ನವದೆಹಲಿ : ಯುಜಿಸಿ ಮಾನ್ಯತೆ ಪಡೆದ ಡೀಮ್ಡ್(ಸ್ವಾಯತ್ತ) ಶಿಕ್ಷಣ ಸಂಸ್ಥೆಗಳು ಇನ್ನು ಮುಂದೆ ತಮ್ಮ ಹೆಸರಿನ ಮುಂದೆ ಯುನಿವರ್ಸಿಟಿ(ವಿಶ್ವವಿದ್ಯಾನಿಲಯ) ಪದ ಬಳಸದಂತೆ ದೇಶಾದ್ಯಂತ ಒಟ್ಟು 29 ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿ ಆದೇಶ ನೀಡಿದ್ದು, ಇಂದು ಸಂಜೆ 4 ಗಂಟೆಯೊಳಗೆ ಈ ಬಗ್ಗೆ ತೀರ್ಮಾನ ಕೈಗೊಳ್ಳಲು ವಿವಿಗಳ ಆಡಳಿತ ಮಂಡಳಿಗಳಿಗೆ ಕಾಲಾವಕಾಶ ನೀಡಿದೆ. ಈ ಪಟ್ಟಿಯಲ್ಲಿ ಕರ್ನಾಟಕದ 5 ಶಿಕ್ಷಣ ಸಂಸ್ಥೆಗಳೂ ಸೇರಿವೆ.
ಕರ್ನಾಟಕದ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯ, ಜೈನ್ ವಿಶ್ವವಿದ್ಯಾಲಯ, ಮಂಗಳೂರಿನ ಯೆನೆಪೋಯ ವಿಶ್ವವಿದ್ಯಾಲಯ, ಕೆ.ಇ.ಎಲ್. ಅಕಾಡೆಮಿಗಳಿಗೆ ನವೆಂಬರ್ 30 ಗುರುವಾರದ ಸಂಜೆ 4ರೊಳಗೆ ಬದಲಿ ಹೆಸರು ಸೂಚಿಸುವಂತೆ ಯುಜಿಸಿ ಆದೇಶಿಸಿದೆ. ಈ ಆದೇಶ ಪಾಲನೆ ಮಾಡದಿದ್ದರೆ ಯೂನಿವರ್ಸಿಟಿ ಹೆಸರನ್ನು ಕಳಚಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದೆ.
ಉಳಿದಂತೆ ಬೆಳಗಾಂನ ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಅಂಡ್ ರಿಸರ್ಚ್, ಜೆಎನ್ ಮೆಡಿಕಲ್ ಕಾಲೇಜ್ ಮತ್ತು ಉಡುಪಿಯ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಸಂಸ್ಥೆಗಳು ತಮ್ಮ ಹೆಸರಿನ ಜತೆಗಿರುವ ಯೂನಿವರ್ಸಿಟಿ ಹೆಸರನ್ನು ಕಳಚಿ, ಈ ಮುಂಚೆ ಇದ್ದ ಹಾಗೆ ಹೆಸರನ್ನು ಬಳಸುವಂತೆ ಸೂಚಿಸಲಾಗಿದೆ.
ದೇಶದ ಇತರ ಡೀಮ್ಡ್ ಯುನಿವರ್ಸಿಟಿಗಳಾದ ಫರಿದಾಬಾದ್ನ ಲಿಂಗಾಯತ್ ಯುನಿವರ್ಸಿಟಿ, ಹರ್ಯಾಣದ ಮಹರ್ಷಿ ಮಾರ್ಕಂಡೆಶ್ವರ ಯುನಿವರ್ಸಿಟಿ, ಪುಣೆಯ ಸಿಂಬಿಯೊಸಿಸ್ ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯ, ಹರಿದ್ವಾರದ ಗುರುಕುಲ ಕಂಗ್ರಿ ವಿಶ್ವವಿದ್ಯಾಲಯ ಸೇರಿದಂತೆ ಇತರ ವಿಶ್ವವಿದ್ಯಾಲಯಗಳಿಗೆ ಬದಲಿ ಹೆಸರಿಗಾಗಿ ಹೊಸದಾಗಿ ಅರ್ಜಿ ಸಲ್ಲಿಸುವಂತೆ ನೋಟಿಸ್ ನೀಡಿದೆ..
ಡೀಮ್ಡ್ ಶಿಕ್ಷಣ ಸಂಸ್ಥೆಗಳು ಇನ್ನೂ ಮುಂದೆ ತಮ್ಮ ಹೆಸರಿನ ಮುಂದೆ 'ವಿಶ್ವವಿದ್ಯಾಲಯ' ಎಂದು ಹಾಕಿಕೊಳ್ಳುವಂತಿಲ್ಲ. ಡೀಮ್ಡ್ ಶಿಕ್ಷಣ ಸಂಸ್ಥೆಗಳು ಪದವಿ ನೀಡಬಹುದು, ಆದರೆ ಯುಜಿಸಿ ಕಾಯ್ದೆಯ ಕಲಂ 23ರನ್ವಯ ತಮ್ಮ ಸಂಸ್ಥೆಯ ಹೆಸರಿನ ಮುಂದೆ 'ವಿಶ್ವವಿದ್ಯಾಲಯ' ಎಂದು ಬಳಸುವಂತಿಲ್ಲ ಎಂದು ಹೇಳಿ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ್ 3.11.2017 ರಂದು ಯುಜಿಸಿಗೆ ಆದೇಶ ನೀಡಿತ್ತು.
ಅದರಂತೆ ನ.10/11 ರಂದು ದೇಶದ್ಯಾತ ಇರುವ ಡೀಮ್ಡ್ ಶಿಕ್ಷಣ ಸಂಸ್ಥೆಗಳಿಗೆ `ಯುನಿವರ್ಸಿಟಿ' ಪದ ಬಳಸದಂತೆ ಆದೇಶ ನೀಡಿ, ಪರ್ಯಾಯ ಹೆಸರು ಸಲ್ಲಿಸುವಂತೆ 15 ದಿನಗಳ ಕಾಲಾವಕಾಶವನ್ನೂ ನೀಡಿತ್ತು. ಆದರೆ ಡೀಮ್ಡ್ ಶಿಕ್ಷಣ ಸಂಸ್ಥೆಗಳು ಈ ಕುರಿತು ಯಾವುದೇ ಕ್ರಮ ಕೈಗೊಳ್ಳದ ಕಾರಣ ಅಂತಿಮ ಆದೇಶ ನೀಡಿ ಯುಜಿಸಿ ಅಂತಿಮ ಗಡುವು ನೀಡಿದೆ.