ಬಜೆಟ್‌ನಲ್ಲಿ ಬಯಲುಸೀಮೆಗೆ ವಂಚನೆಯಾಗಿದೆ, ಯಾವುದೇ ಯೋಜನೆ ಇಲ್ಲ..! 

Karnataka Budget 2024: ಬೆಂಗಳೂರಿನ ತಲಾ ಆದಾಯ 5.41 ಲಕ್ಷ ರೂ. ಇದೆ. ಅದೇ ಚಿಕ್ಕಬಳ್ಳಾಪುರದಲ್ಲಿ 1.32 ಲಕ್ಷ ರೂ. ಹಾಗೂ ಕೋಲಾರದಲ್ಲಿ 1.42 ಲಕ್ಷ ರೂ. ಇದೆ. ಸಮೀಪದಲ್ಲೇ ಇರುವ ಬೆಂಗಳೂರಿಗೆ ಹೋಲಿಸಿದರೆ ಇವೆರಡೂ ಜಿಲ್ಲೆಗಳ ತಲಾ ಆದಾಯ ತೀರಾ ಕಡಿಮೆಯಾಗಿದೆ. ಆದರೆ ಈ ಜಿಲ್ಲೆಯಲ್ಲಿ ಸರ್ಕಾರ ಯಾವುದೇ ಯೋಜನೆ ನೀಡಿಲ್ಲ.  

Written by - Krishna N K | Last Updated : Feb 16, 2024, 04:27 PM IST
  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ಅತ್ಯಂತ ನೀರಸವಾಗಿದೆ.
  • ಬಯಲು ಸೀಮೆ ಜನತೆಗೆ ಈ ಬಜೆಟ್‌ ತೀವ್ರ ನಿರಾಸೆ ಮೂಡಿಸಿದೆ.
  • ಸಿದ್ದರಾಮಯ್ಯ ಬಜೆಟ್‌ ಬಗ್ಗೆ ಮಾಜಿ ಸಚಿವ ಡಾ.ಕೆ ಸುಧಾಕರ್‌ ಬೇಸರ.
ಬಜೆಟ್‌ನಲ್ಲಿ ಬಯಲುಸೀಮೆಗೆ ವಂಚನೆಯಾಗಿದೆ, ಯಾವುದೇ ಯೋಜನೆ ಇಲ್ಲ..!  title=

ಚಿಕ್ಕಬಳ್ಳಾಪುರ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ಅತ್ಯಂತ ನೀರಸವಾಗಿದ್ದು, ಬಯಲುಸೀಮೆ ಜಿಲ್ಲೆಗಳಿಗೆ ವಂಚಿಸಲಾಗಿದೆ. ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನತೆಗೆ ಇದು ತೀವ್ರ ನಿರಾಸೆ ಮೂಡಿಸಿದೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರದ ಬಜೆಟ್‌ ಕುರಿತು ಪ್ರತಿಕ್ರಿಯಿಸಿರುವ ಅವರು, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ವರದಿಯ ಪ್ರಕಾರ, ಬೆಂಗಳೂರಿನ ತಲಾ ಆದಾಯ 5.41 ಲಕ್ಷ ರೂ. ಇದೆ. ಅದೇ ಚಿಕ್ಕಬಳ್ಳಾಪುರದಲ್ಲಿ 1.32 ಲಕ್ಷ ರೂ. ಹಾಗೂ ಕೋಲಾರದಲ್ಲಿ 1.42 ಲಕ್ಷ ರೂ. ಇದೆ. ಸಮೀಪದಲ್ಲೇ ಇರುವ ಬೆಂಗಳೂರಿಗೆ ಹೋಲಿಸಿದರೆ ಇವೆರಡೂ ಜಿಲ್ಲೆಗಳ ತಲಾ ಆದಾಯ ತೀರಾ ಕಡಿಮೆಯಾಗಿದೆ. ಆದರೆ ಈ ಜಿಲ್ಲೆಯಲ್ಲಿ ಸರ್ಕಾರ ಯಾವುದೇ ಯೋಜನೆ ನೀಡಿಲ್ಲ ಎಂದರು.

ಇದನ್ನೂ ಓದಿ:ಗೋ ಹತ್ಯೆ, ಜಾನುವಾರುಗಳ ರಕ್ಷಣೆಗೆ ಬಜೆಟ್‌ನಲ್ಲಿ ಯಾವುದೇ ಯೋಜನೆ ಇಲ್ಲ : ಶಾಸಕ ಪ್ರಭು ಚವ್ಹಾಣ್ 

ಹಿಂದಿನ ಬಿಜೆಪಿ ಸರ್ಕಾರ ಬೆಂಗಳೂರಿಗೆ ಪರ್ಯಾಯವಾಗಿ ಸುತ್ತಮುತ್ತಲಿನ ನಗರಗಳನ್ನು ಬೆಳೆಸುವ ಹಾಗೂ ಬೇರೆ ಜಿಲ್ಲೆಗಳಲ್ಲಿ ಹೊಸ ಕೈಗಾರಿಕೆ ಸ್ಥಾಪಿಸಲು ʼಬಿಯಾಂಡ್‌ ಬೆಂಗಳೂರುʼ ಎಂಬ ಕಲ್ಪನೆಯೊಂದಿಗೆ ಈ ಜಿಲ್ಲೆಗಳಲ್ಲಿ ತಲಾ ಆದಾಯ ಹೆಚ್ಚಿಸಲು ಒತ್ತು ನೀಡಿತ್ತು. ಆದರೆ ಇಂದಿನ ಬಜೆಟ್‌ನಲ್ಲಿ ಬಯಲುಸೀಮೆ ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿಗೆ, ಉದ್ಯೋಗ ಸೃಷ್ಟಿಗೆ ಯಾವುದೇ ಯೋಜನೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಶಾಶ್ವತ ನೀರಾವರಿಗೆ ಖಾತರಿ ಇಲ್ಲ : ಬಯಲು ಸೀಮೆಯಲ್ಲಿ ಕೃಷಿಯೇ ಜನರ ಪ್ರಮುಖ ಆರ್ಥಿಕ ಆಧಾರ. ಮಳೆ ಆಧಾರಿತ ಒಣ ಬೇಸಾಯದ ಮೇಲೆ ಅವಲಂಬಿತರಾಗಿರುವ ಈ ಭಾಗದಲ್ಲಿ ಶಾಶ್ವತ ನೀರಾವರಿಗಾಗಿ ಎತ್ತಿನಹೊಳೆ ಯೋಜನೆಯನ್ನು ಎರಡೇ ವರ್ಷಗಳಲ್ಲಿ ಪೂರ್ಣಗೊಳಿಸುವುದಾಗಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಆದರೆ ಬಜೆಟ್‌ನಲ್ಲಿ ಅದರ ಬಗ್ಗೆ ಯಾವುದೇ ಖಾತರಿ ನೀಡಿಲ್ಲ. ಎಚ್‌.ಎನ್‌.ವ್ಯಾಲಿ ಹಾಗೂ ಕೆ.ಸಿ.ವ್ಯಾಲಿ ಯೋಜನೆಯಡಿ ತೃತೀಯ ಹಂತದ ಸಂಸ್ಕರಣಾ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೂಡ ಕೋಲಾರ, ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳ ಜನತೆಯ ನಿರೀಕ್ಷೆ ಹುಸಿಯಾಗಿದೆ. ಈ ನಿಟ್ಟಿನಲ್ಲಿ ಯಾವುದೇ ಘೋಷಣೆ ಮಾಡಿಲ್ಲ ಎಂದು ಟೀಕಿಸಿದರು. 

ಇದನ್ನೂ ಓದಿ:ಸಿದ್ದರಾಮಯ್ಯ ಬಜೆಟ್ ರಾಜ್ಯದ ವಿನಾಶಕ್ಕೆ ಬುನಾದಿ ಹಾಕಿದ್ದಾರೆ : ಹೆಚ್‌ಡಿಕೆ 

ಮಾವು ಹಣ್ಣು ಮಾರಾಟ ಹಾಗೂ ರಫ್ತಿನಲ್ಲಿ ಕೋಲಾರ ಮುಂಚೂಣಿಯಲ್ಲಿದೆ. ಅದೇ ರೀತಿ ಈ ಭಾಗದಲ್ಲಿ ಟೊಮ್ಯಾಟೊ ಬೆಳೆ ಕೂಡ ಪ್ರಾಧಾನ್ಯತೆ ಹೊಂದಿದೆ. ಇವೆರಡಕ್ಕೂ ಸೂಕ್ತ ಸಂಸ್ಕರಣಾ ಘಟಕ ಹಾಗೂ ಶೀತಲ ಘಟಕವನ್ನು ನಿರ್ಮಿಸಲು ಯಾವುದೇ ಯೋಜನೆ ರೂಪಿಸಿಲ್ಲ. ಈ ಭಾಗದಲ್ಲಿ ಹೂ ಬೆಳೆಗಾರರ ಪ್ರಗತಿಗಾಗಿ ಚಿಕ್ಕಬಳ್ಳಾಪುರದಲ್ಲಿ ಅಂತಾರಾಷ್ಟ್ರೀಯ ಹೂ ಮಾರುಕಟ್ಟೆ ನಿರ್ಮಿಸುವ ಯೋಜನೆಯನ್ನು ಬಿಜೆಪಿ ಸರ್ಕಾರ ನೀಡಿತ್ತು. ಇದನ್ನು ಸಾಕಾರಗೊಳಿಸುವುದು ಈಗಿನ ಸರ್ಕಾರದ ಆದ್ಯತೆಯಾಗಬೇಕಿತ್ತು. ಜೊತೆಗೆ, ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿದಂತೆಯೇ ರೇಷ್ಮೆ ಸ್ಥಿರತೆ ನಿಧಿಗೆ 2 ಸಾವಿರ ಕೋಟಿ ರೂ., ರೀಲರ್‌ಗಳಿಗೆ 3 ಲಕ್ಷ ರೂ. ಬಡ್ಡಿ ರಹಿತ ಸಾಲದ ಕಾರ್ಯಕ್ರಮವನ್ನೂ ಜಾರಿ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಪಶು ಭಾಗ್ಯ ಯೋಜನೆಯಡಿ ಉತ್ತಮ ತಳಿಯ ಹಸು/ಎಮ್ಮೆಗಳ ಖರೀದಿಗೆ 3 ಲಕ್ಷ ರೂ. ವರೆಗೆ ಶೂನ್ಯ ಬಡ್ಡಿದರದ ಸಾಲ, ಹಾಲಿನ ಸಬ್ಸಿಡಿ 5 ರಿಂದ 7 ರೂ. ಹೆಚ್ಚಳ, ಮಹಿಳೆಯರಿಗೆ ಹಸು/ಎಮ್ಮೆ ಖರೀದಿಗೆ ಬಡ್ಡಿರಹಿತ ಸಾಲ, ಜಾನುವಾರು ಸಾಕಾಣಿಕೆದಾರರಿಂದ ಕೆ.ಜಿ.ಗೆ 3 ರೂ.ನಂತೆ ಸಗಣಿ ಗೊಬ್ಬರ ಖರೀದಿ ಮೊದಲಾದ ಯೋಜನೆಗಳು ಈ ಬಜೆಟ್‌ನಲ್ಲಿ ಘೋಷಣೆಯಾಗುವ ನಿರೀಕ್ಷೆ ಕೂಡ ಸುಳ್ಳಾಗಿದೆ. ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ನಡೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಹೇಳಿದರು.

ಗಡಿ ಭಾಗಗಳ ಅಭಿವೃದ್ಧಿ ಶೂನ್ಯ : ಗಡಿ ಭಾಗಗಳ ಅಭಿವೃದ್ಧಿಗೆ, ಗಡಿ ಕೈಗಾರಿಕಾ ಅಭಿವೃದ್ಧಿ ನಿಗಮ ಆರಂಭಿಸಿ, 5 ಸಾವಿರ ಕೋಟಿ ರೂ. ನೀಡುವ ಬಗ್ಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಸ್ತಾಪವಿದ್ದರೂ, ಬಾಗೇಪಲ್ಲಿ, ಕೆಜಿಎಫ್ ಸೇರಿದಂತೆ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಯಾವುದೇ ತಾಲ್ಲೂಕುಗಳಲ್ಲಿ ಅದನ್ನು ಅನುಷ್ಠಾನ ಮಾಡುವ ಬಗ್ಗೆ ಘೋಷಣೆ ಮಾಡಿಲ್ಲ ಎಂದು ಡಾ.ಕೆ.ಸುಧಾಕರ್‌ ವಿಷಾದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಸಿಡಿಮದ್ದು ಜಗಿದು ಕರುವಿಗೆ ಗಾಯ: ಸಿಡಿಮದ್ದು ಇಟ್ಟಿದ್ದ ಮೂವರನ್ನು ಹಿಡಿದ ಗ್ರಾಮಸ್ಥರು!!

ಮೈಸೂರು ಕರ್ನಾಟಕದ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ. ಹೂಡಿಕೆ ಮಾಡುವ ಬಗ್ಗೆ ಪ್ರಣಾಳಿಕೆಯಲ್ಲಿ ಹೇಳಲಾಗಿತ್ತು. ಈ ಪೈಕಿ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಿಗೆ 2 ಸಾವಿರ ಕೋಟಿ ರೂ. ಮೀಸಲಿಟ್ಟು, ಯೋಜನೆಗಳ ಸಮರ್ಪಕ ಜಾರಿಗೆ ಪ್ರತ್ಯೇಕ ನಿಗಮ ಸ್ಥಾಪಿಸುವ ನಿರೀಕ್ಷೆ ಇತ್ತು. ಈ ನಿಟ್ಟಿನಲ್ಲೂ ಕಾಂಗ್ರೆಸ್ ಸರ್ಕಾರ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಮೋಸ ಮಾಡಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ, ಹಿಂದಿನ ಬಿಜೆಪಿ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ಒಂದು ಮೆಡಿಕಲ್‌ ಕಾಲೇಜು ನಿರ್ಮಿಸಲು ಕ್ರಮ ವಹಿಸಿತ್ತು. ಆ ಬದ್ಧತೆಯಿಂದಾಗಿ ಚಿಕ್ಕಬಳ್ಳಾಪುರದಲ್ಲಿ ಅತಿ ಶೀಘ್ರದಲ್ಲಿ ಮೆಡಿಕಲ್‌ ಕಾಲೇಜು ಆರಂಭಿಸಲು ಸಾಧ್ಯವಾಗಿತ್ತು. ಆದರೆ ಕೋಲಾರ ಜಿಲ್ಲೆಯ ಜನತೆಯ ಬಹುದಿನಗಳ ಕನಸಾಗಿದ್ದ ಸರ್ಕಾರಿ ಮೆಡಿಕಲ್‌ ಕಾಲೇಜು ಇನ್ನೂ ಕನಸಾಗಿಯೇ ಉಳಿದಿದೆ ಎಂದು ಹೇಳಿದ್ದಾರೆ.

2013 ರಲ್ಲಿ ಅಧಿಕಾರಕ್ಕೆ ಬರುವ ಮುನ್ನ 173 ಭರವಸೆಗಳನ್ನು ನೀಡಿದ್ದು, ಕೇವಲ 67 ಮಾತ್ರ ಈಡೇರಿಸಲಾಗಿತ್ತು. ಅಂದರೆ ಕೊಟ್ಟ ಭರವಸೆಗಳಲ್ಲಿ ಶೇ.38 ರಷ್ಟು ಮಾತ್ರ ಸಾಕಾರಗೊಂಡಿತ್ತು. ಕೇವಲ ಆದೇಶ ಹಾಗೂ ಅಪೂರ್ಣಗೊಂಡಿದ್ದು 35 ರಷ್ಟಿತ್ತು. ಈ ಬಾರಿ ಗ್ಯಾರಂಟಿಗಳ ಜೊತೆಗೆ ಹಲವಷ್ಟು ಭರವಸೆಗಳನ್ನು ನೀಡಿ ಕಾಂಗ್ರೆಸ್‌ ಆಡಳಿತದ ಚುಕ್ಕಾಣಿ ಹಿಡಿದಿದೆ. ಜನರಿಗೆ ಕೊಟ್ಟ ಮಾತಿನಂತೆಯೇ ಅದನ್ನು ಕಟ್ಟುನಿಟ್ಟಾಗಿ ಪಾಲಿಸುವ ಪ್ರಾಮಾಣಿಕತೆಯನ್ನು ಪ್ರದರ್ಶನ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಾಂಗ್ರೆಸ್‌ ಮೇಲೆ ವಿಶ್ವಾಸವಿಟ್ಟು, ಮತ ನೀಡಿ ಅಧಿಕಾರ ಕೊಟ್ಟ ಬಯಲುಸೀಮೆ ಜಿಲ್ಲೆಗಳ ಮತದಾರರ ನಂಬಿಕೆಗೆ ಇಂದಿನ ಬಜೆಟ್ ತೀವ್ರ ಘಾಸಿ ಉಂಟುಮಾಡಿದೆ ಎಂದು ಡಾ.ಕೆ.ಸುಧಾಕರ್‌ ಅಸಮಾಧಾನ ಹೊರಹಾಕಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News