದೇಶ ನೀಡಿದೆ.
ತೀರ್ಪು ಪ್ರಶ್ನಿಸಿ ವಿಜಯ್ ಮಲ್ಯ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದಾಗಿದೆ ಎಂದು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ತಿಳಿಸಿದ್ದಾರೆ. ವಿಜಯ್ ಮಲ್ಯ ಅವರು ಕೆಲ ದಿನಗಳ ಹಿಂದಷ್ಟೇ ಬ್ಯಾಂಕ್ ಸಾಲದ ಶೇ.100 ಅಸಲು ಮೊತ್ತವನ್ನು ಮರುಪಾವತಿಸಲು ಸಿದ್ಧ ಎಂದು ಹೇಳಿಕೆ ನೀಡಿದ್ದರು. ಆದಾಗ್ಯೂ, ಲಂಡನ್ನ ವೆಸ್ಟ್ ಮಿನ್ಸ್ಟರ್ ಕೋರ್ಟ್ ಮಲ್ಯ ಗಡೀಪಾರಿಗೆ ಆದೇಶಿಸಿರುವುದು ಮಹತ್ತರ ಬೆಳವಣಿಗೆಯಾಗಿದೆ.