ಮುಂಬೈ: ಮುಂಬೈನಲ್ಲಿ ಅವಮಾನ ಆಗುವುದಕ್ಕೂ ಮುನ್ನ ದಯವಿಟ್ಟು ವಾಪಸ್ ಹೋಗಿ ಎಂದು ಅತೃಪ್ತ ಶಾಸಕ ಎಂ.ಟಿ. ಸೋಮಶೇಖರ್ ಹೇಳಿದ್ದಾರೆ.
ಮುಂಬೈನ ರಿನೈಸೆನ್ಸ್ ಹೋಟೆಲ್‌ನಲ್ಲಿರುವ ಕಾಂಗ್ರೆಸ್-ಜೆಡಿಎಸ್‌ನ ಅತೃಪ್ತ ಶಾಸಕರನ್ನು ಭೇಟಿಯಾಗಲು ಬಂದಿದ್ದ ಡಿ.ಕೆ. ಶಿವಕುಮಾರ್, ಜಿ.ಟಿ. ದೇವೇಗೌಡ, ಶಿವಲಿಂಗೇ ಗೌಡರನ್ನು ಮುಂಬೈ ಪೊಲೀಸರು ಗೇಟ್ನಲ್ಲೇ ತಡೆದಿದ್ದಾರೆ.
ಒಂದೆಡೆ ಡಿ.ಕೆ. ಶಿವಕುಮಾರ್ ಹೋಟೆಲ್ ಒಳಗೆ ಹೋಗಲು ಹರಸಾಹಸ ಮಾಡುತ್ತಿದ್ದಾರೆ. ಇನ್ನೊಂದೆಡೆ ಖಾಸಗಿ ಸುದ್ದಿಸಂಸ್ಥೆ ಪ್ರತಿನಿಧಿ ಜೊತೆ ಮಾತನಾಡಿರುವ ಸಚಿವ ಎಂ.ಟಿ. ಸೋಮಶೇಖರ್, "ಯಾವತ್ತಿದ್ರೂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರೇ ನಮ್ಮ ನಾಯಕರು. ನಾವು ಕಾಂಗ್ರೆಸ್ ಬಿಟ್ಟು ಎಲ್ಲೂ ಹೋಗೋಲ್ಲ. ಬೆಂಗಳೂರಿನಲ್ಲೂ ನಾವು ಅವರೊಂದಿಗೆ ಮಾತನಾಡಿದ್ದೆವು. ಈಗ ತೋರುತ್ತಿರುವ ಆಸಕ್ತಿಯನ್ನು 15 ದಿನಗಳ ಹಿಂದೆ ತೋರಿದ್ದರೆ ಇಂದು ಹೀಗೆಲ್ಲಾ ಆಗುತ್ತಿರಲಿಲ್ಲ. ಮುಂಬೈನಲ್ಲಿ ಅವಮಾನ ಆಗುವುದಕ್ಕೂ ಮೊದಲು ದಯವಿಟ್ಟೂ ವಾಪಸ್ ಹೋಗಿ" ಎಂದು ತಿಳಿಸಿದ್ದಾರೆ.
ಎಲ್ಲರೂ ನಮ್ಮ ಸ್ನೇಹಿತರೇ. ಆದರೆ, ನಮ್ಮ ಮನಸ್ಸು ಸರಿಯಿಲ್ಲ. ನಾವು ಯಾರೊಂದಿಗೂ ಮಾತನಾಡುವುದಿಲ್ಲ. ಬೆಂಗಳೂರಿಗೆ ಬಂದ ನಂತರ ನಾವೇ ನಿಮ್ಮ ಮನೆಗೆ ಬಂದು ನಿಮ್ಮನ್ನು ಭೇಟಿಯಾಗುತ್ತೇವೆ ಎಂದು ಎಂ.ಟಿ. ಸೋಮಶೇಖರ್ ಹೇಳಿದ್ದಾರೆ.