ನವದೆಹಲಿ: ಎನ್ಡಿಎ ಮೈತ್ರಿಕೂಟದಿಂದ ಹೊರಬಂದಿರುವ ಟಿಡಿಪಿ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬುಧವಾರ (ಏಪ್ರಿಲ್ 4) ಭೇಟಿಯಾಗಲಿದ್ದಾರೆ. ಅಗ್ರ ನಾಯಕರ ಈ ಸಭೆಯು 9 ಗಂಟೆಗೆ ದೆಹಲಿಯ ಆಂಧ್ರ ಭವನದಲ್ಲಿ ನಡೆಯಲಿದ್ದು, ಇಬ್ಬರು ಮುಖಂಡರ ನಡುವಿನ ಸಭೆಯ ರಾಜಕೀಯ ರಂಗದಲ್ಲಿ ತೀವ್ರ ಕುತೂಹಲ ಕೆರಳಿಸಿರುವುದರ ಜೊತೆಗೆ ಬಹಳ ಮಹತ್ವವನ್ನು ಪಡೆದುಕೊಂಡಿದೆ.
AAP ಜೊತೆ ಸೇರಲಿದೆಯೇ ಟಿಡಿಪಿ?
ಕೇಜ್ರಿವಾಲ್ ಮತ್ತು ನಾಯ್ಡು ನಡುವೆ ಇಂದು ನಡೆಯುವ ಸಭೆಯಲ್ಲಿ ಮುಂಬರುವ ಚುನಾವಣೆಯಲ್ಲಿ AAP ಮತ್ತು ಟಿಡಿಪಿ ಮೈತ್ರಿ ಬಗ್ಗೆ ಚರ್ಚಿಸಬಹುದು ಎಂದು ಊಹಿಸಲಾಗಿದೆ. ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಅರವಿಂದ್ ಕೇಜ್ರಿವಾಲ್ ಆಂಧ್ರಪ್ರದೇಶದಲ್ಲಿ ತಮ್ಮ ಪಕ್ಷವನ್ನು ವಿಸ್ತರಿಸುವ ಬಗ್ಗೆ ಚರ್ಚಿಸಬಹುದು ಎಂದು ಸುದ್ದಿ ಇದೆ.
ಬಿಜೆಪಿ ವಿರುದ್ಧ ಗಂಭೀರ ಆರೋಪ ಹೊರಿಸಿದ್ದ ನಾಯ್ಡು
ಎನ್ಡಿಎ ಮೈತ್ರಿಯಿಂದ ಬೇರ್ಪಟ್ಟ ನಂತರ, ಚಂದ್ರಬಾಬು ನಾಯ್ಡು ಬಿಜೆಪಿ ವಿರುದ್ಧ ಹಲವಾರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ರಾಜಕೀಯ ಪ್ರಯೋಜನಗಳಿಗಾಗಿ ಆಂಧ್ರಪ್ರದೇಶ ಸೇರಿದಂತೆ ದೇಶದ ಹಲವಾರು ರಾಜ್ಯಗಳಿಗೆ ಬಿಜೆಪಿ ಅನ್ಯಾಯ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ. ಆಂಧ್ರ ಪ್ರದೇಶದ ಜನರಿಗೆ ವಿಶೇಷ ಸ್ಥಾನಮಾನದ ಭರವಸೆಗಳನ್ನು ಪೂರೈಸದೆ ಆಂಧ್ರವನ್ನು ಶಿಕ್ಷಿಸುತ್ತಿದೆ. ಆಂಧ್ರಪ್ರದೇಶದ ಅಭಿವೃದ್ಧಿಯನ್ನು ಹಾನಿಗೊಳಿಸುವುದರ ಮೂಲಕ ಭಾರತ ಅಭಿವೃದ್ಧಿಗೆ ಅಡ್ಡಿಯುಂಟಾಗುತ್ತಿದೆ ಎಂದು ಬಿಜೆಪಿಗೆ ಅರ್ಥವಾಗಲಿಲ್ಲ ಎಂದು ನಾಯ್ಡು ಆರೋಪಿಸಿದ್ದಾರೆ.