ನವದೆಹಲಿ: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರ ಸಿಬಿಐ ರಿಮಾಂಡ್ ಇಂದು ಮುಕ್ತಾಯಗೊಳ್ಳಲಿದೆ. ನ್ಯಾಯಾಂಗ ಬಂಧನದಲ್ಲಿರುವ ಅವರನ್ನು ಜೈಲಿಗೆ ಕಳುಹಿಸುವುದೋ ಅಥವಾ ಅವರಿಗೆ ಜಾಮೀನು ಸಿಗಲಿದೆಯೇ ಎಂಬುದು ನ್ಯಾಯಾಲಯದಲ್ಲಿಂದು ನಿರ್ಧಾರವಾಗಲಿದೆ.
ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಹಣಕಾಸು ಸಚಿವ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಅವರ ಸಿಬಿಐ ಬಂಧನವನ್ನು ಮಂಗಳವಾರದವರೆಗೆ ನ್ಯಾಯಾಲಯವು ಒಂದು ದಿನದವರೆಗೆ ವಿಸ್ತರಿಸಿದೆ. ಕೇಂದ್ರ ತನಿಖಾ ದಳ (ಸಿಬಿಐ) ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್ನ ಆದೇಶವನ್ನು ಮರುಪರಿಶೀಲಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು.
ಆದರೆ, ಅವರ ಮನವಿಯನ್ನು ಚಿದಂಬರಂ ಅವರ ವಕೀಲರಾದ ಅಭಿಷೇಕ್ ಮನು ಸಿಂಗ್ವಿ ಮತ್ತು ಕಪಿಲ್ ಸಿಬಲ್ ವಿರೋಧಿಸಿದರು. ಪ್ರತಿ ವಾದ ಮಂಡಿಸಿದ ಮೆಹ್ತಾ, 'ಸುಪ್ರೀಂಕೋರ್ಟ್ ಆದೇಶವು ಚಿದಂಬರಂಗೆ ಒಂದು ರೀತಿಯಲ್ಲಿ ಜಾಮೀನು ನೀಡಿದೆ ' ಎಂದರು.
ವಿಶೇಷ ಸಿಬಿಐ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಈ ಹಿಂದೆ ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಅವರ ಸಿಬಿಐ ಕಸ್ಟಡಿಯನ್ನು ಸೆಪ್ಟೆಂಬರ್ 2 ರವರೆಗೆ ವಿಸ್ತರಿಸಿದ್ದರು. ಆಗಸ್ಟ್ 21 ರಂದು ಬಂಧನಕ್ಕೊಳಗಾದ ಚಿದಂಬರಂ 11 ದಿನಗಳಿಂದ ಸಿಬಿಐ ವಶದಲ್ಲಿದ್ದಾರೆ.
ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಸಿಬಿಐ ವಶದಲ್ಲಿರುವ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯದಲ್ಲಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಅರ್ಜಿಯ ಕುರಿತು ನ್ಯಾಯಾಲಯ ಇಂದು ತನ್ನ ನಿರ್ಧಾರವನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಾಂಗ ಕಸ್ಟಡಿಯಲ್ಲಿರುವಾಗ ತಮ್ಮನ್ನು ತಿಹಾರ್ ಜೈಲಿಗೆ ಕಳುಹಿಸಬಾರದು, ಬೇಕಿದ್ದರೆ ಗೃಹ ಬಂಧನದಲ್ಲಿರಿಸಿ ಎಂದು ಪಿ. ಚಿದಂಬರಂ ಮನವಿ ಮಾಡಿದ ಬಳಿಕ ಕೋರ್ಟ್ ಈ ಸೂಚನೆ ನೀಡಿದೆ.
ನ್ಯಾಯಾಲಯವು ಮೊದಲು ಈ ಪ್ರಕರಣವನ್ನು ಗುರುವಾರ ವಿಚಾರಣೆ ನಡೆಸಲು ನಿರ್ಧರಿಸಲಾಗಿತ್ತು, ಆದರೆ ಸಾಲಿಸಿಟರ್ ಜನರಲ್ ಒತ್ತಾಯಿಸಿದ ನಂತರ ನ್ಯಾಯಾಲಯವು ತನ್ನ ಆದೇಶವನ್ನು ಬದಲಾಯಿಸಿ ಮಂಗಳವಾರ ವಿಚಾರಣೆ ನಡೆಸುವಂತೆ ನಿರ್ದೇಶಿಸಿದೆ.
ಚಿದಂಬರಂಗೆ ಕೆಳ ನ್ಯಾಯಾಲಯದಿಂದ ಜಾಮೀನು ಸಿಗದಿದ್ದರೆ, ಅವರು ಇನ್ನೂ ಮೂರು ದಿನಗಳ ಕಾಲ ಸಿಬಿಐ ವಶದಲ್ಲಿರುತ್ತಾರೆ. ಅಂದರೆ ಚಿದಂಬರಂ ಅವರನ್ನು ಸೆಪ್ಟೆಂಬರ್ 5 ನೇ ತಾರೀಖಿನವರೆಗೆ ಅವರನ್ನು ತಿಹಾರ್ ಜೈಲಿಗೆ ಕಳುಹಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.