ಕಲಬುರ್ಗಿ: ಕಳೆದ ವರ್ಷ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಡೆಡ್ಲಿ ಗೇಮ್ ಬ್ಲೂ ವೇಲ್ ರಾಜ್ಯದ ಇನ್ನೊಬ್ಬ ಬಾಲಕನನ್ನು ಬಲಿತೆಗೆದುಕೊಂಡಿದೆ. ಏಳನೇ ತರಗತಿಯಲ್ಲಿ ಓದುತ್ತಿದ್ದ ಸಮರ್ಥ್(12) ಸಾವಿಗೆ ಶರಣಾದ ಬಾಲಕನಾಗಿದ್ದು, ಈತ ಕೆಲ ದಿನಗಳಿಂದ ಡೆಡ್ಲಿ ಗೇಮ್ ಆಗಿರುವ ಬ್ಲೂ ವೇಲ್ ಆಟವಾಡುತ್ತಿದ್ದ. ಶಾಲೆ ವಿದ್ಯಾಭ್ಯಾಸ ಬಿಟ್ಟು ಮಾನಸಿಕವಾಗಿ ಕುಗ್ಗಿದವನಂತೆ ವರ್ತಿಸುತ್ತಿದ್ದ ಎನ್ನಲಾಗಿದೆ.
ಮಾರಣಾಂತಿಕ ಬ್ಲೂ ವೇಲ್ ಗೇಮ್ ಗೆ ಕಲಬುರಗಿಯ ಮಹಾಲಕ್ಷ್ಮಿ ಲೇಔಟ್ ನ ಬಾಲಕನೊಬ್ಬ ಬಲಿಯಾಗಿದ್ದು ರಾಜ್ಯಾದ್ಯಂತ ಆತಂಕ ಸೃಷ್ಟಿಸಿದೆ. ಸಮರ್ಥ್ ಸೇಂಟ್ ಮೇರಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದ. ತಾಯಿ ಹೊರ ಹೋಗಿದ್ದಾಗ ಸಮರ್ಥ್ ಆಟವಾಡುವ ಅಂತಿಮ ಟಾಸ್ಕ್ ನಂತೆ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಬ್ಲೂ ವೇಲ್ ಒಂದು ಆನ್ ಲೈನ್ ಗೇಮ್ ಆಗಿದ್ದು 50 ಅಪಾಯಕಾರಿ ಟಾಸ್ಕ್ ಗಳನ್ನು ಹೊಂದಿರುತ್ತದೆ. ಕೊನೆಯ ಟಾಸ್ಕ್ ನಲ್ಲಿ ಆಟಗಾರ ಆತ್ಮಹತ್ಯೆಗೆ ಶರಣಾಗಬೇಕು. ಈ ವಿಚಿತ್ರ, ಅಪಾಯಕಾರಿ, ವಿಕೃತ ಆಟಕ್ಕೆ ಯುವ ಜನಾಂಗ ಬಲಿಯಾಗುತ್ತಿರುವುದು ಸರ್ಕಾರಕ್ಕೂ, ನ್ಯಾಯಾಲಯಕ್ಕೂ ತಲೆನೋವಾಗಿದೆ.