ದೇವರ ದುಡ್ಡಿಗೆ ಬಿಜೆಪಿ ಕನ್ನ ಆರೋಪ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ

HD Kumaraswamy Slams on BJP Government: ಸ್ವಯಂ ಘೋಷಿತ ಧರ್ಮೋದ್ಧಾರಕರು, ಹಿಂದೂ ಧರ್ಮವನ್ನು ಗುತ್ತಿಗೆಗೆ ಪಡೆದುಕೊಂಡವರೆಂದು ಬೀಗುವವರಿಗೆ ಧರ್ಮವೆಂದರೆ ಅಧಿಕಾರಕ್ಕಿರುವ ರಾಜಮಾರ್ಗವಾಗಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

Written by - Prashobh Devanahalli | Edited by - Puttaraj K Alur | Last Updated : Apr 4, 2023, 04:18 PM IST
  • ಹಿಂದೂ ಧರ್ಮ ಗುತ್ತಿಗೆಗೆ ಪಡೆದುಕೊಂಡವರೆಂದು ಬೀಗುವವರಿಗೆ ಧರ್ಮವೆಂದರೆ ಅಧಿಕಾರಕ್ಕಿರುವ ರಾಜಮಾರ್ಗ
  • ಇದು ಯೋಜನೆಗಳ ಹೆಸರಿನಲ್ಲಿ ದೇವರ ಹುಂಡಿಗೂ ಕನ್ನ ಕೊರೆಯುವ ಬಿಜೆಪಿಯ ನೈಜ ಜಾಯಮಾನ
  • ದೇವರ ಹುಂಡಿ ಎಂಬುದು ಲಜ್ಜೆಗೆಟ್ಟು ಹೊಡೆದುಕೊಳ್ಳುವ ನಿಧಿ ಎಂದು ಎಚ್‍ಡಿಕೆ ಕಿಡಿ
ದೇವರ ದುಡ್ಡಿಗೆ ಬಿಜೆಪಿ ಕನ್ನ ಆರೋಪ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ title=
ಬಿಜೆಪಿ ಸರ್ಕಾರದ ವಿರುದ್ಧ ಎಚ್‍ಡಿಕೆ ಕಿಡಿ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರವು ನಂಜನಗೂಡಿನ ದೇವಾಲಯದ ಹುಂಡಿಯ ಹಣವನ್ನು ಲಪಟಾಯಿಸಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ. ನಂಜನಗೂಡು ಬಿಜೆಪಿ ಶಾಸಕರು ದೇವಾಲಯದ ಹುಂಡಿ ಹಣವನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಕಿಡಿಕಾರಿರುವ ಎಚ್‍ಡಿಕೆ ಮಂಗಳವಾರ ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ.

ಸ್ವಯಂ ಘೋಷಿತ ಧರ್ಮೋದ್ಧಾರಕರು, ಹಿಂದೂ ಧರ್ಮವನ್ನು ಗುತ್ತಿಗೆಗೆ ಪಡೆದುಕೊಂಡವರೆಂದು ಬೀಗುವವರಿಗೆ ಧರ್ಮವೆಂದರೆ ಅಧಿಕಾರಕ್ಕಿರುವ ರಾಜಮಾರ್ಗವಾಗಿದೆ. ದೇವರ ಹುಂಡಿ ಎಂಬುದು ಲಜ್ಜೆಗೆಟ್ಟು ಹೊಡೆದುಕೊಳ್ಳುವ ನಿಧಿ. ಇವರಿಗೆ ನಾಚಕೆ, ಸಂಕೋಚ ಎನ್ನುವುದು ಕನಿಷ್ಠಕ್ಕಿಂತ ಕಡಿಮೆ ಎನ್ನುವುದಕ್ಕೆ ಇಲ್ಲಿದೆ ಸಾಕ್ಷಿ ಅಂತಾ #ದೇವರಹುಂಡಿಗೆಬಿಜೆಪಿಕನ್ನ ಹ್ಯಾಶ್‍ಟ್ಯಾಗ್ ಬಳಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಾನು ಚುನಾವಣೆಗೆ ಸ್ಪರ್ಧಿಸಲ್ಲ: ವದಂತಿಗಳಿಗೆ ಕಿವಿಗೊಡಬೇಡಿ- ಅನಿತಾ ಕುಮಾರಸ್ವಾಮಿ ಮನವಿ

‘ನಾಡಿಗೆ ನಾಡೇ ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳುವ ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವರ ಹುಂಡಿಗೆ ಬಿಜೆಪಿ ಶಾಸಕ ಬಿ.ಹರ್ಷವರ್ದನ್‌ ಅವರು ಕೈಹಾಕಿರುವುದು ದೈವಕ್ಕೆ ಎಸಗಿದ ಅಪಮಾನ. ಇದು ಯೋಜನೆಗಳ ಹೆಸರಿನಲ್ಲಿ ದೇವರ ಹುಂಡಿಗೂ ಕನ್ನ ಕೊರೆಯುವ ಬಿಜೆಪಿಯ ನೈಜ ಜಾಯಮಾನ. ಕಮಲ ಪಕ್ಷ ಮತ್ತೊಮ್ಮೆ ಬೆತ್ತಲಾಗಿದೆ’ ಎಂದು ಕುಮಾರಸ್ವಾಮಿ ಕುಟುಕಿದ್ದಾರೆ.

‘ಮುಜರಾಯಿ ದೇವಾಲಯದ ಆದಾಯ ಆಯಾ ದೇಗುಲದ ಅಭಿವೃದ್ಧಿಗೇ ಬಳಸಬೇಕು ಎನ್ನುವುದು ಕಾನೂನು. ರಾಜ್ಯ ಬಿಜೆಪಿ ಸರ್ಕಾರ ಕಾನೂನನ್ನು ಗಾಳಿಗೆ ಬಿಟ್ಟು, 40%ಗಾಗಿ ದೇವರ ದುಡ್ಡನ್ನೇ ನುಂಗಿ ನೀರು ಕುಡಿದು, ಆ ಹಣವನ್ನೂ ಚುನಾವಣೆಗೆ ಸುರಿಯಲು ಹೊರಟಿದೆ. ಪಾಪದ ಪಕ್ಷಕ್ಕೆ ಪ್ರಾಯಶ್ಚಿತ್ತ ತಪ್ಪದು.. ಶ್ರೀ ನಂಜುಂಡೇಶ್ವರನ ಶಾಪವೂ ತಟ್ಟದೆ ಇರದು’ ಎಂದು ಅವರು ಎಚ್ಚರಿಕೆ ನೀದಿದ್ದಾರೆ.

ಇದನ್ನೂ ಓದಿ: ಎಪ್ರಿಲ್ 8 ಅಥವಾ 9 ರಂದು ಬಿಜೆಪಿ ಅಧಿಕೃತ ಪಟ್ಟಿ ಬಿಡುಗಡೆಯಾಗಲಿದೆ-ಸಿಎಂ ಬೊಮ್ಮಾಯಿ

‘ಹೇಳುವುದು ಒಂದು, ಮಾಡುವುದು ಇನ್ನೊಂದು. ಧರ್ಮ, ದೇವರು ಎನ್ನುವುದು ಬಿಜೆಪಿಗೆ ಮತ ಫಸಲು ಕೊಡುವ ಸಾಧನಗಳಷ್ಟೇ. ಶ್ರದ್ಧಾ, ಭಕ್ತಿ ಜನರದ್ದು; ಭಕ್ತಿ ಮಾತ್ರ ಬಿಜೆಪಿಯದ್ದು. ನೀಚತನದ ಪರಮಾವಧಿ ಇದು. ಸಮುದಾಯ ಭವನಗಳ ನಿರ್ಮಾಣಕ್ಕೆ ದೇವರ ದುಡ್ಡೇ ಬೇಕೆ? ಕೇತ್ರಕ್ಕೆ ಸರ್ಕಾರ ಕೊಟ್ಟ ಹಣ, ಶಾಸಕರ ವಿಶೇಷ ಅನುದಾನ ಇತ್ಯಾದಿಗಳೆಲ್ಲ ಎಲ್ಲಿ ಹೋದವು?’ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

‘ರಾಜ್ಯ ಬಿಜೆಪಿ ಸರ್ಕಾರವು ಶ್ರೀ ನಂಜುಂಡೇಶ್ವರ ದೇವರ ಹುಂಡಿಯನ್ನು ಎಗರಿಸುವ ಶಾಸಕರ ಧೂರ್ತ ಪ್ರಯತ್ನಕ್ಕೆ ತಡೆ ಹಾಕಬೇಕು. ಈ ಬಗ್ಗೆ ಹೊರಡಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ದೇವರ ದುಡ್ಡನ್ನು ದೇವಾಲಯದ ಅಭಿವೃದ್ಧಿಗೇ ಬಳಸಬೇಕು’ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News