ಪ್ರತಿ ವಿಧಾನಸಭಾ ಚುನಾವಣೆಯಲ್ಲಿ ಮಲೆನಾಡು ಕ್ಷೇತ್ರವೇ ನಿರ್ಣಾಯಕ

Karnataka Assembly Election: ಸಮಾಜವಾದದ ತಾಯಿಬೇರಾಗಿರುವ ಜಿಲ್ಲೆಯಲ್ಲಿ ಸಾಮಾಜಿಕ ನ್ಯಾಯಕ್ಕೆ ನಾಂದಿ ಹಾಡಿದ ಸಮಾಜವಾದದ ಹರಿಕಾರ ಶಾಂತವೇರಿಗೋಪಾಲಗೌಡರು ಜನಿಸಿದ್ದು ಹೆಮ್ಮೆಯ ಸಂಗತಿ. ಸಾಹಿತ್ಯ,ಕಲೆ, ರಂಗಭೂಮಿ, ಸುಗಮ ಸಂಗೀತ, ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಇಲ್ಲಿನ ಪ್ರಕೃತಿ ಸೌಂದರ್ಯ ಸ್ಪೂರ್ತಿಯಾದರೆ, ಹೊರಾಟದ ಕಿಚ್ಚನ್ನು ಬೆಳೆಸಿದ ಇಲ್ಲಿನ ಮಣ್ಣು, ರಾಜಕೀಯವಾಗಿ ಹಲವರನ್ನು ಉತ್ತುಂಗಕ್ಕೇರಿಸಿದೆ.

Written by - Yashaswini V | Last Updated : Apr 27, 2023, 04:19 PM IST
  • ಸಮಾಜವಾದ-ಕೋಮುವಾದಕ್ಕೆ ಸಾಕ್ಷಿಯಾದ ಜಿಲ್ಲೆ..!
  • ಪ್ರತಿ ವಿಧಾನಸಭಾ ಚುನಾವಣೆಯಲ್ಲಿ ಮಲೆನಾಡು ಕ್ಷೇತ್ರವೇ ನಿರ್ಣಾಯಕ!
  • ಶಿವಮೊಗ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಹೇಗಿದೆ ಹವಾ..?
ಪ್ರತಿ ವಿಧಾನಸಭಾ ಚುನಾವಣೆಯಲ್ಲಿ ಮಲೆನಾಡು ಕ್ಷೇತ್ರವೇ ನಿರ್ಣಾಯಕ title=

Karnataka Assembly Elections 2023: ಸಹ್ಯಾದ್ರಿ, ಮಲೆನಾಡು ಅಂದ್ರೆ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳಿವೆ. ಈ ಎಲ್ಲಾ ಕ್ಷೇತ್ರಗಳು ಮೂರೂ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುತ್ತದೆ. ಯಾಕಂದ್ರೆ ಈ ಜಿಲ್ಲೆ ರಾಷ್ಟ್ರದಲ್ಲಿ ಪ್ರಚಲಿತವಿರುವ ಪ್ರಜ್ಞಾವಂತ ಮತದಾರರಿರುವ ಜಿಲ್ಲೆಯಾಗಿದೆ. ಸಮಾಜವಾದದ ತಾಯಿಬೇರಾಗಿರುವ ಜಿಲ್ಲೆಯಲ್ಲಿ ಸಾಮಾಜಿಕ ನ್ಯಾಯಕ್ಕೆ ನಾಂದಿ 
ಹಾಡಿದ ಸಮಾಜವಾದದ ಹರಿಕಾರ ಶಾಂತವೇರಿಗೋಪಾಲಗೌಡರು ಜನಿಸಿದ್ದು ಹೆಮ್ಮೆಯ ಸಂಗತಿ. ಸಾಹಿತ್ಯ,ಕಲೆ, ರಂಗಭೂಮಿ, ಸುಗಮ ಸಂಗೀತ, ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಇಲ್ಲಿನ ಪ್ರಕೃತಿ ಸೌಂದರ್ಯ ಸ್ಪೂರ್ತಿಯಾದರೆ, 
ಹೊರಾಟದ ಕಿಚ್ಚನ್ನು ಬೆಳೆಸಿದ ಇಲ್ಲಿನ ಮಣ್ಣು, ರಾಜಕೀಯವಾಗಿ ಹಲವರನ್ನು ಉತ್ತುಂಗಕ್ಕೇರಿಸಿದೆ.
 
>>  ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ ಚಿತ್ರಣ:- 
- ಪುರುಷ ಮತದಾರರು  1,25,943
- ಮಹಿಳಾ ಮತದಾರರು 1,31,729
- ಒಟ್ಟು ಮತದಾರರು 2,57,685
- ಬ್ರಾಹ್ಮಣ ಮತದಾರರ ಸಂಖ್ಯೆ 39 ಸಾವಿರ
- ಲಿಂಗಾಯತ ಮತದಾರರ ಸಂಖ್ಯೆ  23 ಸಾವಿರ 
- ಮುಸ್ಲಿಂ 44 ಸಾವಿರ ಮತ
- ಪರಿಶಿಷ್ಟ ಜಾತಿ 24 ಸಾವಿರ ಮತ
- ಕ್ರೈಸ್ತ 10 ಸಾವಿರ ಮತ 
- ಕುರುಬ 13 ಸಾವಿರ ಮತ
- ಒಕ್ಕಲಿಗ 12 ಸಾವಿರ ಮತ
- ತಮಿಳರು 13 ಸಾವಿರ ಮತ ಬಲವನ್ನು ಹೊಂದಿದ್ದಾರೆ. 

ಸಮಾಜವಾದಿ ನೆಲವೆಂಬ ಹೆಗ್ಗಳಿಕೆ ಪಡೆದಿದ್ದ ಶಿವಮೊಗ್ಗ ನಗರದಲ್ಲಿ ಹಾಲಿ ಬಿಜೆಪಿ ಶಕ್ತಿಕೇಂದ್ರವಾಗಿದೆ. ಹಿಂದುತ್ವದ ಅಲೆಯಲ್ಲಿ ಬಿಜೆಪಿ ತನ್ನ ಮತಬ್ಯಾಂಕ್ ಗಟ್ಟಿಗಳಿಸಿಕೊಂಡಿದೆ. ಈ ಬಾರಿಯೂ ಹರ್ಷ ಕೊಲೆ ಘಟನೆಯನ್ನೇ ದಾಳವಾಗಿ ಪ್ರಯೋಗಿಸಿ ಹಿಂದು ಸಮಾಜದ ಮತಗಳನ್ನು ಕ್ರೂಢೀಕರಿಸಿಕೊಳ್ಳಲು ಬಿಜೆಪಿ ತಂತ್ರ ರೂಪಿಸಿದೆ. ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷಗಳು ಶಿವಮೊಗ್ಗದ ಶಾಂತಿ ಸೌಹಾರ್ದತೆಗೆ ಆದ್ಯತೆ ನೀಡಿ, ಅಭಿವೃದ್ಧಿ ಪಥದತ್ತ ಶಿವಮೊಗ್ಗ ಕೊಂಡೊಯ್ಯುವುದಾಗಿ ಮತದಾರರ ಸೆಳೆಯುವ ಪ್ರಯತ್ನ ಮಾಡುತ್ತಿವೆ. 

2018 ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಕೆ.ಎಸ್ ಈಶ್ವರಪ್ಪ 104027 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೇಸ್ ನ ಪ್ರತಿಸ್ಪರ್ಧಿ ಕೆ.ಬಿ ಪ್ರಸನ್ನ ಕುಮಾರ್ 57,920 ಮತಗಳನ್ನು ಪಡೆದು 46,107 ಮತಗಳಿಂದ ಹಿನ್ನಡೆ ಅನುಭವಿಸಿದ್ದರು.
ಕೆ.ಎಸ್ ಈಶ್ವರಪ್ಪ ಬಿಜೆಪಿ ಗೆಲುವು.- 104027
ಕೆ.ಬಿ. ಪ್ರಸನ್ನ ಕುಮಾರ್ ಕಾಂಗ್ರೆಸ್ ಸೋಲು-57,920

ನಿರ್ಣಾಯಕ ಮತಗಳು:
ಶಿವಮೊಗ್ಗ(ನ)....... ಬ್ರಾಹ್ಮಣರು ಹಾಗೂ ಲಿಂಗಾಯತರು ಪ್ರಾಬಲ್ಯ ಹೊಂದಿದ್ದಾರೆ. ಅಂತಿಮವಾಗಿ ಮುಸ್ಲಿಂ ಮತಗಳು ನಿರ್ಣಾಯಕ. ಈ ಬಾರಿ ಗೆಲ್ಲುವ ಅಭ್ಯರ್ಥಿಗೆ ಮುಸ್ಲಿಂ ಸಮುದಾಯದವರು ಮಣೆ ಹಾಕಲಿದ್ದು, ಅದು ಕಾಂಗ್ರೇಸ್ ನ ಪರವಾಗಿ ಮತ ಚಲಾವಣೆಯಾಗುತ್ತೋ ಅಥವಾ ಜೆಡಿಎಸ್ ನ ಪರವಾಗುತ್ತೋ ಎಂಬುದು ನಿಘೂಡವಾಗಿದೆ.

ಶಿವಮೊಗ್ಗ-113 ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಯ ಎಸ್.ಎನ್.ಚನ್ನಬಸಪ್ಪ, ಐಎನ್ಸಿ ಹೆಚ್.ಸಿ.ಯೋಗೇಶ್, ಎಎಪಿ ನೇತ್ರಾವತಿ.ಟಿ, ಜೆಡಿಎಸ್ ಆಯನೂರ್ ಮಂಜುನಾಥ, ಉತ್ತಮ ಪ್ರಜಾಕೀಯ ಪಾರ್ಟಿ ಯ ವೆಂಕಟೇಶ್ ಆರ್, 
ಕೆಆರ್ಎಸ್ ನ ರಾಜೇಂದ್ರ ಡಿ, ಪಕ್ಷೇತರ ರಿಯಾಜ್ ಅಹಮದ್, ಮೊಹಮ್ಮದ್ ಯೂಸುಫ್ ಖಾನ್, ಅಜಯ್ಕುಮಾರ್ ಬಿ.ಎಸ್, ಅಕ್ಕಮಹಾದೇವಿ.ಹೆಚ್.ಎಂ, ಶೇಖರನಾಯ್ಕ್, ವಿ.ಹನುಮಶೆಟ್ಟಿ, ಅನಿಲ್.ಎಂಆರ್, ಹೆಚ್.ಎಸ್.ಗಣೇಶ್, ರವಿಕುಮಾರ್.ಎನ್ ಕಣದಲ್ಲಿದ್ದಾರೆ.

ಯಾರಿಗೆ ಪ್ಲಸ್ ಯಾರಿಗೆ ಮೈನಸ್? 
ಶಿವಮೊಗ್ಗ ನಗರದಲ್ಲಿ ಸದ್ಯಕ್ಕೆ ಕಾಂಗ್ರೇಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವ ವಾತಾವರಣ ಮೂಡಿದೆ. ಶೂನ್ಯದಲ್ಲಿದ್ದ ಜೆಡಿಎಸ್ ಪಕ್ಷ ಈಗ ಫಿನಿಕ್ಸ್ ಪಕ್ಷಿಯಂತೆ ಮೇಲೆದ್ದಿದೆ, ಜೆಡಿಎಸ್ ನಿಂದ ಆಯನೂರು ಮಂಜುನಾಥ್ ಸ್ಪರ್ಧಿಸಿದ್ದು, ಇವರಿಗೆ ಕಾಂಗ್ರೇಸ್ ತೊರೆದು ಮಾಜಿ ಶಾಸಕ ಕೆ.ಬಿ ಪ್ರಸನ್ನ ಕುಮಾರ್ ಸಾಥ್ ನೀಡಿದ್ದಾರೆ. ಸದಾ ಕೋಮುಗಲಭೆಯಿಂದ ನಲುಗಿ ಹೋಗಿರುವ ಶಿವಮೊಗ್ಗಕ್ಕೆ ಹಿಂದುತ್ವ ಬೇಡ. ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಇರುವ ವಾತಾವರಣ ತರುತ್ತೇನೆ ಎಂದು ಆಯನೂರು ಮಂಜುನಾಥ್ ತೆನೆಹೊತ್ತು ಹೊರಟಿದ್ದಾರೆ. ಇವರಿಗೆ ಲಿಂಗಾಯಿಂತ ಬ್ರಾಹ್ಮಣ ಮತಗಳು ಕೈಹಿಡಿದರೆ, ಅಂತಿಮವಾಗಿ ಕಾಂಗ್ರೇಸ್ ಪರವಾಗಿರುವ ಮುಸ್ಲಿಂ ಮತಗಳು ಜೆಡಿಎಸ್ ಗೆ ವಾಲಿದರೂ ಅಚ್ಚರಿಯಿಲ್ಲ.

ಇನ್ನು ಬಿಜೆಪಿಯಿಂದ ಸ್ಪರ್ಧಿಸಿರುವ ಎಸ್.ಎನ್ ಚನ್ನಬಸಪ್ಪರಿಗೆ ಬಿಜೆಪಿಯ ಸಾಂಪ್ರಾದಾಯಿಕ ಮತಗಳೇ ಕೈಹಿಡಿದರೆ ಸಾಕು ಎಂಬ ವಿಶ್ವಾಸದಲ್ಲಿದ್ದಾರೆ. ಹಿಂದುತ್ವದ ಅಡಿಯಲ್ಲಿಯೇ ಮತಕೇಳುತ್ತಿರುವ ಬಿಜೆಪಿ ಮುಸ್ಲಿಂ ಮತಗಳನ್ನು ನೆಚ್ಚಿಕೊಂಡಿಲ್ಲ. ಹಿಂದುಗಳ ಮತಗಳನ್ನೇ ಕ್ರೂಢೀಕರಿಸಿ ಗೆಲುವು ಸಾಧಿಸಲು ತಂತ್ರ ರೂಪಿಸಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಸೆಕ್ಷನ್ ಕರ್ಫ್ಯೂ ಕಾಮನ್ ಎಂಬಂತ ಅಭಿಪ್ರಾಯಗಳನ್ನು ಎದುರಾಳಿ ಅಭ್ಯರ್ಥಿಗಳು ಬಿತ್ತುತ್ತಿರುವುದರಿಂದ ಇದು ಚೆನ್ನಬಸಪ್ಪರಿಗೆ ಸೆಟ್ ಬ್ಯಾಕ್ ಆಗುತ್ತಾ..ಅಥವಾ ಹಿಂದುತ್ವದ ಅಜೆಂಡಾವೇ ವರದಾನವಾಗುತ್ತಾ ಎಂಬುದು ಕುತುಹಲ ಮೂಡಿಸಿದೆ. ಇನ್ನು ಕಾಂಗ್ರೇಸ್ ನಿಂದ ಸ್ಪರ್ಧಿಸಿರುವ ಹೆಚ್.ಸಿ ಯೋಗೇಶ್ ಗೆ ಪಕ್ಷದಲ್ಲಿಯೇ ಒಳಪೆಟ್ಟುಗಳು ಬಿದ್ದರೂ ಅಚ್ಚರಿಯಿಲ್ಲ. ನಗರ ಕಾಂಗ್ರೇಸ್ ಮುಖಂಡರ ವಿಶ್ವಾಸ ಗಳಿಸಿಕೊಂಡು ಯೋಗೇಶ್ ಮತದಾರರ ಮನೆ ಬಾಗಿಲು ತಟ್ಟಿದರೆ, ಇವರಿಗೆ ಚುನಾವಣೆ ಪ್ಲಸ್ ಆಗಬಹುದು. ಇಲ್ಲವಾದರೆ ಅದು ಕೂಡ ಮುಳವಾಗಬಹುದು. ಸದ್ಯಕ್ಕೆ ಶಿವಮೊಗ್ಗ ನಗರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

>> ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಚಿತ್ರಣ:-  
- ಪುರುಷ ಮತದಾರರು- 104640
- ಮಹಿಳಾ ಮತದಾರರು-105768
- ಒಟ್ಟು ಮತದಾರರು-210412

ಹೊಳೆಹೊನ್ನೂರು ಮೀಸಲು ಕ್ಷೇತ್ರದಿಂದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವಾದ ನಂತರ ಕ್ಷೇತ್ರ ರಾಜಕೀಯ ಪಲ್ಲಟಗಳಿಗೆ ಒಳಗಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಲಿಂಗಾಯಿತ ಮತ್ತು ಬೋವಿ ಸಮಾಜದ ಮತಗಳು ಹೆಚ್ಚಿದೆ. 1972ರವರೆಗೆ ಮೀಸಲು ಕ್ಷೇತ್ರವಾಗಿದ್ದ ಶಿಕಾರಿಪುರ ನಂತರ 1977 ರಲ್ಲಿ  ಹೊಳೆಹೊನ್ನೂರು ಮೀಸಲು ಕ್ಷೇತ್ರವಾಗಿ ಬದಲಾಯಿತು. ಹೊಳೆಹೊನ್ನೂರು ಕ್ಷೇತ್ರದಲ್ಲಿ ಲಿಂಗಾಯಿತ ಮತಗಳೇ ನಿರ್ಣಾಯಕವಾಗಿದೆ. ಮೀಸಲು ಅಭ್ಯರ್ಥಿ ಗೆಲ್ಲಬೇಕಾದರೆ, ಲಿಂಗಾಯಿತ ಸಮುದಾಯವೇ ಇಲ್ಲಿ ನಿರ್ಣಾಯಕವಾಗಿದೆ. 2004 ರಲ್ಲಿ ಹೊಳೆಹೊನ್ನೂರು ಕ್ಷೇತ್ರವನ್ನ ತಗೆದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಮಾಡಲಾಯಿತು. 1977 ರಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಕಾಂಗ್ರೇಸ್ ಹಿಡಿತದಲ್ಲಿತ್ತು. ಬದಲಾದ ಕಾಲಮಾನದಲ್ಲಿ ಇಲ್ಲಿ ಜೆಡಿಎಸ್ ತದನಂತರ ಬಿಜೆಪಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. 

ಶಿವಮೊಗ್ಗ ಗ್ರಾಮಾಂತರ ಭಾಗದ ಜಾತಿವಾರು ಅಂದಾಜು ಲೆಕ್ಕಾಚಾರ
ಲಿಂಗಾಯತರು 55 ಸಾವಿರ, ಬೋವಿ 35-37 ಸಾವಿರ,  ಎಕೆ 28 ಸಾವಿರ, ಕೊರಚ -ಕೊರಮ  ಸಮುದಾಯ 800, ಉಪ್ಪಾರ 10-12 ಸಾವಿರ,  ಕುರುಬ 7-8 ಸಾವಿರ,  ಲಂಬಾಣಿ 18-20 ಸಾವಿರ, ಮುಸ್ಲಿಂ 16-18 ಸಾವಿರ, ಕುಂಚಿಟಿಗರು 6 ಸಾವಿರ, ಕ್ರಿಶ್ಚಿಯನ್ 1500,
ಒಕ್ಕಲಿಗರು 5 ಸಾವಿರ, ವಾಲ್ಮಿಕಿ 15- 16 ಸಾವಿರ, ಈಡಿಗರು-12,000, ಒಟ್ಟು 2.10.412 ಮತದಾರರು ಇದ್ದಾರೆ. ಶಿವಮೊಗ್ಗ(ಗ್ರಾ).....ಪರಿಶಿಷ್ಟರು ಹೆಚ್ಚಿನ ಸಂಖ್ಯೆಯಲ್ಲಿದ್ದು ಪ್ರಾಬಲ್ಯ ಹೊಂದಿದ್ದಾರೆ. ಅಂತಿಮವಾಗಿ ಒಕ್ಕಲಿಗ ಹಾಗೂ ಮುಸ್ಲಿಂರ ಮತಗಳು ನಿರ್ಣಾಯಕ ಪಾತ್ರ ವಹಿಸಲಿದೆ. ಲಿಂಗಾಯಿತರು ಪ್ರಭಲ ಪೈಪೋಟಿ ನೀಡುವ ಅಭ್ಯರ್ಥಿಯೇ ಗೆಲ್ಲುವ ಕುದುರೆಯೆಂಬುದು ನಿರ್ವಿವಾದ.

ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳು:
ಶಿವಮೊಗ್ಗ ಗ್ರಾಮಾಂತರ-111 ಕ್ಷೇತ್ರದಲ್ಲಿ ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ನ ಶ್ರೀನಿವಾಸ್ ಎಸ್ ಕೆ, ಆಮ್ಆದ್ಮಿ ಪಾರ್ಟಿಯ ಮಂಜುನಾಥ ಎಸ್ ಎಸ್, ಭಾರತೀಯ ಜನತಾ ಪಾರ್ಟಿಯ ಕೆ.ಬಿ.ಅಶೋಕನಾಯ್ಕ, 
ಬಹುಜನ ಸಮಾಜ ಪಾರ್ಟಿಯ ಎ.ಡಿ.ಶಿವಪ್ಪ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕೆ.ಬಿ.ವಿಜಯ, ಕರ್ನಾಟಕ ರಾಷ್ಟ್ರ ಸಮಿತಿಯ ನಿರಂಜನ ಇ, ಜನತಾದಳ(ಎಸ್) ಶಾರದಾ ಪೂರ್ಯಾನಾಯ್ಕ, ಪಕ್ಷೇತರ ರಂಗಸ್ವಾಮಿ ಎಲ್, ಭೀಮಪ್ಪ ಬಿ.ಹೆಚ್, ತಿಪ್ಪೇರುದ್ರಸ್ವಾಮಿ.
ಟಿ, ಪ್ರವೀಣ್ ನಾಯ್ಕ್  ಕಣದಲ್ಲಿ ಉಳಿದಿದ್ದಾರೆ.

ಯಾರಿಗೆ ಪ್ಲಸ್ ಯಾರಿಗೆ ಮೈನಸ್?
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಈ ಬಾರಿ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಕ್ಷೇತ್ರದಲ್ಲಿ ಕಾಂಗ್ರೇಸ್ ಜೆಡಿಎಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೇಸ್ ನಿಂದ ಮಾಜಿ ಶಾಸಕ ದಿವಂಗತ ಕರಿಯಣ್ಣನವರ ಪುತ್ರ ಶ್ರೀನಿವಾಸ್ ಕರಿಯಣ್ಣ ಸ್ಪರ್ಧಾ ಕಣದಲ್ಲಿದ್ದಾರೆ. ಜೆಡಿಎಸ್ ನಿಂದ ಶಾರದಾ ಪೂರ್ಯನಾಯಕ್ ಹಾಗು ಬಿಜೆಪಿಯಿಂದ ಅಶೋಕ್ ನಾಯ್ಕ್ ಸ್ಪರ್ಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಶಾರದ ಪೂರ್ಯಾ ನಾಯಕ್ ಗೆ ಕ್ಷೇತ್ರದ ಮತದಾರರು ಕೈಹಿಡಿಯುವ ಸಾಧ್ಯತೆಗಳು ಹೆಚ್ಚಿದೆ. ಕಳೆದ ಬಾರಿ 65549 ಮತಗಳನ್ನು ಪಡೆದು 3777 ಮತಗಳಿಂದ ಸೋಲನ್ನು ಅನುಭವಿಸಿದ್ದ ಶಾರದಾ ಪೂರ್ಯನಾಯಕ್ ಸೋಲಿನ ನಂತರವೂ ಐದು ವರ್ಷ ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಸ್ಪಂಧಿಸಿದ್ರು. ಇದು ಮತದಾರರಲ್ಲ ಅನುಕಂಪ ಮೂಡಿಸಿದೆ. ಇನ್ನು ಲಿಂಗಾಯಿತ ಮತಗಳು ಜೆಡಿಎಸ್ ಪರವಾದ ಒಲುವು ಹೊಂದಿದೆ. ಬಿಜೆಪಿಯ ಅಶೋಕ್ ನಾಯಕ್ ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರೇ ಶ್ರೀರಕ್ಷೆಯಾಗಿದ್ದಾರೆ. ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಜನರ ಸಂಕಷ್ಟಗಳಿಗೆ ಸರಿಯಾಗಿ ಸ್ಪಂಧಿಸಲಿಲ್ಲ ಎಂಬ ಆರೋಪಗಳಿವೆ. ಸ್ವಪಕ್ಷೀಯರೆ ಇವರಿಗೆ ಟಿಕೇಟ್ ನೀಡಬಾರದೆಂದು ವರಿಷ್ಠರಿಗೆ ದೂರು ನೀಡಿದ್ದು, ಇದು ಚುನಾವಣೆ ಸಂದರ್ಭದಲ್ಲಿ ಯಾವ ಪರಿಣಾಮ ಬೀರುತ್ತೆ ಎಂಬುದು ಗುಪ್ತಗಾಮಿನಿಯಾಗಿದೆ. ಇನ್ನು ಕಾಂಗ್ರೇಸ್ ನಿಂದ ಸ್ಪರ್ಧಿಸಿರುವ ಶ್ರೀನಿವಾಸ್ ಕರಿಯಣ್ಣರಿಗೆ ಬಂಡಾಯ ಕಾಂಗ್ರೇಸ್ ಅಭ್ಯರ್ಥಿಗಳೇ ಸ್ಪರ್ದೆಯೊಡ್ಡಬಹುದಾಗಿದೆ. ಬಂಡಾಯ ಅಭ್ಯರ್ಥಿಗಳಾದ ರವಿ ಕುಮಾರ್, ನಾರಾಯಣಸ್ವಾಮಿ ನಾಮಪತ್ರ ಹಿಂಪಡೆದಿದ್ದು, ಇವರು ಪ್ರಚಾರದಲ್ಲಿ ತೊಡಗಿಸಿಕೊಂಡರೆ, ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಇಲ್ಲವಾದಲ್ಲಿ ಜೆಡಿಎಸ್ ಮತ್ತು ಬಿಜೆಪಿಯ ನಡುವೆ ನೇರ ಸ್ಪರ್ಧೆ ಏರ್ಪಡಲಿದೆ. 
ಕಳೆದ ಬಾರಿ ಈ ಕ್ಷೇತ್ರದಲ್ಲಿ ಬಿಜೆಪಿ ಅಶೋಕ್ ನಾಯ್ಕ್ ಪಡೆದ ಮತಗಳು-69326
ಜೆಡಿಎಸ್ ನ ಶಾರದಾ ಪೂರ್ಯ ನಾಯಕ್ ಪಡೆದ ಮತಗಳು- 65549

>> ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ಚಿತ್ರಣ: 
ಕ್ಷೇತ್ರದ ರಾಜಕೀಯ ಇತಿಹಾಸ 
- ಪುರುಷ ಮತದಾರರು-92141
- ಮಹಿಳಾ ಮತದಾರರು-94453
- ಒಚ್ಚು ಮತದಾರರು-1,86594
- ಒಕ್ಕಲಿಗ 45 ಸಾವಿರ, ಈಡಿಗ-40 ಸಾವಿರ 
- ಬ್ರಾಹ್ಮಣ-15 ಸಾವಿರ, ಮುಸ್ಲಿಂ 12 ಸಾವಿರ 
- ಪರಿಶಿಷ್ಟ ಪಂಗಡ-15 ಸಾವಿರ 
- ಬಿಲ್ಲವ ಬಂಟ್ಸ್ ಮೊಗವೀರ ಕೊಂಕಣಿ 40 ಸಾವಿರ

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗರು ಹಾಗೂ ಈಡಿಗರು ಹೆಚ್ಚಿನ ಸಮಬಲದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಅಂತಿಮವಾಗಿ ಹಿಂದುಳಿದ ವರ್ಗಗಳ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. 

ಕ್ಷೇತ್ರ ಹಿನ್ನಲೆ:- 
ತೀರ್ಥಹಳ್ಳಿ ತಾಲೂಕು ರಾಷ್ಟ್ರದಲ್ಲಿ ಪ್ರಚಲಿತವಿರುವ ವಿಧಾನಸಭಾ ಕ್ಷೇತ್ರ. ಪ್ರಜ್ಞಾವಂತ ಮತದಾರರನ್ನು ಹೊಂದಿರುವ ಕ್ಷೇತ್ರ ಎಂಬ ಹೆಗ್ಗಳಿಕೆ. ಶೇಕಡಾ 80 ರಷ್ಟು ಮತ ಚಲಾಯಿಸುವ ಮತದಾರರು ಇಲ್ಲಿದ್ದಾರೆ. ಇಲ್ಲಿ ಹಣ ಹೆಂಡ ಜಾತಿಗಿಂತಲೂ, ವ್ಯಕ್ತಿಯ ವರ್ಚಸ್ಸೇ  ಮುಖ್ಯ. ಹೀಗಾಗಿ ಇಲ್ಲಿ ಎಲ್ಲಾ ಪಕ್ಷಗಳ ಮುಖಂಡರು ಗೆದ್ದು ಸೋತಿದ್ದಾರೆ. ಕ್ಷೇತ್ರದ ಉದ್ದ 102 ಕಿಲೋಮೀಟರ್ ಇದ್ದು ರಾಜ್ಯದಲ್ಲಿಯೇ ವಿಸ್ತಾರವಾದ ದೊಡ್ಡ ಕ್ಷೇತ್ರವಾಗಿದೆ. ಸಮಾಜವಾದದ ಬೇರು ಹುಟ್ಟಿದ್ದೇ ತೀರ್ಥಹಳ್ಳಿಯಲ್ಲಿ, ಅದರ ಹರಿಕಾರ ಶಾಂತವೇರಿಗೋಪಾಲಗೌಡರು ತೀರ್ಥಹಳ್ಳಿಯಲ್ಲಿಯೇ ಜನಿಸಿದವರು. ರಾಜ್ಯಾದ್ಯಂತ ಸಮಾಜವಾದದ ಸಂದೇಶದೊಂದಿಗೆ ಸಮಾಜದಲ್ಲಿ ಸಮರತೆಯನ್ನು ಮೂಡಿಸುವ ಯತ್ನ ಪ್ರಾರಂಭವಾದದ್ದು,ಈ ನೆಲದಿಂದಲೇ. ಅಷ್ಟೇ ಅಲ್ಲದೆ ರಾಷ್ಟ್ರಕವಿ ಕುವೆಂಪು, ಯು.ಆರ್ ಅನಂತಮೂರ್ತಿ, ಸೇರಿದಂತೆ ಹಲವು ಕವಿ, ಸಾಹಿತಿ, ಕಲಾವಿದರಿಗೆ ಪ್ರಕೃತಿ ದೇವಿ ಸ್ಪೂರ್ತಿಯಾಗಿದ್ದಾಳೆ. ರಾಜ್ಯಕ್ಕೊಬ್ಬ ಮಾದರಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ ಹಾಗು ಜಸ್ಟಿಸ್ ರಾಮಾಜೋಯಿಸ್ ರಂತಹ ವ್ಯಕ್ತಿಗಳನ್ನು ನೀಡಿದೆ. ಸಮಾಜವಾದದಿಂದ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಇಂದು ಕ್ಷೇತ್ರದಲ್ಲಿ 
ಬಿಜೆಪಿ  ನೆಲೆನಿಂತಿದೆ. ಮುಖ್ಯವಾಗಿ ಒಕ್ಕಲಿಗ, ಈಡಿಗ, ಹಿಂದುಳಿದ ವರ್ಗಗಳ ಮತಗಳು ಹೆಚ್ಚಾಗಿದ್ದರೂ ಅಂತಿಮವಾಗಿ ಬ್ರಾಹ್ಮಣ ಹಾಗು ಅಲ್ಪಸ್ಂಖ್ಯಾತರ ಮತಗಳು ನಿರ್ಣಾಯಕವಾಗಲಿವೆ.  

ತೀರ್ಥಹಳ್ಳಿ-114 ಕ್ಷೇತ್ರದಲ್ಲಿ ಒಟ್ಟು 05 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಆರಗ ಜ್ಞಾನೇಂದ್ರ, ಎಎಪಿ ಶಿವಕುಮಾರಗೌಡ, ಐಎನ್ಸಿ ಕಿಮ್ಮನೆ ರತ್ನಾಕರ, ಕೆಆರ್ಎಸ್ ನ ಕೆ.ಎ.ಅರುಣ, ಜೆಡಿಎಸ್ ರಾಜಾರಾಂ ಹೆಗ್ಗಡೆ ಕಣದಲ್ಲಿದ್ದಾರೆ.

2018 ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಆರಗ ಜ್ಞಾನೇಂದ್ರ ಗೆಲುವು ಸಾಧಿಸಿದ್ರು. ಆರಗಾ ಜ್ಞಾನೇಂದ್ರ 67,527 ಮತಗಳನ್ನು ಪಡೆದರೆ, ಕಾಂಗ್ರೇಸ್ ನ ಕಿಮ್ಮನೆ ರತ್ನಾಕರ್ 45572 ಮತಗಳನ್ನು ಪಡೆದು ಸೋಲು ಅನುಭವಿಸಿದ್ರು.

ಯಾರಿಗೆ ಪ್ಲಸ್ ಯಾರಿಗೆ ಮೈನಸ್? 
2018 ರ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಕಿಮ್ಮನೆ ರತ್ನಾಕರ್ ಸೋಲಿನ ನಂತರವೂ ಕ್ಷೇತ್ರದಲ್ಲಿ ಜನರ ಸಮಸ್ಯೆಗಳಿಗೆ ಪೂರಕವಾಗಿ ಹೋರಾಟ ಪಾದಯಾತ್ರೆ ಮಾಡಿದ್ದರು. ಅಲ್ಲದೆ ಕಾಂಗ್ರೇಸ್ ನಿಂದ ಟಿಕೆಟ್ ಸಿಗದೇ ಬಂಡಾಯ ಅಭ್ಯರ್ಥಿಯಾಗಿ  ಬಿಸಿ ಮುಟ್ಟಿಸಿದ್ದ ಆರ್.ಎಂ ಮಂಜುನಾಥ್ ಗೌಡರು ಕಿಮ್ಮನೆ ರತ್ನಾಕರ್ ಅವರಿಗೆ  ಸಾರಧಿಯಾಗಿದ್ದಾರೆ. ಇವರಿಬ್ಬರ ಒಗ್ಗಟ್ಟು ಹಾಗೂ ವೈಯಕ್ತಿಕ ವರ್ಚಸ್ಸು ಕಾಂಗ್ರೇಸ್ ಗೆಲುವಿಗೆ ಪೂರಕ ಎನ್ನಲಾಗಿದೆ. ಒಂದು ವೇಳೆ ಪಕ್ಷದಿಂದ ಒಳಪೆಟ್ಟು ಬಿದ್ದರೆ, ಕಾಂಗ್ರೇಸ್ ಗೆ ಹಿನ್ನಡೆಯಾಗಲಿದೆ. ಇನ್ನು ಬಿಜೆಪಿಯಿಂದ ಸ್ಪರ್ಧಿಸಿರುವ ಆರಗಾ ಜ್ಞಾನೇಂದ್ರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕಾರ್ಯಕರ್ತರ ಕೆಲಸಗಳನ್ನು  ಸರಿಯಾಗಿ ಮಾಡಿಕೊಡಲಿಲ್ಲ ಎಂಬ ಅಸಮಧಾನವಿದೆ. ಬಿಜೆಪಿಗೆ ಓಟು ಚಲಾಯಿಸುತ್ತಾರೆಯೇ ಹೊರತು ಕಾರ್ಯಕರ್ತರು, ಹುಮ್ಮಸ್ಸಿನಿಂದ ಮತದಾರರನ್ನು ಮತಗಟ್ಟೆಗೆ 
ತರುವಷ್ಟರ ಮಟ್ಟಿಗೆ ಪ್ರಯತ್ನ ಹಾಕುತ್ತಾರಾ ಎಂಬುದು ಪ್ರಶ್ನೆಯಾಗಿದೆ. ಇನ್ನು ಪೊಲೀಸ್ ಮತ್ತು ಅರಣ್ಯ ಇಲಾಖೆ ಮೆಟ್ಟಲೇರಿದ ಜಮೀನು ಬೇಲಿ ವಿವಾದಗಳಿಗೆ ದ್ವೇಷದ ರಾಜಕಾರಣ ಮಾಡಿದ್ರು ಎಂಬ ಆರೋಪ ಆರಗ ಮೇಲಿದೆ. ಇದು ಯಾವ ರೀತಿ ಚುನಾವಣೆಯಲ್ಲಿ ಪರಿಣಾಮ ಬೀರುತ್ತೆ ಎಂಬುದು ಪ್ರಶ್ನೆಯಾಗಿದೆ. ಜೆಡಿಎಸ್ ಅಭ್ಯರ್ಥಿ ರಾಜರಾಂ ಹೆಚ್ಚು ಮತಗಳನ್ನು ಪಡೆದರೆ, ಅದು ಬಿಜೆಪಿಗೆ ವರವಾಗುತ್ತೆ. ಇನ್ನು ಮತದಾರರು ಗೆಲ್ಲುವ ಅಭ್ಯರ್ಥಿಗೆ ಕೈಜೋಡಿಸಿದರೆ, ಅದು ಕಾಂಗ್ರೇಸ್ ಗೆ ಅನುಕೂಲವಾಗುವ ಸಾಧ್ಯತೆಗಳು ಹೆಚ್ಚಿದೆ. 

>> ಭದ್ರಾವತಿ ವಿಧಾನಸಭಾ ಕ್ಷೇತ್ರ : 
ಭದ್ರಾವತಿ-112 ಕ್ಷೇತ್ರದಲ್ಲಿ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಕರ್ನಾಟಕ)ದ ಪಿ.ಇ.ಬಸವರಾಜಪ್ಪ, ಎಎಪಿ ಆನಂದ್, ಐಎನ್ಸಿ ಬಿ.ಕೆ.ಸಂಗಮೇಶ್ವರ್, ಜನತಾದಳ(ಸಂಯುಕ್ತ)ಶಶಿಕುಮಾರ್ ಬಿ.ಕೆ, ಜನತಾದಳ(ಎಸ್) 
ಶಾರದಾ ಅಪ್ಪಾಜಿ, ಬಿಜೆಪಿ ರುದ್ರೇಶ್ ಎಂ.ಜಿ, ಕರ್ನಾಟಕ ರಾಷ್ಟ್ರ ಸಮಿತಿಯ ಸುಮಿತ್ರಾ ಬಾಯಿ, ಪಕ್ಷೇತರ ಜಾನ್ ಬೆನ್ನಿ, ರಾಜಶೇಖರ್ ಎಸ್, ಎಸ್.ಕೆ.ಸುಧೀಂದ್ರ, ಶಶಿಕುಮಾರ್ ವೈ, ಮೋಹನ್ ಡಿ, ಬಿ.ಎನ್.ನಾಗರಾಜ್, ಅಹಮದ್ ಅಲಿ, ಕಣದಲ್ಲಿದ್ದಾರೆ.
2018 ರ ಚುನಾವಣೆಯಲ್ಲಿ ಕಾಂಗ್ರೇಸ್ ನ ಬಿ.ಕೆ ಸಂಗಮೇಶ್ವರ ಅಪ್ಪಾಜಿಗೌಡರ ಎದುರು ಗೆಲುವನ್ನು ಕಂಡಿದ್ದರು. ಸಂಗಮೇಶ್ವರ 75722 ಮತಗಳನ್ನು ಪಡೆದರೆ ಜೆಡಿಎಸ್ ನ ಅಪ್ಪಾಜಿ ಗೌಡರು 64155 ಮತಗಳನ್ನು ಪಡೆದು ಪರಾಭವಗೊಂಡಿದ್ದರು.

ಭದ್ರಾವತಿ ವಿಧಾನಸಭಾ ಕ್ಷೇತ್ರದ ಮತದಾರರ ಸಂಖ್ಯೆ: 
- ಪುರುಷ ಮತದಾರರು 102236
- ಮಹಿಳಾ ಮತದಾರರು-107971
- ಒಟ್ಟು ಮತದಾರರು-210212

ಭದ್ರಾವತಿ ವಿಧಾನಸಭಾ ಕ್ಷೇತ್ರದ ರಾಜಕೀಯ ಇತಿಹಾಸ: 
ಬೋವಿ(ಎಸ್ಸಿ)-1700, ಬಂಜಾರ-11000, ಕ್ರಿಶ್ವಿಯನ್ (ಕನ್ ವರ್ಟೆಡ್) 7000, ಇತರೆ ಎಸ್ಸಿ 13,000, ವಾಲ್ಮಿಕಿ ಮತ್ತು ಇತರೆ ಎಸ್ಟಿ -4000, ಒಕ್ಕಲಿಗ-36000, ಮುಸ್ಲಿಂ-33,000, ತಮೀಳ್- 30,000, ಲಿಂಗಾಯಿತ- 19,000, ಮರಾಠಿ-13,500, ಕುರುಬ-8000, 
ಈಡಿಗ-2200, ಇತರೆ- 15,25, ಕ್ಷೇತ್ರದಲ್ಲಿ ಒಕ್ಕಲಿಗರು ಹಾಗು ಲಿಂಗಾಯಿತರು ತಮಿಳರು ಹೆಚ್ಚುಕಮ್ಮಿ ಸಮಬಲದಲ್ಲಿದ್ದಾರೆ. ಅಂತಿಮವಾಗಿ ಮುಸ್ಲಿಂ ಮತಗಳು ನಿರ್ಣಾಯಕ.

ಶಿವಮೊಗ್ಗ ಜಿಲ್ಲಾ ಏಳು ವಿಧಾನಸಭಾ ಕ್ಷೇತ್ರಗಳಿಗೆ ಹೋಲಿಸಿದರೆ ಭದ್ರಾವತಿ ಕ್ಷೇತ್ರ.. ಅತ್ಯಂತ ಭಿನ್ನವಾಗಿದೆ. ಇಲ್ಲಿ ಪಕ್ಷಕ್ಕಿಂತಲೂ  ವ್ಯಕ್ತಿಗೆ ಹೆಚ್ಚಿನ ಮಾನ್ಯತೆ ನೀಡಿದ್ದಾರೆ ಕ್ಷೇತ್ರದ ಮತದಾರರು. ದಶಕಗಳಿಂದಲೂ ರಾಜಕೀಯ ಎದುರಾಳಿಗಳಾಗಿ ಬದ್ಧದ್ವೇಷಿಗಳಂತೆ ಇದ್ದಾರೆ.. 

ಕಾಂಗ್ರೇಸ್ ನ ಹಾಲಿ ಶಾಸಕ ಬಿ.ಕೆ ಸಂಗಮೇಶ್ ಮತ್ತು ಜೆಡಿಎಸ್ ಮಾಜಿ ಶಾಸಕ ಎಂ.ಜೆ ಅಪ್ಪಾಜಿಗೌಡ.ಕ್ಷೇತ್ರವನ್ನು ಇವರಿಬ್ಬರೂ ದಶಕಗಳಿಂದಲೂ ರಾಜಕಾರಣವನ್ನು ತಮ್ಮ ಮೂಗಿನ ನೇರಕ್ಕೆ ನಿಯಂತ್ರಿಸುತ್ತಾ ಬಂದಿದ್ದಾರೆ. ಶಿವಮೊಗ್ಗ ಜಿಲ್ಲೆ ಬಿಜೆಪಿ ಶಕ್ತಿಕೇಂದ್ರವಾಗಿದ್ದರೂ, ಭದ್ರಾವತಿ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗಟ್ಟಿಯಾಗಿ ನೆಲೆಯೂರಲು ಸಾಧ್ಯವಾಗಿಲ್ಲ.ಇದಕ್ಕೆ ಕಾರಣ ಮತ್ತದೆ ಅಪ್ಪಾಜಿ ಮತ್ತು ಸಂಗಮೇಶ್, ಇಂತಹ ರಾಜಕೀಯ ಭದ್ದವೈರಿಗಳಲ್ಲಿ ಈಗ ಅಪ್ಪಾಜಿ ಗೌಡರಿಲ್ಲ. ಕೊರೊನಾ ದಿಂದ ಸಾವನ್ನಪ್ಪಿದ ಅಪ್ಪಾಜಿ ಗೌಡರ ಸ್ಥಾನವನ್ನು ಪತ್ನಿ ಶಾರದ ಅಪ್ಪಾಜಿ ತುಂಬಿದ್ದಾರೆ. ಅಪ್ಪಾಜಿಗೌಡರಿಲ್ಲದ ಮೊದಲ ಚುನಾವಣೆ ಭದ್ರಾವತಿ ಕ್ಷೇತ್ರದಲ್ಲಿ ನಡೆಯುತ್ತಿದೆ.

ಯಾರಿಗೆ ಪ್ಲಸ್ ಯಾರಿಗೆ ಮೈವಸ್?
ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನೇ ಮುಂದಿಟ್ಟುಕೊಂಡು ಬಿ.ಕೆ ಸಂಗಮೇಶ್ ಮತಯಾಚನೆ ಮಾಡುತ್ತಿದ್ದಾರೆ. ತಾವು ಮಾಡಿದ ಕಾರ್ಯಗಳ ಪುಸ್ತಕವನ್ನೇ ಮತದಾರರಿಗೆ ಹಂಚುತ್ತಿದ್ದಾರೆ. ತಾವು ಗೆದ್ದರೆ ಮಂತ್ರಿಯಾಗುತ್ತೇನೆ. ಭದ್ರಾವತಿ ಎಂಪಿಎಂ ಕಾರ್ಖಾನೆಯನ್ನು ಮತ್ತೆ ಪ್ರಾರಂಭಿಸುವುದಾಗಿ ಹೇಳುತ್ತಾ ಮತಬೇಟೆಗೆ ನಿಂತಿದ್ದಾರೆ. ಇದು ವರವಾಗಬಹುದು. ಇಲ್ಲ ಇವರ ಐದು ವರ್ಷಗಳ ಅಧಿಕಾರ ದರ್ಪ ಮುಳುವಾಗಬಹುದು. 

ಇನ್ನು ಅಪ್ಪಾಜಿಗೌಡರ ಸಾವಿನ ಅನುಕಂಪದಲ್ಲಿಯೇ ಸೆರುಗು ಒಡ್ಡಿ ಮತ ಕೇಳುತ್ತಿರುವ ಶಾದರ ಅಪ್ಪಾಜಿಯವರಿಗೆ ಭದ್ರಾವತಿ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರು ಒಲವು ತೋರುತ್ತಿದ್ದಾರೆ. ಅಪ್ಪಾಜಿ ಗೌಡರ ಋಣ ಒಂದು ಬಾರಿ ತೀರಿಸೋಣ ಎಂಬ ಲೆಕ್ಕಚಾರ ಮತದಾರರಲ್ಲಿದೆ ಇದು ಶಾರದ ಅಪ್ಪಾಜಿಯವರಿಗೆ ವರವಾಗಬಹುದು. 

>> ಶಿಕಾರಿಪುರ ವಿಧಾನಸಭಾ ಕ್ಷೇತ್ರ: 
ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಮತದಾರರ ಲೆಕ್ಕಾಚಾರ: 
- ಪುರುಷ ಮತದಾರರು-99129
- ಮಹಿಳಾ ಮತದಾರರು-98311
- ಒಟ್ಟು ಮತದಾರರು-197443

ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತರು ಹಾಗೂ ಪರಿಶಿಷ್ಟ ಜಾತಿ ಸಮಬಲದಲ್ಲಿದ್ದರೂ, ಪರಿಶಿಷ್ಟ ವರ್ಗ ಹಾಗೂ ಮುಸ್ಲಿಂ ಮತಗಳು ನಿರ್ಣಾಯಕ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ತವರು ಕ್ಷೇತ್ರ ಶಿಕಾರಿಪುರ ಈ ಬಾರಿ ಹೈವೋಲ್ಟೇಜ್ ಚುನಾವಣ ರಣಕಣವಾಗಿ ಮಾರ್ಪಟ್ಟಿದೆ. ಬಿ‌ಎಸ್‌ವೈ ಚುನಾವಣಾ ರಾಜಕೀಯಿಂದ ನಿವೃತ್ತಿ ಘೋಷಿಸಿದ ನಂತರ ಕ್ಷೇತ್ರವನ್ನು ತಮ್ಮ ಪುತ್ರ ಬಿ.ವೈ ವಿಜಯೇಂದ್ರಗೆ ಧಾರೆ ಎರೆದಿದ್ದಾರೆ. ಶಿಕಾರಿಪುರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಬಿ.ಎಸ್.ಯಡಿಯೂರಪ್ಪರಿಗೆ ಕ್ಷೇತ್ರದ ಮತದಾರರು ಹೇಗೆ  ಕೈಹಿಡಿದರೋ ಅದೇ ರೀತೀ ಪುತ್ರನಿಗೂ ಆಶಿರ್ವಾದ ಮಾಡಲಿದ್ದಾರೆಂಬ  ವಿಶ್ವಾಸ ಯಡಿಯೂರಪ್ಪ ಅವರಿಗಿದೆ.  

ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳು:
ಶಿಕಾರಿಪುರ-115 ಕ್ಷೇತ್ರದಲ್ಲಿ ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆರ್ಪಿಐ ಪಕ್ಷದ ಯಲ್ಲಪ್ಪ, ಕೆಆರ್ಎಸ್ ಪಕ್ಷದ ರವಿನಾಯ್ಕ್, ಎಎಪಿ ಆರ್.ಎಸ್.ಚಂದ್ರಕಾಂತ, ಬಿಜೆಪಿಯ ಬಿ.ವೈ.ವಿಜಯೇಂದ್ರ, ಪಕ್ಷೇತರ ಇಮ್ತಿಯಾಜ್ ಅತ್ತರ್, ಜಿ.ಬಿ.ಮಾಲತೇಶ್, 
ಅನಿಲ್.ಎಂ.ಆರ್, ಮೊಹಮ್ಮದ್ ಸಾದಿಕ್, ನಾಗನಗೌಡ ಎಸ್.ಪಿ, ಗಣೇಶ ಆರ್. ಕಣದಲ್ಲಿದ್ದಾರೆ.

2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ.ಎಸ್.ಯಡಿಯೂರಪ್ಪ 86983 ಮತಗಳನ್ನು ಪಡೆದಿದ್ದರು. ಕಾಂಗ್ರೇಸ್ ನಿಂದ ಸ್ಪರ್ಧಿಸಿದ್ದ ಗೋಣಿ ಮಾಲತೇಶ್ 51,586 ಮತಗಳನ್ನು ಪಡೆದು ಪರಾಭವಗೊಂಡಿದ್ದರು. ಶಿಕಾರಿಪುರದಲ್ಲಿ 50 ಸಾವಿರಕ್ಕೂ ಅಧಿಕ ಮತಗಗಳು ಯಡಿಯೂರಪ್ಪರ ಸಾಂಪ್ರಾದಾಯಿಕ ವಿರೋಧಿ ಮತಗಳಿವೆ. ಆದರೂ ಕ್ಷೇತ್ರವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆ.

ಯಾರಿಗೆ ಪ್ಲಸ್ ಯಾರಿಗೆ ಮೈನಸ್?
ಮೂರು ಬಾರಿ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ನಡೆಸಿರುವ ಬಿಜೆಪಿ ಅಭ್ಯರ್ಥಿ ಬಿ.ವೈ ವಿಜಯೇಂದ್ರಗೆ ಚುನಾವಣೆ ಪೂರಕವಾಗಿದ್ದರೂ, ಪ್ರಯಾಸ ಪಡಬೇಕಾದ ವಾತಾವರಣ ನಿರ್ಮಾಣವಾಗಿದೆ. ಒಳಮೀಸಲಾತಿಯ ಕಿಚ್ಚು ರಾಜ್ಯದಲ್ಲಿ ಮೊದಲು ಹೊತ್ತಿಕೊಂಡಿದ್ದೇ
ಶಿಕಾರಿಪುರದಲ್ಲಿ. ಅದು ಯಡಿಯೂರಪ್ಪರ ನಿವಾಸಕ್ಕೂ ಕಲ್ಲು ಹೊಡೆಯುವಷ್ಟರ ಮಟ್ಟಿಗೆ ಆಕ್ರೋಶ ವ್ಯಕ್ತವಾಗಿತ್ತು. ಈ ಬಾರಿ ಬಂಜಾರ ಬೋವಿ ಕೊರಚ ಸಮಾಜಗಳು ಕ್ಷೇತ್ರದಲ್ಲಿ ಬಿಜೆಪಿಗೆ ಮತ ಚಲಾಯಿಸಲಿದೆಯಾ ಎಂಬುದು ಪ್ರಶ್ನೆಯಾಗಿ ಉಳಿದಿದೆ. ಈ ಸಮಾಜದಲ್ಲಿರುವ ಸಾಕಷ್ಟು ಮುಖಂಡರುಗಳು ಬಿಜೆಪಿಯಲ್ಲಿದ್ದರೂ, ತಾಂಡಗಳಲ್ಲಿ ಬಿಜೆಪಿ ಮುಖಂಡರಿಗೆ ಒಂದು ರೀತಿಯಲ್ಲಿ ಪ್ರತಿಭಟನೆ ಮುಷ್ಕರದ ಬಿಸಿ ಮುಟ್ಟಿದೆ. ಇದಲ್ಲದೆ ಸಾದು ಲಿಂಗಾಯಿತ ಸಮುದಾಯದ ನಾಗರಾಜ್ ಗೌಡ ಪಕ್ಷೇತರವಾಗಿ ಸ್ಪರ್ಧಿಸಿದ್ದು, ಪ್ರಭಲ ಪೈಪೋಟಿ ನೀಡುತ್ತಿದ್ದಾರೆ. 
ಪಕ್ಷೇತರ ಅಭ್ಯರ್ಥಿ 20 ಸಾವಿರ ಮತ ಕಸಿದರೂ, ವಿಜಯೇಂದ್ರಗೆ ಗೆಲುವು ಸುಲಭವಿಲ್ಲ ಎಂಬ ಸಂದೇಶ ರವಾನಿಸುತ್ತದೆ. ಇದೆಲ್ಲದರ ಹೊರತಾಗಿಯೂ ಕ್ಷೇತ್ರದ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಮತದಾರ ಮತ ಚಲಾಯಿಸಿದರೆ, ವಿಜಯೇಂದ್ರಗೆ ಹಾದಿ ಸುಗಮವಾಗಲಿದೆ. 
ಇನ್ನು ಕಾಂಗ್ರೇಸ್ ನಿಂದ ಸ್ಪರ್ಧಿಸಿರುವ ಗೋಣಿ ಮಾಲತೇಶ್ ಗೆ ಸಾಂಪ್ರಾದಾಯಿಕ ಮತಗಳು ಬೀಳುತ್ತವೆ. ಇದರ ನಡುವೆ ಇಬ್ಬರು ಕಾಂಗ್ರೇಸ್ ಬಂಡಾಯ ಅಭ್ಯರ್ಥಿಗಳು ಪಕ್ಷೇತರ ಅಭ್ಯರ್ಥಿ ನಾಗರಾಜ್ ಗೌಡರಿಗೆ ಬೆಂಬಲ ಸೂಚಿಸಿರುವುದು ಕಾಂಗ್ರೇಸ್ ಗೂ ಕೂಡ ಸೆಟ್ ಬ್ಯಾಕ್ ಎಂದೇ ಹೇಳಲಾಗುತ್ತಿದೆ. 

ಪಕ್ಷೇತರ ಅಭ್ಯರ್ಥಿಯ ತೀವೃ ಪೈಪೋಟಿ ಕಾಂಗ್ರೇಸ್ ಬಿಜೆಪಿಯಲ್ಲಿ ಯಾರಿಗೆ ವರ ಅಥವಾ ಶಾಪ ಎಂಬುದು ಇನ್ನು ಗುಪ್ತಗಾಮಿನಿಯಾಗಿದೆ.

>> ಸಾಗರ ವಿಧಾನಸಭಾ ಕ್ಷೇತ್ರ : 
ಮತದಾರರ ಸಂಖ್ಯೆ 
- ಪುರುಷ ಮತದಾರರು- 100317
- ಮಹಿಳಾ ಮತದಾರರು-102432
- ಒಟ್ಟು ಮತದಾರರು- 202750

ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಈಡಿಗರು ಹಾಗು ಬ್ರಾಹ್ಮಣರ ನಡುವೆ ಪೈಪೋಟಿ ಇದ್ದರೂ ಹಿಂದುಳಿದ ವರ್ಗ ನಿರ್ಣಾಯಕ. ಸಾಗರ ಕ್ಷೇತ್ರದಲ್ಲಿ 2018ರ  ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಹೆಚ್.ಹರತಾಳು ಹಾಲಪ್ಪ 78475 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೇಸ್ ನಿಂದ ಸ್ಪರ್ಧಿಸಿದ್ದ ಕಾಗೋಡು ತಿಮ್ಮಪ್ಪ 70, 436 ಮತಗಳನ್ನು ಪಡೆದು ಪರಾಭವಗೊಂಡಿದ್ದರು.

ಸಾಗರ-117 ಕ್ಷೇತ್ರದಲ್ಲಿ ಒಟ್ಟು 09 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜೆಡಿಎಸ್ ಸೈಯದ್ ಜಾಕಿರ್, ಕೆಆರ್ಎಸ್ ಕಿರಣ್.ಬಿ.ಇ, ಬಿಜೆಪಿ ಹೆಚ್.ಹಾಲಪ್ಪ, ಉತ್ತಮ ಪ್ರಜಾಕೀಯ ಪಾರ್ಟಿ ಸೋಮರಾಜ ಎನ್, ಐಎನ್ಸಿ ಗೋಪಾಲಕೃಷ್ಣ ಬೇಳೂರು, ಎಎಪಿ ಕೆ.ದಿವಾಕರ, 
ಪಕ್ಷೇತರ ಶಿವಕುಮಾರ ಕೆ.ವಿ, ಹರಟೆ ಗಾಮಪ್ಪ, ಟಿ.ಎನ್.ಶ್ರೀನಿವಾಸ ಕಣದಲ್ಲಿದ್ದಾರೆ.
ಕಾಗೋಡು ತಿಮ್ಮಪ್ಪರಿಲ್ಲದ ಮೊದಲ ಚುನಾವಣೆ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿದೆ. ಕಾಗೋಡು ತಿಮ್ಮಪ್ಪನವರ ಸ್ಥಾನವನ್ನು ಪುತ್ರಿ ರಾಜನಂದಿನಿ ತುಂಬುತ್ತಾರೆ ಎಂದು ಕಾರ್ಯಕರ್ತರು ಲೆಕ್ಕ ಹಾಕಿದ್ರು. ಆದರೆ ಕಾಂಗ್ರೇಸ್ ಪಕ್ಷ ಗೋಪಾಲಕೃಷ್ಣ ಬೇಳೂರುಗೆ ಮಣೆ ಹಾಕಿದ್ದರಿಂದ ಮುನಿಸಿಕೊಂಡ ಕಾಗೋಡು ತಿಮ್ಮಪ್ಪ ಪುತ್ರಿ ರಾಜನಂದಿನಿ ಬಿಜೆಪಿ ಪಕ್ಷವನ್ನು ಸೇರಿದ್ರು, ಬಿಜೆಪಿಯಿಂದ ಹರತಾಳು ಹಾಲಪ್ಪ ಸ್ಪರ್ಧಿಸಿದ್ದು, ಕ್ಷೇತ್ರದಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿ ನಡುವೇ ನೇರ ಸ್ಪರ್ಧೆ ಏರ್ಪಟ್ಟಿದೆ.ಕಾಗೋಡು ತಿಮ್ಮಪ್ಪ ಅಳಿಯ ಬೇಳೂರು ಗೋಪಾಲಕೃಷ್ಣರ ಪರ ಚುನಾವಣೆ ಪ್ರಚಾರ ಮಾಡುತ್ತಿದ್ದರೆ, ಕಾಗೋಡು ಪುತ್ರಿ ರಾಜನಂದಿನಿ, ಬಿಜೆಪಿಯ ಹರತಾಳು ಹಾಲಪ್ಪರ ಪರ ಪ್ರಚಾರ ಮಾಡುತ್ತಿದ್ದಾರೆ. ಸಾಗರದಲ್ಲಿ ಹಾಲಪ್ಪರ ಚುನಾವಣಾ ಸ್ಪರ್ಧೆಗೆ ಸ್ವಪಕ್ಷೀಯರೇ ತೀವೃ ವಿರೋಧ ವ್ಯಕ್ತಪಡಿಸಿದ್ರೂ, ಅಂತಿಮವಾಗಿ ಟಿಕೇಟ್ ಪಡೆಯುವಲ್ಲಿ ಹಾಲಪ್ಪ ಯಶಸ್ವಿಯಾಗಿದ್ದಾರೆ. ಹಾಲಪ್ಪರಿಗೆ ಬಿಜೆಪಿ ಹಾಗು ಯಡಿಯೂರಪ್ಪರೇ ಶ್ರೀರಕ್ಷೆಯಾಗಿ ನಿಲ್ಲಬೇಕಿದೆ. ಸಿಗಂದೂರು ದೇವಸ್ಥಾನ ಎಂಡಿಎಫ್ ವಿವಾದ ವಿಚಾರದಲ್ಲಿ ತಲೆಹಾಕಿದ್ದ ಹಾಲಪ್ಪ ಅದರ ಪೆಟ್ಟನ್ನು ಚುನಾವಣೆಯಲ್ಲಿ ಎದುರಿಸಬೇಕಾಗಿದೆ. ಅಭಿವೃದ್ಧಿ ಕಾರ್ಯ ಬಿಜೆಪಿ ಸಾಂಪ್ರಾದಾಯಿಕ ಮತಗಳು ಕೈಹಿಡಿದರೆ ಹಾಲಪ್ಪ ಪ್ರಾಯಾಸದ ಗೆಲವು ಸಾಧಿಸಬಹುದಾಗಿದೆ. ಇಲ್ಲವಾದಲ್ಲಿ ಅದು ಕೂಡ ಸಾಧ್ಯವಾಗುವುದಿಲ್ಲ. ಇನ್ನು ಕಾಂಗ್ರೇಸ್ ನಿಂದ ಸ್ಪರ್ಧಿಸಿರುವ ಗೋಪಾಲಕೃಷ್ಣ ಬೇಳೂರಿಗೆ ಸೋಲಿನ ಅನುಕಂಪ ಕೈಹಿಡಿಯಲಿದೆ. ಸೋತ ನಂತರವೂ ಕ್ಷೇತ್ರದಲ್ಲಿ ಸಾಕಷ್ಟು ಹೋರಾಟಗಳನ್ನು ಮಾಡಿದ್ದ ಬೇಳೂರಿಗೆ ಯುವ ಸಮೂಹ ಕೈಹಿಡಿಯುವ ಸಾಧ್ಯತೆ ಹೆಚ್ಚಿದೆ ಬಂಡಾಯ ಕಾಂಗ್ರೇಸ್ ಮುಖಂಡರನ್ನು ಮನವೊಲಿಸಿ ಚುನಾವಣಾ ಪ್ರಚಾರ ಮಾಡಿದರೆ, ಬೇಳೂರು ಗೆಲ್ಲಬಹುದಾದ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಇದು ಕ್ಷೇತ್ರದಲ್ಲಿ ಅಂದು ಕೊಂಡಂತೆ ಆಗುತ್ತಿದೆಯಾ ಎಂಬುದು ಮಿನಿಯನ್ ಡಾಲರ್ ಪ್ರಶ್ನೆಯಾಗಿದೆ.

>> ಸೊರಬ ವಿಧಾನಸಭಾ ಕ್ಷೇತ್ರ:
ಮತದಾರರ ಸಂಖ್ಯೆ: 
- ಪುರುಷ ಮತದಾರರು 97674
- ಮಹಿಳಾ ಮತದಾರರು-95910
- ಒಟ್ಟು ಮತದಾರರು-193584

ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಈಡಿಗರು, ಲಿಂಗಾಯತರು ಹಾಗು ಪರಿಶಿಷ್ಟ ಜಾತಿಯ ಮತಗಳು ಪ್ರಭಲವಾಗಿದ್ದರೂ ಮುಸ್ಲಿಂ ಹಾಗು ಬ್ರಾಹ್ಮಣ ಮತಗಳು ನಿರ್ಣಾಯಕ.
ತಮ್ಮ ವರ್ಣರಂಜಿತ ವ್ಯಕ್ತಿತ್ವದ ಮೂಲಕ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದ ಮಾಜಿ ಸಿಎಂ ದಿವಂಗತ ಬಂಗಾರಪ್ಪನವರ ಸ್ವಕ್ಷೇತ್ರ ಸೊರಬ. ಈ ಬಾರಿ ಸೊರಬದಲ್ಲಿ ಅವರ ಮಕ್ಕಳಾದ ಕುಮಾರ್ ಬಂಗಾರಪ್ಪ ಹಾಗು ಮಧು ಬಂಗಾರಪ್ಪ ನಡುವೆ ಜಿದ್ದಾಜಿದ್ದಿಯ ಚುನಾವಣೆ ನಿರೀಕ್ಷಿಸಲಾಗಿದೆ. ಬಂಗಾರಪ್ಪರ ಮರಣಾ ನಂತರ ಸಹೋದರರಿಬ್ಬರು ಚುನಾವಣೆ ಅಖಾಡಕ್ಕಿಳಿದಿದ್ದಾರೆ.

2018 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಕುಮಾರ್ ಬಂಗಾರಪ್ಪರು 72091 ಮತಗಳನ್ನು ಪಡೆದು ಗೆಲುವು ಸಾಧಿಸಿದ್ರು. ಇನ್ನು ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಮಧು ಬಂಗಾರಪ್ಪ 58805 ಮತಗಳನ್ನು ಪಡೆದು ಸೋಲನುಭವಿಸಿದ್ರು.

ಸೊರಬ-116  ಕ್ಷೇತ್ರದಲ್ಲಿ ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜೆಡಿಎಸ್ ನಿಂದ ಬಿ.ಚಂದ್ರಪ್ಪಗೌಡ, ಸಮಾಜವಾದಿ ಪಾರ್ಟಿ ಪರಶುರಾಮ ವಿ.ಜಿ, ಎಎಪಿ ಚಂದ್ರಶೇಖರ ಕೆ ವೈ, ಉತ್ತಮ ಪ್ರಜಾಕೀಯ ಪಾರ್ಟಿ ಲಕ್ಷ್ಮೀಕಾಂತ ಸಿ.ಎಸ್, ಐಎನ್ಸಿ ಯಿಂದ ಮಧು ಬಂಗಾರಪ್ಪ, ಬಿಜೆಪಿಯಿಂದ ಎಸ್ ಕುಮಾರ್ ಬಂಗಾರಪ್ಪ, ಕೆಆರ್ಎಸ್ ಟಿ.ಮಂಜುನಾಥ, ಪಕ್ಷೇತರ ಶಿವಯೋಗಿ ಎಸ್ ಎಸ್, ಗುಡ್ಡಪ್ಪ, ಜೆ.ಎಸ್.ಚಿದಾನಂದ ಗೌಡ ಕಣದಲ್ಲಿದ್ದಾರೆ. 

ಯಾರಿಗೆ ಪ್ಲಸ್ ಯಾರಿಗೆ ಮೈನಸ್? 
ಬಿಜೆಪಿ ಹೈಕಮಾಂಡ್ ತೂಗಿಬಾಗಿ ಅಳೆದು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆದರೆ ಸೊರಬದಲ್ಲಿ ತೀವೃ ವಿರೋಧದ ನಡುವೆಯೂ ಪಕ್ಷದ ಹೈಕಮಾಂಡ್ ಕುಮಾರ್ ಬಂಗಾರಪ್ಪರಿಗೆ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಸದ್ಯ ಸೊರಬ ಕ್ಷೇತ್ರವೇ ವಿಶೇಷ ಕುತೂಹಲ ಕೆರಳಿಸುತ್ತಿದೆ. 
ಇದಕ್ಕೆ ಕಾರಣ ಇಲ್ಲಿ ಬಿಜೆಪಿ ಮತ್ತು ನಮೋ ಅಭಿಮಾನಿಗಳ ನಡುವೆ ಪೈಪೋಟಿ ಬಿದ್ದಿದೆ. ಅಷ್ಟೆಅಲ್ಲದೆ, ತಮ್ಮ ವಿರೋಧದ ನಡುವೆಯು ಬಿಜೆಪಿ ಟಿಕೆಟ್ ಕುಮಾರ್ ಬಂಗಾರಪ್ಪರಿಗೆ ನೀಡಿದ್ದನ್ನ ನಮೋ ವೇದಿಕೆಗ ಸಹಿಸಲಾಗುತ್ತಿಲ್ಲ. 
ನಮೋ ವೇದಿಕೆ ಎಂಬ ಮೂಲ ಬಿಜೆಪಿಗರು ಹಾಗೂ ಹಾಲಿ ಶಾಸಕ ಕುಮಾರ್ ಬಂಗಾರಪ್ಪರ ವಿರೋಧಿಗಳು ಮತ್ತು ಅವರಿಂದ ಅಸಮಾಧಾನಕ್ಕೊಳಗಾದವರ ತಂಡ, ಬಂಗಾರಪ್ಪರ ಹಿರಿಮಗನ ವಿರುದ್ಧ ಬಹಿರಂಗ ಸಮರವೇ ಸಾರಿತ್ತು. ಶಕ್ತಿಪ್ರದರ್ಶನ ಮಾಡಿ ತಮ್ಮ ವಿಚಾರ ಎಷ್ಟು ಗಂಭೀರ ಎಂಬುದನ್ನ ಬಿಜೆಪಿ ನಾಯಕರಿಗೆ ಮನವರಿಕೆ ಮಾಡಿತ್ತು. 
ಸೊರಬದಲ್ಲಿ ಕುಮಾರ್ ಬಂಗಾರಪ್ಪ ಬಿಜೆಪಿಯಲ್ಲಿದ್ದರೂ ತಮ್ಮದೆ ಒಂದು ಬಣವನ್ನು ಕಟ್ಟಿಕೊಂಡು ಅವರಿಗೆ ಕಿಮ್ಮತ್ತು ನೀಡುತ್ತಿದ್ದಾರೆ ಎಂಬುದು ಒಂದು ಕಡೆಯ ಆರೋಪವಾದರೆ, ಕೆಲಸ ಮಾಡಲು ಹಾಗೂ ಪಕ್ಷ ಗೆಲ್ಲಿಸಲು ನಾವು ಬೇಕು. ಆದರೆ ಅಧಿಕಾರ ನಡೆಸಲು ಮೂಲ ಬಿಜೆಪಿಗರು ಬೇಕೆ ಎಂಬುದು ಮತ್ತೊಂದು ಕಡೆ ನಿಲುವು. ಈ ವಿಭಿನ್ನ ಮನಸ್ಥಿತಿಯಿಂದಲೇ ಸೊರಬ ಬಿಜೆಪಿ ಎರಡು ಭಾಗವಾಗಿದೆ. ಅಲ್ಲದೆ ಸರ್ಕಾರಿ ನೌಕರರ ಸಂಘವೂ ಕೂಡ ಈ ಬಾರಿ ಕುಮಾರ್ ಬಂಗಾರಪ್ಪರಿಗೆ ಮಣೆ ಹಾಕದಿರಲು ತೀರ್ಮಾನಿಸಿದೆ. 
ಸೊರಬದಲ್ಲಿ ಶಾಸಕರು ಅಧಿಕಾರಿ ಸಿಬ್ಬಂದಿಗಳನ್ನು ನಡೆಸಿಕೊಂಡ ಬಗ್ಗೆ ಸಂಘದಲ್ಲಿ ತೀವ್ರ ಆಕ್ರೋಶವಿದೆ. ಇದೆಲ್ಲವೂ ಕಾಂಗ್ರೇಸ್ ನಿಂದ ಸ್ಪರ್ಧಿಸಿರುವ ಮಧು ಬಂಗಾರಪ್ಪರಿಗೆ ಅನುಕೂಲವಾಗಲಿದೆ. ಸತತ ಮೂರು ಸೋಲುಗಳನ್ನು ಕಂಡಿರುವ ಮಧು ಬಂಗಾರಪ್ಪರಿಗೆ ಅನುಕಂಪದ ಅಲೆಯಿದೆ.
ಸೋಲಿನ ನಂತರವೂ ಬಗರ್ ಹುಕುಂ ರೈತರು ಹಾಗು ಶರಾವತಿ ಮುಳುಗಡೆ ಸಂತ್ರಸ್ಥರ ಹೋರಾಟ ನೀರಾವರಿ ಹೋರಾಟಗಳಲ್ಲಿ ಮಧು ಬಂಗಾರಪ್ಪ ಮಂಚೂಣಿಯಲ್ಲಿದ್ದರು. ಕ್ಷೇತ್ರದ ಮತದಾರರ ಜೊತೆ ಹತ್ತಿರವಾಗಿರುವ ಮಧು ಬಂಗಾರಪ್ಪರಿಗೆ ಈ ಬಾರಿ ಚುನಾವಣೆ ಕಬ್ಬಿಣದ ಕಡಲೆ ಅಲ್ಲ ಎಂಬದು ನಿರ್ವಿವಾದ. ಹಾಗೆಯೇ ಕುಮಾರ್ ಬಂಗಾರಪ್ಪ ಕೂಡ ಬಿಜೆಪಿಯ ಸಾಂಪ್ರಾದಾಯಿಕ ಮತ ಹಾಗೂ ಯಡಿಯೂರಪ್ಪರ ನೆರಳಿನಲ್ಲಿಯೇ ಚುನಾವಣೆ ಎದುರಿಸಬೇಕಾಗಿದೆ, ಇಲ್ಲವಾದಲ್ಲಿ ಇನ್ನೂ ಅಂದಾಜು 70 ಸಾವಿರದಷ್ಟು ಈಡಿಗ ಮತಗಳು, ಅಂದಾಜು 40 ಸಾವಿರದಷ್ಟು ಲಿಂಗಾಯತ ಮತಗಳು ಹಾಗೂ ಅಂದಾಜು 20 ಸಾವಿರದಷ್ಟು ಎಸ್​ಸಿ ಹಾಗೂ ಮುಸ್ಲಿಮ್​ ಮತಗಳಿರುವ ಸೊರಬದಲ್ಲಿ ಬಂಗಾರಪ್ಪನವರ ಇಬ್ಬರ ಪುತ್ರರ ನಡುವೆ ಒಲವು ಯಾರ ಕಡೆ ಇದೆ 
ಎಂಬುದರ ಮೇಲೆ ಚುನಾವಣೆ ನಿರ್ಧಾರವಾಗಲಿದೆ. ಮೂರನೇ ಪ್ರಬಲ ಅಭ್ಯರ್ಥಿಯು ಸಹ ಇಲ್ಲಿ ನಿರ್ಣಾಯಕವಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಜೆಡಿಎಸ್​ ಬಾಸೂರು ಚಂದ್ರೆಗೌಡರನ್ನ ಕಣಕ್ಕಿಳಿದಿದ್ದು,  ಪೈಪೋಟಿ ಕೂಡ ಬಿರುಸಲಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News