ಹುಬ್ಬಳ್ಳಿ: ಬಿಜೆಪಿ ತನ್ನ ರಾಜಕೀಯ ಸ್ವಾರ್ಥಕ್ಕಾಗಿ ರಾಜ್ಯ ಹಾಗೂ ದೇಶವನ್ನು ಒಡೆಯುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯವನ್ನು ಯಾವ ಸ್ಥಿತಿಗೆ ತಂದಿದ್ದಾರೆ ಎಂದು ಎಲ್ಲರೂ ನೋಡಿದ್ದಾರೆ. ಇಂತಹ ಸರ್ಕಾರವನ್ನು ತೊಲಗಿಸುವ ಶಪತವನ್ನು ನೀವೆಲ್ಲರೂ ಕೈಗೊಳ್ಳಬೇಕು ಎಂದು ಸೋನಿಯಾ ಗಾಂಧಿ ಮನವಿ ಮಾಡಿದರು.
ಅವರು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು
ರಾಜ್ಯ ಬದಲಾವಣೆಯಾಗುವ ದಿನ ಹತ್ತಿರದಲ್ಲಿದೆ. ಈ ಪ್ರದೇಶದ ಜನ ಪ್ರತಿ ಕ್ಷೆತ್ರದಲ್ಲಿ ತಮ್ಮ ಪರಿಶ್ರಮದಿಂದ ಈ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದೀರಿ. ಕಲಾ ಕ್ಷೇತ್ರದಿಂದ ಐಟಿ ಬಿಟಿ ಕ್ಷೇತ್ರದವರೆಗೆ, ಹಾಲು ಉತ್ಪಾದನೆ, ಕೃಷಿ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ನಿಮ್ಮ ರಾಜ್ಯದ ಹೆಸರನ್ನು ಉಜ್ವಲಗೊಳಿಸಿದ್ದೀರಿ.ಕಾಂಗ್ರೆಸ್ ಇತಿಹಾಸದಲ್ಲಿ ಕರ್ನಾಟಕ ರಾಜ್ಯಕ್ಕೆ ವಿಶೇಷ ಸ್ಥಾನವಿದೆ. ಇಂದು ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರುವುದು ಹೆಮ್ಮೆಯ ವಿಚಾರ. ಇಂದಿರಾ ಗಾಂಧಿ ಅವರು ಕೇಂದ್ರದ ಜನ ವಿರೋಧಿ ನೀತಿ ವಿರುದ್ಧ ಹೋರಾಟ ಮಾಡಿದ್ದರು. ಆಗ ಚಿಕ್ಕಮಗಳೂರಿನ ಜನ ಅವರ ಬೆಂಬಲಕ್ಕೆ ನಿಂತಿದ್ದರು. 25 ವರ್ಷಗಳ ಹಿಂದೆ ನಾನು ಮೊದಲ ಬಾರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಬಳ್ಳಾರಿಯ ಜನ ನನ್ನನ್ನು ಬೆಂಬಲಿಸಿದ್ದರು. ಈ ಕತ್ತಲ ಸಮಯದಲ್ಲಿ ನಾವು ಸರ್ಕಾರದ ವಿರುದ್ಧ ಧ್ವನಿ ಎತ್ತುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಅವರನ್ನು ಗೆಲ್ಲಿಸದಿದ್ದರೆ ಕರ್ನಾಟಕದ ಜನತೆಗೆ ಪ್ರಧಾನಿ ಮೋದಿಯವರ ಆಶೀರ್ವಾದ ಸಿಗುವುದಿಲ್ಲ, ಗಲಭೆಯಾಗುತ್ತದೆ ಎಂದು ಬಿಜೆಪಿ ನಾಯಕರು ಬೆದರಿಕೆ ಹಾಕುತ್ತಿದ್ದಾರೆ.
ಕರ್ನಾಟಕದ ಜನರು ಯಾರ ಆಶೀರ್ವಾದವನ್ನೂ ನೆಚ್ಚಿಕೊಂಡಿಲ್ಲ, ಅವರ ಸ್ವಂತ ಪರಿಶ್ರಮದ ಮೇಲೆ ಅವಲಂಬಿತರಾಗಿದ್ದಾರೆ.
ಮೇ 10 ರಂದು ಕರ್ನಾಟಕದ ಜನ ತಮ್ಮ ಮಣ್ಣಿನ ಗುಣವನ್ನು ಅವರಿಗೆ… pic.twitter.com/nvCiZG0nsa
— Karnataka Congress (@INCKarnataka) May 6, 2023
ಇದನ್ನೂ ಓದಿ: ರಾಹುಲ್ ಗಾಂಧಿಯಿಂದ ಚಿಕ್ಕೋಡಿಯಲ್ಲಿ ಭರ್ಜರಿ ಕ್ಯಾಂಪೇನ್
ಸಮಾಜದಲ್ಲಿ ದ್ವೇಷ ಪಸರಿಸುತ್ತಿರುವವರ ವಿರುದ್ಧ ಹೋರಾಡಲು ಭಾರತ ಜೋಡೋ ಯಾತ್ರೆ ಮಾಡಲಾಯಿತು. ಬಿಜೆಪಿಯ ಈ ದ್ವೋಷ ರಾಜಕೀಯದಿಂದ ದೇಶವನ್ನು ಮುಕ್ತಿಗೊಳಿಸುವ ಹೊರತಾಗಿ ಕರ್ನಾಟಕ ಹಾಗೂ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಲಕ್ಷಾಂತರ ಜನ ರಾಹುಲ್ ಗಾಂಧಿ ಅವರ ಜತೆ 4 ಸಾವಿರ ಕಿ.ಮೀ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಯಾತ್ರೆಯಲ್ಲಿ ಬಿಜೆಪಿಗೆ ಎಷ್ಟು ಭಯವಾಗಿದೆ ಎಂದರೆ, ಅವರು ಎಲ್ಲ ರೀತಿಯ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಇಂದು ಅಧಿಕಾರದಲ್ಲಿರುವವರು ಜನರ ರಕ್ಷಣೆ ಮಾಡುವ ಬದಲು ಹಣ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಟೀಕಾ ಪ್ರಹಾರ ನಡೆಸಿದರು,
2018ರಲ್ಲಿ ನೀವು ಬಿಜೆಪಿಗೆ ಅಧಿಕಾರ ನೀಡಲಿಲ್ಲ. ಆದರೂ ಇವರು ಸರ್ಕಾರವನ್ನು ಬೀಳಿಸಿ ಅಧಿಕಾರಕ್ಕೆ ಬಂದಿದ್ದರು. ನಂತರ ಅವರ 40% ಸರ್ಕಾರ ನಿಮ್ಮನ್ನು ಲೂಟಿ ಮಾಡಿದೆ. ಬಿಜೆಪಿ ನಾಯಕರು ಎಷ್ಟು ಅಹಂಕಾರದಲ್ಲಿದ್ದಾರೆ ಎಂದರೆ ಅವರು ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡುತ್ತಿಲ್ಲ. ಯಾವುದೇ ಪತ್ರಕ್ಕೂ ಉತ್ತರ ನೀಡುತ್ತಿಲ್ಲ. ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ನಿಯಂತ್ರಿಸುತ್ತಿದ್ದಾರೆ. ಯಾವುದೇ ಸರ್ಕಾರದಲ್ಲಿ ಇಂತಹ ದುರಾಡಳಿತವನ್ನು ನೀವು ಎಂದಾದರೂ ನೋಡಿದ್ದೀರಾ? ಪ್ರಜಾತಂತ್ರ ವ್ಯವಸ್ಥೆ ನಡೆಯುವುದು ಹೀಗೆಯೇ? ಅವರು ಚುನಾವಣೆಯಲ್ಲಿ ಗೆಲ್ಲದಿದ್ದರೆ ಕರ್ನಾಟಕ ರಾಜ್ಯಕ್ಕೆ ಮೋದಿ ಅವರ ಆಶೀರ್ವಾದ ಸಿಗುವುದಿಲ್ಲ ಎಂದು ಬಹಿರಂಗವಾಗಿ ಧಮಕಿ ಹಾಕುತ್ತಿದ್ದಾರೆ. ಬಿಜೆಪಿ ಸೋತರೆ ರಾಜ್ಯದಲ್ಲಿ ಗಲಭೆಯಾಗುತ್ತದೆ ಎಂದು ಹೇಳುತ್ತಾರೆ ಎಂದು ದೂರಿದರು.
ನಿಮ್ಮ ಪರವಾಗಿ ನಾನು ಅವರಿಗೆ ಒಂದು ಮಾತು ಹೇಳಬಯಸುತ್ತೇನೆ. ನೀವು ಕರ್ನಾಟಕ ರಾಜ್ಯದ ಜನರನ್ನು ಇಷ್ಟು ದಡ್ಡರೆಂದು ಭಾವಿಸಬೇಡಿ. ಕರ್ನಾಟಕದ ಜನ ತಮ್ಮ ಪರಿಶ್ರಮ ಹಾಗೂ ಸಂಕಲ್ಪದ ಮೇಲೆ ಭರವಸೆ ಇಟ್ಟಿದ್ದಾರೆ ಹೊರತು ಬೇರೆ ಯಾರ ಆಶೀರ್ವಾದದಿಂದಲೂ ಅಲ್ಲ. ಕರ್ನಾಟಕದ ಜನ ದುರಾಸೆ ಇರುವವರಲ್ಲ, ನಿಮ್ಮ ಬೆದರಿಕೆಗಳಿಗೆ ಹೆದರುವವರೂ ಅಲ್ಲ. ಕರ್ನಾಟಕದ ಜನ ಮೇ 10 ರಂದು ನಿಮಗೆ ಈ ಮಣ್ಣಿನ ಶಕ್ತಿ ಏನು ಎಂದು ತಿಳಿಸಲಿದ್ದಾರೆ ಎಂದು ಹೇಳಿದರು.
ಇಂದು ಲಕ್ಷಾಂತರ ರೈತರು ಹಾಗೂ ಹಾಲು ಉತ್ಪಾದಕರನ್ನು ಕತ್ತಲೆಗೆ ದೂಡಲು ನಂದಿನಿಯಂತಹ ಅತ್ಯುತ್ತಮ ಸಂಸ್ಥೆಯನ್ನು ನಾಶ ಮಾಡಲು ಷಡ್ಯಂತ್ರ ರೂಪಿಸಿದ್ದಾರೆ. ಇದು ರಾಜ್ಯದಲ್ಲಿ ಯಶಸ್ವಿಯಾಗುವುದಿಲ್ಲ. ಜನರ ಆಶೀರ್ವಾದದಿಂದ ನಾಯಕರಾಗುತ್ತಾರೆಯೇ ಹೊರತು, ಯಾವುದೇ ನಾಯಕರ ಆಶೀರ್ವಾದದಿಂದ ಈ ರಾಜ್ಯದ ಜನರ ಭವಿಷ್ಯ ನಿರ್ಧಾರವಾಗುವುದಿಲ್ಲ ಎಂದು ಈ ಸಮಯದಲ್ಲಿ ಬಿಜೆಪಿಯವರಿಗೆ ಹೇಳಬಯಸುತ್ತೇನೆ. ಜನರು ತಮ್ಮ ಭವಿಷ್ಯವನ್ನು ತಾವೇ ಬರೆದುಕೊಳ್ಳುತ್ತಾರೆ ಎಂದರು.
ಭಗವಾನ್ ಬಸವಣ್ಣ ಅವರು ಈ ಭೂಮಿಯಿಂದ ಹುಟ್ಟಿದ್ದಾರೆ. ಅವರು ಯಾರ ಮಾತಿಗೂ ಅಂಜದೇ ಎಲ್ಲರನ್ನು ಸಮಾನತೆ ನೀಡುವ ಹೋರಾಟ ಮಾಡಿದ್ದರು. ಇದು ಕುವೆಂಪು ಅವರ ಭೂಮಿಯಾಗಿದ್ದು, ಬಿಜೆಪಿ ಇವರ ತತ್ವಗಳನ್ನು ಪ್ರತಿನಿತ್ಯ ಅಪಮಾನಿಸುತ್ತಲೇ ಬಂದಿದೆ. ದೇಶದ ಇತಿಹಾಸ ಹಾಗೂ ಕರ್ನಾಟಕದ ಸಾಮಾಜಿಕ ನ್ಯಾಯದ ಪರಂಪರೆಯನ್ನು ನಾಶ ಮಾಡುವ ಪ್ರಯತ್ನ ಮಾಡಬೇಡಿ ಎಂದು ಎಚ್ಚರಿಸಿದರು.
ಇದನ್ನೂ ಓದಿ: ನಿಮ್ಮ ಹೊಲಸು ರಾಜಕೀಯಕ್ಕೆ ಅಪ್ಪು ಹೆಸರು ತರಬೇಡಿ: ಪ್ರಕಾಶ್ ರೈ
ನೀವು ಸಂತರ ತತ್ವ ಸಿದ್ಧಾಂತದ ಮೇಲೆ ದಾಳಿ ಮಾಡುವವರ ಪರ ನಿಲ್ಲುತ್ತೀರೋ ಅಥವಾ ಎಲ್ಲಾ ವರ್ಗದವರ ಕಲ್ಯಾಣಕ್ಕಾಗಿ ಹೋರಾಟ ಮಾಡುವವರ ಪರವಾಗಿ ನಿಲ್ಲುತ್ತೀರೋ ಎಂಬುದನ್ನು ನೀವು ನಿರ್ಧರಿಸಬೇಕು. ಈ ರಾಜ್ಯವನ್ನು ಲೂಟಿ ಹಾಗೂ ಕಮಿಷನ್ ನಿಂದ ದೂರ ಮಾಡಬೇಕು. ಆಮೂಲಕ ರಾಜ್ಯವನ್ನು ವಿಕಾಸದತ್ತ ತೆಗೆದುಕೊಂಡು ಹೋಗಬೇಕು. ಸಾಮಾಜಿಕ ನ್ಯಾಯ, ಸದ್ಭಾವನೆಯ ಪರಂಪರೆ ರಕ್ಷಿಸಲು ನೀವು ಯಾರ ಪರವಾಗಿ ನಿಲ್ಲುತ್ತೀರಿ? ಎಂದು ಅವರು ಪ್ರಶ್ನಿಸಿದರು.
ಐದು ವರ್ಷಗಳ ಹಿಂದೆ ಇದ್ದ ಸರ್ಕಾರ ತನ್ನ ಮಾತಿಗೆ ಬದ್ಧವಾಗಿ ಕೊಟ್ಟ ಬಹುತೇಕ ಎಲ್ಲಾ ಭರವಸೆ ಈಡೇರಿಸಿದೆ. ಇಂದು ರಾಜಸ್ಥಾನ, ಛತ್ತೀಸಿ ಗಡ, ಹಿಮಾಚಲದಲ್ಲಿ ಕಾಂಗ್ರೆಸ್ ಸರ್ಕಾರ ತಮ್ಮ ಭರವಸೆಗಳನ್ನು ಈಡೇರಿಸಿಕೊಂಡು ಬಂದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ನಿಮ್ಮ ವಿಶ್ವಾಸವನ್ನು ಉಳಿಸಿಕೊಳ್ಳಲಿದೆ. ಗೃಹಲಕ್ಷ್ಮಿ, ಯುವವನಿಧಿ, ಅನ್ನಭಾಗ್ಯ, ಗೃಹಜ್ಯೋತಿ, ಉಚಿತ ಪಯಣ ಯೋಜನೆಗಳನ್ನು ಜಾರಿ ಮಾಡಲಿದೆ ಎಂದು ಹೇಳಿದರು.
ರಾಜ್ಯದ ಜನ ಕರ್ನಾಟಕ ರಾಜ್ಯವನ್ನು ಬಿಜೆಪಿಯ ಲೂಟಿಯಿಂದ ರಕ್ಷಿಸಲು ಮೇ 10ರಂದು ನಿಮ್ಮ ಅಮೂಲ್ಯವಾದ ಮತಗಳನ್ನು ಕಾಂಗ್ರೆಸ್ ನ ಪ್ರತಿ ಅಭ್ಯರ್ಥಿಗಳಿಗೆ ನೀಡಿ ಜಯಶೀಲರನ್ನಾಗಿ ಮಾಡಬೇಕು. ಆಮೂಲಕ ನಿಮ್ಮ ಭವಿಷ್ಯ ಉಜ್ವಲಗೊಳಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.