ಮುಂಬೈ: ನಷ್ಟದಲ್ಲಿರುವ ಜೆಟ್ ಏರ್ವೇಸ್ ವೈಮಾನಿಕ ಸಂಸ್ಥೆಯ ಸಂಸ್ಥಾಪಕ ಹಾಗೂ ಚೇರ್ಮನ್ ನರೇಶ್ ಗೋಯಲ್ ಸೋಮವಾರ ರಾಜೀನಾಮೆ ನೀಡಿದ್ದಾರೆ. ಅಷ್ಟೇಯಲ್ಲದೆ ನರೇಶ್ ಗೋಯಲ್ ಮತ್ತವರ ಪತ್ನಿ ಅನಿತಾ ಸಂಸ್ಥೆಯ ಮಂಡಳಿಯಿಂದಲೂ ಹೊರಬಂದಿದ್ದಾರೆ.
ಜೆಟ್ ಏರ್ವೇಸ್ ರಕ್ಷಣೆಗಾಗಿ ನಾನು ಯಾವುದೇ ತ್ಯಾಗಕ್ಕೂ ಸಿದ್ಧ. ಜೆಟ್ ಏರ್ವೇಸ್ 22,000 ಕುಟುಂಬಗಳ ಹಿತ ರಕ್ಷಣೆಗಿಂತ ತಮಗೆ ಯಾವುದೂ ದೊಡ್ಡದಲ್ಲ ಎಂದು ಅವರು ಸೋಮವಾರ ತಿಳಿಸಿದ್ದಾರೆ.
ಜೆಟ್ ಏರ್ ವೇಸ್ ಸಂಸ್ಥೆಯಲ್ಲಿ ಶೇಕಡ 51ರಷ್ಟಿದ್ದ ನರೇಶ್ ಗೋಯಲ್ ಶೇರು ಪ್ರಮಾಣವನ್ನು ಈಗ ಕಡಿಮೆ ಮಾಡಲಾಗಿದೆ. ಈ ಮೂಲಕ ತಾವೇ ಹುಟ್ಟುಹಾಕಿದ ಜೆಟ್ ಏರ್ವೇಸ್ ಸಂಸ್ಥೆಯಲ್ಲಿ ನರೇಶ್ ಗೋಯೆಲ್ ಅಧಿಕಾರ ಮೊಟಕುಗೊಂಡಂತಾಗಿದೆ.
1992ರಲ್ಲಿ ನರೇಶ್ ಗೋಯಲ್ ಮತ್ತವರ ಪತ್ನಿ ಅನಿತಾ ಅವರು ಜೆಟ್ ಏರ್ವೇಸ್ ಸಂಸ್ಥೆಯನ್ನು ಸ್ಥಾಪಿಸಿದ್ದರು. ಇದೀಗ ನರೇಶ್ ಗೋಯಲ್ ಅವರ ನಿರ್ಗಮನದ ನಂತರ ಕಂಪನಿಯ ಆಡಳಿತ ಮಂಡಳಿಯಲ್ಲಿ ಸಿಇಓ ವಿನಯ್ ದುಬೇ ಮುಂದುವರಿಯಲಿದ್ದಾರೆ. ಸಂಸ್ಥೆಯ ಮುಂದಿನ ದಿಕ್ಕುದೆಶೆ ವಿಚಾರದಲ್ಲಿ ವಿನಯ್ ದುಬೇ ಅವರೇ ನಿರ್ಧಾರ ಕೈಗೊಳ್ಳಲಿದ್ದಾರೆ.
ಜೆಟ್ ಏರ್ವೇಸ್ ಸಂಸ್ಥೆ ಹೆಚ್ಚೂ ಕಡಿಮೆ ಒಯ ಬಿಲಿಯನ್ ಡಾಲರ್ (ಸುಮಾರು 7 ಸಾವಿರ ಕೋಟಿ ರೂಪಾಯಿ) ಸಾಲ ಮಾಡಿಕೊಂಡಿದೆ. ಸಾಲಗಾರರಿಗೆ ಹಣದ ಕಂತು ಕಟ್ಟಲು, ಪೈಲಟ್ಗಳಿಗೆ ಸಂಬಳ ನೀಡಲು ಹಣವಿಲ್ಲದೆ ಪರದಾಡುತ್ತಿರುವ ಸಂಸ್ಥೆಯು ಇತ್ತೀಚೆಗಷ್ಟೇ 40 ವಿಮಾನಗಳ ಸೇವೆ ಸ್ಥಗಿತಗೊಳಿಸಿತ್ತು.
ಇಷ್ಟೊಂದು ಸಾಲ ಹೊಂದಿರುವ ಜೆಟ್ ಏರ್ವೇಸ್ ಸಂಸ್ಥೆಯ ಮೇಲೆ ಈಗ ಯಾರು ಬಂಡವಾಳ ಹಾಕುತ್ತಾರೆ ಎಂಬ ಪ್ರಶ್ನೆ ಎದ್ದಿದೆ. ಹಿಂದೆ 2013ರಲ್ಲಿ ಇಂಥದ್ದೇ ಪರಿಸ್ಥಿತಿ ಜೆಟ್ ಏರ್ ರ್ವಸ್ಗೆ ಎದುರಾಗಿದ್ದಾಗ ಅಬುಧಾಬಿಯ ಎಟಿಹಾದ್ ಏರ್ವೇಸ್ ಸಂಸ್ಥೆಯು ಶೇ. 24ರಷ್ಟು ಪಾಲನ್ನು 600 ಮಿಲಿಯನ್ ಡಾಲರ್ (ಸುಮಾರು 4 ಸಾವಿರ ಕೋಟಿ ರೂಪಾಯಿ) ಹಣ ಕೊಟ್ಟು ಖರೀದಿ ಮಾಡಿ ಬಚಾವ್ ಮಾಡಿತ್ತು.
ಇದೀಗ ಜೆಟ್ ಏರ್ವೇಸ್ ಸಂಸ್ಥೆಗೆ ಸಾಲ ಕೊಟ್ಟಿರುವ ಬ್ಯಾಂಕು ಮೊದಲಾದ ಹಣಕಾಸು ಸಂಸ್ಥೆಗಳು ನರೇಶ್ ಗೋಯಲ್ ಅವರ ಎಲ್ಲಾ ಪಾಲನ್ನೂ ವಶಕ್ಕೆ ಪಡೆದುಕೊಳ್ಳಲಿದ್ದಾರೆ. ಇದಾದ ನಂತರ ಸಂಸ್ಥೆಯನ್ನು ಮಾರಾಟಕ್ಕಿಡಲಾಗುತ್ತದೆ ಎಂಬ ಮಾಹಿತಿಗಳಿವೆ.